Advertisement

ಪ್ರಾಥಮಿಕ ಆರೋಗ್ಯ ಕೇಂದ್ರ : ಕಾಡಲಿದೆ ವೈದ್ಯರ ಕೊರತೆ

04:10 AM May 29, 2018 | Karthik A |

ವಿಟ್ಲ: ಸರಕಾರದ ನಿಯಮಾನುಸಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 50 ಸಾವಿರ ರೂ., ಸಮುದಾಯ ಆರೋಗ್ಯ ಕೇಂದ್ರಕ್ಕೆ 3 ಲಕ್ಷ ರೂ., ತಾ| ಆರೋಗ್ಯ ಕೇಂದ್ರಕ್ಕೆ 10 ಲಕ್ಷ ರೂ.ಗಳ ಅನುದಾನ ಔಷಧಕ್ಕೆ ಲಭ್ಯವಾಗುತ್ತದೆ. ಆದುದರಿಂದ ಎಲ್ಲ ಆಸ್ಪತ್ರೆಗಳಲ್ಲೂ ಔಷಧಕ್ಕೆ ಕೊರತೆ ಉಂಟಾಗುವುದಿಲ್ಲ. ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೂ ಈ ಅನುದಾನ ಲಭ್ಯವಾಗಿದೆ. ಆದುದರಿಂದ ಔಷಧಕ್ಕೆೆ ಕೊರತೆ ಇಲ್ಲ. ವಾಸ್ತವವಾಗಿ ಇಲಾಖೆ ಜೀವರಕ್ಷಕ ಆವಶ್ಯಕತೆಗೆ ಬೇಕಾದ ಔಷಧಕ್ಕೆೆ ಕೊರತೆ ಇಲ್ಲದಂತೆ ಮುನ್ನೆಚ್ಚರಿಕೆ ವಹಿಸಿದೆ. ಆದರೆ ಇನ್ನು ವೈದ್ಯರ ಕೊರತೆ ಕಾಡಲಿದೆ.

Advertisement

ಇನ್ನು ವೈದ್ಯರ ಸಮಸ್ಯೆ ಕಾಡಲಿದೆ
ಮೇ ತಿಂಗಳ ಕೊನೆಗೆ ವಿಟ್ಲ ಆಸುಪಾಸಿನಲ್ಲಿ ವೈದ್ಯರ ಸಮಸ್ಯೆ ಆರಂಭವಾಗಲಿದೆ. ಕನ್ಯಾನ ಆಸ್ಪತ್ರೆಯ ಡಾ| ಶ್ವೇತಾ, ಅಡ್ಯನಡ್ಕ ಆಸ್ಪತ್ರೆಯ ಡಾ| ಸುಬೋಧ್‌ ಕುಮಾರ್‌ ರೈ, ಪುಣಚ ಆಸ್ಪತ್ರೆಯ ಡಾ| ಯದುರಾಜ್‌ ಅವರು ಉನ್ನತ ವ್ಯಾಸಂಗಕ್ಕಾಗಿ ತೆರಳಲಿದ್ದಾರೆ. ವಿಟ್ಲ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಜಮೀರಾಬಾನು ಅವರು ಒಂದು ವರ್ಷ ಹಿಂದೆಯೇ ಉನ್ನತ ವ್ಯಾಸಂಗಕ್ಕಾಗಿ ತೆರಳಿದ್ದಾರೆ. ಇಂದಿನ ತನಕ ಆ ಹುದ್ದೆ ಭರ್ತಿಯಾಗಿಲ್ಲ. ಈ ರೀತಿ ಹುದ್ದೆ ಭರ್ತಿಯಾಗದೇ ಇದ್ದಲ್ಲಿ ಕನ್ಯಾನ, ಅಡ್ಯನಡ್ಕ, ಪುಣಚ ಆಸ್ಪತ್ರೆಗಳು ವೈದ್ಯರಿಲ್ಲದೇ ಅನಾಥವಾಗಲಿವೆ. ಇದು ಈ ಹಳ್ಳಿಭಾಗದ ರೋಗಿಗಳಿಗೆ ಭಾರೀ ಸಮಸ್ಯೆಯನ್ನುಂಟುಮಾಡಲಿದೆ.

