Advertisement

ವೈದ್ಯರ ಮುಷ್ಕರ: ಪುತ್ತೂರಿನ ವಿದ್ಯಾರ್ಥಿನಿ ಬಲಿ

10:59 AM Nov 18, 2017 | Team Udayavani |

ಕಬಕ: ಖಾಸಗಿ ಆಸ್ಪತ್ರೆಗಳ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ಯುವತಿಯೊಬ್ಬರು ಬಲಿಯಾಗಿದ್ದಾರೆ. ಕಬಕ ವಿದ್ಯಾಪುರ ನಿವಾಸಿ, ವಿವೇಕಾನಂದ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ವಿದ್ಯಾಪುರ ದಿ| ಗಣೇಶ್‌ ಆಚಾರ್ಯ- ಗೀತಾ ದಂಪತಿಯ ಪುತ್ರಿ ಪೂಜಾ (18) ಮೃತಪಟ್ಟವರು. ಅವರು ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

Advertisement

ಒಂದೂವರೆ ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪೂಜಾ, 2017ರ ಜುಲೈ ವರೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಮಾಡಿಸಿಕೊಂಡಿದ್ದಾರೆ. ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವಾರಕ್ಕೆ ಎರಡು ಬಾರಿ ಡಯಾ ಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದರು. ಮಂಗಳವಾರ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಮಾಡಿಸಿಕೊಂಡಿದ್ದು, ಹಿಮೋಗ್ಲೋಬಿನ್‌ ಅಂಶ ಕಡಿಮೆ ಇರುವುದು ಬೆಳಕಿಗೆ ಬಂದಿದ್ದು, ವೈದ್ಯ ರನ್ನು ಸಂಪರ್ಕಿಸುವಂತೆ ತಿಳಿಸಲಾಗಿತ್ತು. ಮುಷ್ಕರ ಹಿನ್ನೆಲೆ ಯಲ್ಲಿ ವೈದ್ಯರು ಸಿಗದ ಕಾರಣ, ಅವರ ಸಹಾ ಯಕರು ನೀಡಿದ ಔಷಧ ಪಡೆದುಕೊಂಡು ಮರಳಿದ್ದರು.

ಗುರುವಾರ ಸ್ವಲ್ಪ ಅನಾರೋಗ್ಯ ಕಾಣಿಸಿಕೊಂಡರೂ ಕಾಲೇಜಿಗೆ ತೆರಳಿದ್ದರು. ರಾತ್ರಿ ಬಂದು ಹೋಂ ವರ್ಕ್‌ ಕೂಡ ಮುಗಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಸ್ಥಿತಿ ಗಂಭೀರವಾಗಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತಂದಿದ್ದು, ಆಸ್ಪತ್ರೆ ಗೇಟ್‌ ಹಾಕಿದ್ದ ಹಿನ್ನೆಲೆಯಲ್ಲಿ, ಅಲ್ಲಿಂದಲೇ ಹಿಂದಿರುಗಿದ್ದಾರೆ. ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಪೂಜಾ ಕೊನೆಯುಸಿರೆಳೆದರು ಎಂದು ಹೇಳಲಾಗಿದೆ.

ವೈದ್ಯರ ವಿರುದ್ಧ  ದೂರು
ವರ್ಷದ ಹಿಂದೆ ಪೂಜಾ ಅವರ ತಂದೆ ಮೃತ ಪಟ್ಟಿದ್ದರು. ಮನೆ ನಿರ್ವಹಣೆಗೆ ತಾಯಿಯ ಕೂಲಿ ಕೆಲಸವೇ ಆಧಾರ. ಪೂಜಾ ಸಾವಿಗೆ ವೈದ್ಯರ ಮುಷ್ಕರವೇ ಕಾರಣ ಎಂದು ಆರೋಪಿಸಿ ಪುತ್ತೂರು ನಗರ ಠಾಣೆಗೆ ದೂರು ನೀಡ ಲಾಗಿದೆ. ತಹಶೀಲ್ದಾರ್‌ ಅನಂತ ಶಂಕರ್‌, ಉಪ ತಹಶೀಲ್ದಾರ್‌ ಶ್ರೀಧರ್‌, ಗ್ರಾಮ ಲೆಕ್ಕಿಗ ಲಕ್ಷ್ಮೀಪತಿ ಮನೆಗೆ ಭೇಟಿ ನೀಡಿದ್ದಾರೆ.

