ಕಾಸರಗೋಡು: ಪಶ್ಚಿಮ ಬಂಗಾಲದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಭಾರತೀಯ ವೈದ್ಯಕೀಯ ಸಂಸ್ಥೆ (ಐ.ಎಂ.ಎ) ದೇಶವ್ಯಾಪಿ ಕರೆ ನೀಡಿರುವ ಮುಷ್ಕರ ಕೇರಳಾದ್ಯಂತ ನಡೆಯಿತು. ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಕಾರ್ಯಚಟುವಟಿಕೆಗಳನ್ನು ಪೂರ್ಣವಾಗಿ ಅಸ್ತವ್ಯಸ್ತಗೊಳಿಸಿತುಕಾಸರಗೋಡು ಜಿಲ್ಲೆ ಸಹಿತ ರಾಜ್ಯದ ಎಲ್ಲ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಎಲ್ಲ ವೈದ್ಯರು ಸೋಮವಾರ ನಡೆದ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಅತ್ಯಗತ್ಯ ಸೇವೆಗಳನ್ನು ಮುಷ್ಕರದಿಂದ ಹೊರತುಪಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಸೋಮವಾರ ಬೆಳಗ್ಗಿನಿಂದ 24 ಗಂಟೆಗಳ ತನಕ ಹೊರ ರೋಗಿ (ಒ.ಪಿ) ವಿಭಾಗದ ಸೇವೆಯನ್ನು ಬಹಿಷ್ಕರಿಸಿ ಮುಷ್ಕರದಲ್ಲಿ ಭಾಗವಹಿಸಿದ್ದಾರೆ.
ಕೇರಳದ ಎಲ್ಲ ಸರಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಕೆ.ಜಿ.ಎಂ.ಒ.ಎ. ನೇತೃತ್ವದಲ್ಲಿ ಸರಕಾರಿ ವೈದ್ಯರು ಬೆಳಗ್ಗೆ 8 ರಿಂದ 10 ಗಂಟೆಯ ತನಕ ಹೊರ ವಿಭಾಗ (ಒ.ಪಿ) ಗಳನ್ನು ಬಹಿಷ್ಕರಿಸಿದರು. ಬಳಿಕ ಬೆಳಗ್ಗೆ 10 ಗಂಟೆಯಿಂದ ಒ.ಪಿ. ವಿಭಾಗದ ಸೇವೆಯಲ್ಲಿ ತೊಡಗಿದರು. ಇದೇ ವೇಳೆ ಸರಕಾರಿ ಆಸ್ಪತ್ರೆಗಳ ತುರ್ತು ಸೇವೆ ಇತ್ಯಾದಿಗಳ ವಿಭಾಗಗಳನ್ನು ಮುಷ್ಕರದಿಂದ ಹೊರತುಪಡಿಸಲಾಗಿದೆ.
ಮುಷ್ಕರ ನಿರತ ವೈದ್ಯರು ಕಾಸರಗೋಡು ಜನರಲ್ ಆಸ್ಪತ್ರೆ ಮತ್ತು ಹೊಸದುರ್ಗದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಬೆಳಗ್ಗೆ 8ರಿಂದ 10 ಗಂಟೆಯ ತನಕ ಪ್ರತಿಭಟನ ಸಭೆ ನಡೆಸಿದರು. ಇದರಂತೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆದ ಪ್ರತಿಭಟನೆ ಸಭೆಯನ್ನು ಕೆ.ಜಿ.ಎಂ.ಒ.ಎ. ರಾಜ್ಯ ಸಮಿತಿ ಸದಸ್ಯ ಡಾ| ಜಮಾಲ್ ಅಹಮ್ಮದ್ ಉದ್ಘಾಟಿಸಿದರು. ಕೆ.ಜಿ.ಎಂ.ಒ.ಎ. ಜಿಲ್ಲಾಧ್ಯಕ್ಷ ಡಾ|ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದರು. ಡಾ| ರಾಜಾರಾಮ್, ಡಾ| ಶಮೀಮಾ, ಡಾ| ಕೆ.ಕೆ. ಶ್ಯಾನ್‌ಭೋಗ್, ಡಾ| ಅಬ್ದುಲ್ ಸತ್ತಾರ್, ಅರಿವಳಿಕೆ ವೈದ್ಯರ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ| ವೆಂಕಟಗಿರಿ, ಡಾ| ವೆಂಕಟ ತೇಜಸ್ವಿ ಮೊದಲಾದವರು ಮಾತನಾಡಿದರು. ಐ.ಎಂ.ಎ. ಜಿಲ್ಲಾ ಕೋ ಆರ್ಡಿನೇಟರ್ ಡಾ| ಜನಾದìನ ನಾಯ್ಕ ಸಿ.ಎಚ್. ಸ್ವಾಗತಿಸಿದರು. ಐಎಂಎ ಕಾಸರಗೋಡು ಘಟಕ ಅಧ್ಯಕ್ಷ ಡಾ| ನಾರಾಯಣ ಪ್ರದೀಪ್ ವಂದಿಸಿದರು.
ಸರಕಾರಿ ಆಸ್ಪತ್ರೆಗೆ ರೋಗಿಗಳು ಚಿಕಿತ್ಸೆಗಾಗಿ ಸೋಮವಾರ ಬೆಳಗ್ಗಿನಿಂದಲೇ ಬಂದಿದ್ದರು. ಒ.ಪಿ. ವಿಭಾಗ ಕಾರ್ಯವೆಸಗದೇ ಇದ್ದ ಕಾರಣ ಬೆಳಗ್ಗೆ 10 ಗಂಟೆ ತನಕ ಕಾಯಬೇಕಾಗಿ ಬಂತು. ಅದರಿಂದಾಗಿ ರೋಗಿಗಳು ತೀವ್ರ ಸಂಕಷ್ಟ ಎದುರಿಸಬೇಕಾಯಿತು.
10 ಗಂಟೆಗೆ ಒ.ಪಿ. ಸೇವೆ ಆರಂಭ ಗೊಂಡಾಗಲೇ ರೋಗಿಗಳ ಸಂಕಷ್ಟ ಪರಿಹಾರಗೊಳ್ಳತೊಡಗಿತು.
ಖಾಸಗಿ ಆಸ್ಪತ್ರೆಗಳ ವೈದ್ಯರು 24 ತಾಸುಗಳ ತನಕ ಮುಷ್ಕರದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಭಾರೀ ಸಂಕಷ್ಟ ಎದುರಿಸಬೇಕಾಯಿತು. ಚಿಕಿತ್ಸೆ ಲಭಿಸದೆ ರೋಗಿಗಳು ಹಿಂದಿರುಗುವ ದೃಶ್ಯಗಳೂ ಹೆಚ್ಚಿನ ಖಾಸಗಿ ಆಸ್ಪತ್ರೆಗಳಲ್ಲಿ ಗೋಚರಿಸಿದವು. ಆದರೆ ಆಸ್ಪತ್ರೆ ಯಲ್ಲಿ ಒಳರೋಗಿಗಳಾಗಿ ದಾಖಲಾಗಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತುರ್ತು ಸೇವಾ ಘಟಕಗಳನ್ನು ಮುಷ್ಕರದಿಂದ ಹೊರತುಪಡಿಸಲಾಗಿದೆ.