ಮಳೆಗಾಲಕ್ಕೇನು ಕ್ರಮ?
ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯಾವುದೇ ರೋಗ ಆರಂಭವಾಗದಂತೆ ಮತ್ತು ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಕ್ತ ಮಾಹಿತಿ ಪತ್ರ ನೀಡಿ ಸಾರ್ವಜನಿಕರನ್ನು ಎಚ್ಚರಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಹಾಗೂ ANMಗಳು ಪ್ರಚಾರ ಕಾರ್ಯವನ್ನು ಮಾಡಿದ್ದಾರೆ ಮತ್ತು ಎಲ್ಲ ಮನೆಗಳಿಗೂ ಎಚ್ಚರಿಕೆ ನೀಡಿದ್ದಾರೆ. ತಗ್ಗು ಪ್ರದೇಶದಲ್ಲಿ ಮತ್ತು ಟಯರ್‌, ತೆಂಗಿನ ಗೆರಟೆ ಇನ್ನಿತರ ಕಡೆಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಲಾಗಿದೆ. ವಿವಿಧ ರೀತಿಯಲ್ಲಿ ಸಂದೇಶ ನೀಡಲಾಗಿದೆ.

ನಿಫಾ ಮುನ್ನೆಚ್ಚರಿಕೆ
ಕೇರಳದಲ್ಲಿರುವ ನಿಫಾ ರೋಗವು ಕರ್ನಾಟಕಕ್ಕೆ ಪ್ರವೇಶಿಸದಂತೆಯೂ ಜಾಗರೂಕತೆ ವಹಿಸಲಾಗಿದೆ. ಸಾರ್ವಜನಿಕರಿಗೆ ಈ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ತಿಳಿವಳಿಕೆ ನೀಡಲಾಗಿದೆ. ಬಂದ ರೋಗಿಗಳ ಜ್ವರದ ಬಗ್ಗೆ ಕೂಲಂಕಷವಾಗಿ ಪರೀಕ್ಷಿಸಿ, ಅಗತ್ಯವಿದ್ದಲ್ಲಿ ಹೆಚ್ಚಿನ ಪರೀಕ್ಷೆಗೆ ತಾಲೂಕು, ಜಿಲ್ಲಾ ಮಟ್ಟಕ್ಕೆ ಕಳುಹಿಸಿಕೊಡಲಾಗುತ್ತದೆ. ವಿಟ್ಲ ಆಸುಪಾಸಿನಲ್ಲಿ ಇಂತಹ ಯಾವುದೇ ದೂರುಗಳು ಸದ್ಯಕ್ಕೆ ದಾಖಲಾಗಿಲ್ಲ.

ವಿಟ್ಲ ಸಮುದಾಯ ಆಸ್ಪತ್ರೆ: ವೈದ್ಯರು ಬೇಕು
ವಿಟ್ಲ ಸಮುದಾಯ ಆಸ್ಪತ್ರೆಗೆ ಮಕ್ಕಳ ತಜ್ಞರು ಹಾಗೂ ಪ್ರಸೂತಿ ತಜ್ಞರ ಒಂದೊಂದು ಹುದ್ದೆ ಖಾಲಿ ಇದೆ. ಸ್ಟಾಫ್‌ ನರ್ಸ್‌ ಹುದ್ದೆಗಳು ಖಾಲಿ ಇವೆ. ಉಳಿದಂತೆ ಹಿರಿಯ ವೈದ್ಯಾಧಿಕಾರಿ, ಮಹಿಳಾ ವೈದ್ಯಾಧಿಕಾರಿ, ದಂತ ವೈದ್ಯರು, ಆಯುಷ್‌ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಗೆ ಪ್ರತಿದಿನವೂ 250ಕ್ಕೂ ಅಧಿಕ ರೋಗಿಗಳು ಆಗಮಿಸಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷ ಪರೀಕ್ಷೆ, ಕೊಲೆಸ್ಟ್ರಾಲ್‌ ಇನ್ನಿತರ ಪರೀಕ್ಷೆಗಳೂ ನಡೆಯುತ್ತವೆ. ಫಿಸಿಯೋಥೆರಪಿ ವ್ಯವಸ್ಥೆಯೂ ಇದೆ. ಸುಸಜ್ಜಿತ ಆಸ್ಪತ್ರೆಯ ಸುತ್ತ ಸುಂದರ ವನಗಿಡಗಳಿವೆ.