ಮೃತದೇಹವಿಟ್ಟು  ಪ್ರತಿಭಟನೆ
ಶುಕ್ರವಾರ ಸಂಜೆ ಪೂಜಾ ಮೃತದೇಹವನ್ನು ಪುತ್ತೂರು ಮಿನಿ ವಿಧಾನಸೌಧ ಮುಂಭಾಗ ಇಟ್ಟು ಪ್ರತಿಭಟನೆ ನಡೆಸ ಲಾಯಿತು. ಪೂಜಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಖಾಸಗಿ ಆಸ್ಪತ್ರೆ ವೈದ್ಯರು ತತ್‌ಕ್ಷಣ ಕರ್ತವ್ಯಕ್ಕೆ ಹಾಜ ರಾಗುವಂತೆ ಸರಕಾರ ಆದೇಶಿಸಬೇಕು ಎಂದು ಆಗ್ರಹಿಸಲಾಯಿತು. ತಹಶೀಲ್ದಾರ್‌ ಅನಂತಶಂಕರ ಅವರಿಗೆ ಮನವಿ ನೀಡಿ, ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ರಾಜ್ಯ ಸರಕಾರದ ಹಠಮಾರಿತನಕ್ಕೆ ಜನಸಾಮಾನ್ಯರು ಬೆಲೆ ತೆರುವಂತಾಗಿದೆ. ವೈದ್ಯರ ಜತೆ ಸಂಧಾನ ನಡೆಸಿ, ಅವರಿಗೂ ನ್ಯಾಯ ನೀಡಲಿ ಎಂದರು.

ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಪುರುಷೋತ್ತಮ ಗೌಡ ಮುಂಗ್ಲಿಮನೆ ಮಾತನಾಡಿ, ವೈದ್ಯರ ಮುಷ್ಕರಕ್ಕೆ ಜಿಲ್ಲೆಯ ಮೊದಲ ಬಲಿ ಇದಾಗಿದೆ. ನಾಳೆಯೇ ಎಲ್ಲ ವೈದ್ಯರು ಕರ್ತವ್ಯಕ್ಕೆ ಹಾಜರಾಗುವಂತೆ ಸರಕಾರ ಆದೇಶಿಸಬೇಕು. ಕೂಲಿ ಕಾರ್ಮಿಕ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಹಿಂದೂ ಮುಖಂಡರಾದ ಅರುಣ್‌ ಕುಮಾರ್‌ ಪುತ್ತಿಲ, ಸಹಜ್‌ ರೈ ಬಳಜ್ಜ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್‌, ನಗರಸಭೆ ಸದಸ್ಯ ಜೀವಂಧರ್‌ ಜೈನ್‌, ಮುಕುಂದ ಗೌಡ ಮೊದಲಾದವರು ಉಪಸ್ಥಿತರಿದ್ದರು.

2016ರ ನವಂಬರ್‌ನಿಂದ 2017ರ ಜುಲೈ ವರೆಗೆ ಪೂಜಾ ಇಲ್ಲಿ ಡಯಾಲಿಸಿಸ್‌ ಮಾಡಿಸಿ ಕೊಂಡಿದ್ದಾರೆ. ಬಳಿಕ ಸರಕಾರಿ ಆಸ್ಪತ್ರೆಗೆ ತೆರಳಿದ್ದಾರೆ. ಉಳಿದಂತೆ ಹೊರ ರೋಗಿ ಯಾಗಿ ಡಾ| ಜನಾರ್ದನ್‌ ಕಾಮತ್‌ ಅವರ ಬಳಿಗೆ ವಾರಕ್ಕೊಮ್ಮೆ ಚಿಕಿತ್ಸೆಗೆ ಬರು ತ್ತಿದ್ದರು. ಶುಕ್ರವಾರ ಬೆಳಗ್ಗೆ ಆಸ್ಪತ್ರೆ ಮುಂಭಾಗ ದವರೆಗೆ ಪೂಜಾ ಅವರನ್ನು ಕರೆ ತರ ಲಾಗಿತ್ತು ಎಂದು ಸೆಕ್ಯುರಿಟಿ ತಿಳಿ ಸಿದ್ದಾರೆ. ವೈದ್ಯರು ಇದ್ದಾರೆಯೇ ಎಂದು ವಿಚಾರಿಸಿ ತೆರಳಿದ್ದಾರೆ. ಒಂದು ವೇಳೆ ಆಸ್ಪತ್ರೆ ಒಳಬರುತ್ತಿದ್ದರೆ ಚಿಕಿತ್ಸೆ ನೀಡಲು ತಯಾರಿದ್ದೆವು.     
– ಡಾ| ಭಾಸ್ಕರ್‌ ರಾವ್‌ ಆಡಳಿತ ನಿರ್ದೇಶಕ, ಪುತ್ತೂರು ಸಿಟಿ ಆಸ್ಪತ್ರೆ

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್‌ ಘಟಕ ಇದೆ. ಇನ್ನೊಂದು ಡಿಸೆಂಬರ್‌ ಬಳಿಕ ಲಭ್ಯ ಆಗಬಹುದು. ಪೂಜಾ ಅವರಿಗೂ ಡಯಾಲಿಸಿಸ್‌ ನೀಡ ಲಾಗುತ್ತಿತ್ತು. ಆದರೆ ಸಾವು ಹೇಗೆ ಸಂಭವಿ ಸಿತು ಎಂಬ ಬಗ್ಗೆ  ಮಾಹಿತಿ ಇಲ್ಲ.
– ಡಾ| ವೀಣಾ, ಆಡಳಿತ ವೈದ್ಯಾಧಿಕಾರಿ, ಪುತ್ತೂರು ಸರಕಾರಿ ಆಸ್ಪತ್ರೆ

Advertisement

Udayavani is now on Telegram. Click here to join our channel and stay updated with the latest news.

Next