Advertisement

ವೈದ್ಯರ ಮುಷ್ಕರ: ಕರಾವಳಿಯಲ್ಲಿ  ಆಂಶಿಕ ಪ್ರತಿಕ್ರಿಯೆ

09:45 AM Jul 29, 2018 | Harsha Rao |

ಉಡುಪಿ/ಮಂಗಳೂರು: ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘಟನೆ ನೀಡಿದ ಕರೆಯಂತೆ ಶನಿವಾರ ಉಡುಪಿ ಮತ್ತು ದ.ಕ.  ಜಿಲ್ಲೆಗಳಲ್ಲಿ ಕೆಲವು ಖಾಸಗಿ ವೈದ್ಯರು ಹೊರ‌ಹೋಗಿ ವಿಭಾಗಗಳಲ್ಲಿ ಸೇವೆ ಒದಗಿಸದೆ ಮುಷ್ಕರ ನಡೆಸಿದರು. ಒಟ್ಟಾರೆಯಾಗಿ ಉಭಯ ಜಿಲ್ಲೆಗಳಲ್ಲಿ ಮುಷ್ಕರಕ್ಕೆ ಆಂಶಿಕ ಪ್ರತಿಕ್ರಿಯೆ ದೊರೆತಿದೆ.

Advertisement

ಅಜ್ಜರಕಾಡು ಆಸ್ಪತ್ರೆ ಆಸರೆ
ಉಡುಪಿ ನಗರದ ಹಲವಾರು ಮಂದಿ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆದುಕೊಂಡರು. ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಭಾರೀ ಹೆಚ್ಚಳವಾಗಿರಲಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಅಲ್ಲಿ ಚಿಕಿತ್ಸೆ ದೊರೆಯದ ಕೆಲವರು ಜಿಲ್ಲಾಸ್ಪತ್ರೆಗೆ ಬಂದಿದ್ದರು. ಹೊರರೋಗಿ ವಿಭಾಗದಲ್ಲಿ ಸಂಜೆಯವರೆಗೆ 548 ಮಂದಿ ನೋಂದಾಯಿಸಿದ್ದರು. ಎಲ್ಲ ವಿಭಾಗಗಳ ವೈದ್ಯರು ಸೇವೆ ಸಲ್ಲಿಸಿದರು. ರಜೆಯಲ್ಲಿ ತೆರಳಿದ್ದ ಸಿಬಂದಿಯನ್ನು ಕೂಡ ಕರೆಸಿಕೊಳ್ಳಲಾಗಿತ್ತು. ರೋಗಿಗಳಿಗೆ ವಿಳಂಬವಾಗದಂತೆ ಸೇವೆ ಒದಗಿಸಲಾಗಿದೆ ಎಂದು ಜಿಲ್ಲಾ ಸರ್ಜನ್‌ ಡಾ| ಮಧುಸೂದನ್‌ ನಾಯಕ್‌ ತಿಳಿಸಿದ್ದಾರೆ.

“ಉಡುಪಿ ಜಿಲ್ಲೆಯಲ್ಲಿ ಸುಮಾರು 400ರಿಂದ 500 ಮಂದಿ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡರು. ಸಂಜೆ 6ರ ವರೆಗೂ ಒಪಿಡಿಯನ್ನು ತೆರೆದಿರಲಿಲ್ಲ. ತುರ್ತುಸೇವೆ ಹಾಗೂ ಇತರ ವಿಭಾಗಗಳ ಸೇವೆಗಳನ್ನು ನೀಡಲಾಯಿತು. ಜಿಲ್ಲೆಯಲ್ಲಿ ಮುಷ್ಕರ  ಯಶಸ್ವಿಯಾಗಿದೆ’ ಎಂದು ಭಾರತೀಯ ವೈದ್ಯಕೀಯ ಸಂಘಟನೆ ಉಡುಪಿ ಕರಾವಳಿಯ ಅಧ್ಯಕ್ಷ ಡಾ| ವೈ. ಸುದರ್ಶನ್‌ ರಾವ್‌ ಪ್ರತಿಕ್ರಿಯಿಸಿದ್ದಾರೆ.

ಸಂಘಟನೆಯ ನೇತೃತ್ವದಲ್ಲಿ ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರ ಮುಖಾಂತರ ಪ್ರಧಾನಿ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು.

ಕೆಎಂಸಿ ಯಥಾಸ್ಥಿತಿ 
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಎಂದಿನಂತೆ ಸೇವೆ ನೀಡಲಾಯಿತು. ಕುಂದಾಪುರ ತಾಲೂಕಿನಲ್ಲಿಯೂ ಒಪಿಡಿ ಸ್ಥಗಿತ ಕರೆಗೆ ಪೂರ್ಣ ಪ್ರತಿಕ್ರಿಯೆ ದೊರೆಯಲಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಪ್ರತಿದಿನದಂತೆಯೇ ರೋಗಿಗಳ ಸಂಖ್ಯೆ ಇತ್ತು. ಕಾರ್ಕಳದಲ್ಲಿ ಕೆಲವು ಕ್ಲಿನಿಕ್‌ಗಳಲ್ಲಿ ಮಾತ್ರ ಒಪಿಡಿ ಸೇವೆ ಸ್ಥಗಿತವಾಗಿತ್ತು. 

Advertisement

ಸೇವೆ ಅಬಾಧಿತ
ಮಂಗಳೂರು:
ಇಲ್ಲಿನ ಖಾಸಗಿ ವೈದ್ಯರು ನಗರದ ಐಎಂಎ ಸಭಾಂಗಣ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ವೈದ್ಯರ ಮುಷ್ಕರದಿಂದ ನಗರದ ಕೆಲವು ಆಸ್ಪತ್ರೆಗಳಲ್ಲಿ ವೈದ್ಯರು ಅಲಭ್ಯವಾದರೂ ರೋಗಿಗಳಿಗೆ ಯಾವುದೇ ಸಮಸ್ಯೆ ಉಂಟಾಗಲಿಲ್ಲ. 

ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಎಲ್ಲ ವಿಭಾಗಗಳು ಕಾರ್ಯಾಚರಿಸಿದ್ದರೆ, ಕೆಎಂಸಿಯಲ್ಲಿಯೂ ರೋಗಿಗಳಿಗೆ ಸೇವೆ ಲಭ್ಯವಿತ್ತು. ಎ.ಜೆ. ಆಸ್ಪತ್ರೆಯಲ್ಲಿ ಬೆಳಗ್ಗಿನ ಹೊತ್ತು ಹೊರ ರೋಗಿ ವಿಭಾಗ ತೆರೆದಿದ್ದು, ಬಳಿಕ ಈ ವಿಭಾಗದಲ್ಲಿ ಸೇವೆ ಲಭ್ಯವಿರಲಿಲ್ಲ. ನಗರದ ವಿವಿಧ ಆಸ್ಪತ್ರೆಗಳ ವೈದ್ಯರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೂ, ರೋಗಿಗಳಿಗೆ ಚಿಕಿತ್ಸೆ, ತಪಾಸಣೆಗಳಿಗೆ ಯಾವುದೇ ಸಮಸ್ಯೆಯಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next