Advertisement

30 ಲಕ್ಷ ರೂ. ನಿರ್ವಹಣೆ ವೆಚ್ಚ
ಮೂಲ ಸೌಕರ್ಯಗಳನ್ನು ಕಲ್ಪಿಸಲು ಒಂದು ವರ್ಷದ ಹಿಂದಿನಿಂದ ಆಸ್ಪತ್ರೆ ನಿರ್ವಹಣೆಗಾಗಿ ಒಟ್ಟು 30 ಲಕ್ಷ ರೂ. ಅನುದಾನ ಆಸ್ಪತ್ರೆಗೆ ಬಂದಿದೆ. ಪ್ರಥಮವಾಗಿ 5 ಲಕ್ಷ ರೂ. ಬಂದಿದ್ದು, ಎರಡನೇ ಬಾರಿಯ ಅನುದಾನದಲ್ಲಿ 25 ಲಕ್ಷ ರೂ. ಸೇರಿ ಒಟ್ಟು 30 ಲಕ್ಷ ರೂ. ವೆಚ್ಚದಲ್ಲಿ ಚಿಕ್ಕ ಸಭಾಂಗಣ ಅಥವಾ ಸ್ಟೋರ್‌ ರೂಮ್‌, 2 ವೆಸ್ಟರ್ನ್ ಶೌಚಾಲಯ, ಆಸ್ಪತ್ರೆಗೆ ಸುಣ್ಣ-ಬಣ್ಣ, ಮಾಡು ರಿಪೇರಿ ಮಾಡಲಾಗುತ್ತಿದೆ.  

ನೆರೆ ಬರುವ ಪ್ರದೇಶವಲ್ಲ
ವಿಟ್ಲ ಸಮುದಾಯ ಆಸ್ಪತ್ರೆ ಅಥವಾ ಇಲ್ಲಿನ ಸುತ್ತಮುತ್ತಲ ಪ್ರದೇಶಗಳು ಭಾರೀ ನೆರೆ ಏರುವ ಪ್ರದೇಶವಲ್ಲ. ನೆರೆ ಬರುವ ಕಡೆಗಳಲ್ಲಿ ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇಲ್ಲಿ ಅಂತಹ ಸಂಭವನೀಯತೆಗಳಿಲ್ಲ. ಆದುದರಿಂದ ಇತರ ಎಚ್ಚರಿಕೆಗಳ ಬಗ್ಗೆ ಗಮನಹರಿಸಲಾಗಿದೆ. ವಿಟ್ಲ ಆಸ್ಪತ್ರೆಯಲ್ಲಿ ಸುಸಜ್ಜಿತ ಆ್ಯಂಬುಲೆನ್ಸ್‌ ಸೌಲಭ್ಯವಿದೆ. ಜತೆಗೆ 108ರ ಸೌಲಭ್ಯವೂ ಇದೆ. ಯಾವುದೇ ತುರ್ತು ಸನ್ನಿವೇಶಗಳಲ್ಲಿ ಇವೆರಡೂ ರೋಗಿಗಳ ಜೀವರಕ್ಷಕ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತವೆ.
– ಡಾ| ಪ್ರಶಾಂತ್‌ ಬಿ.ಎನ್‌. ಹಿರಿಯ ವೈದ್ಯಾಧಿಕಾರಿ

— ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next