ಬೆಂಗಳೂರು: ಜ್ವರದ ಹಿನ್ನೆಲೆಯಲ್ಲಿ ಚುಚ್ಚುಮದ್ದು ಪಡೆದಿದ್ದ ಕುಂದಾಪುರ ಮೂಲದ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಕುಂದಾಪುರ ಮೂಲದ ಅಮರ್ ಶೆಟ್ಟಿ (31) ಮೃತರು. ಈ ಸಂಬಂಧ ಮೃತರ ಸಹೋದರ ಅರವಿಂದ್ ಶೆಟ್ಟಿ ಕೆ.ಪಿ.ಅಗ್ರಹಾರದ ಭಾಗ್ಯ ಕ್ಲಿನಿಕ್‌ನ ವೈದ್ಯ ಮತ್ತು ಸಿಬ್ಬಂದಿ ವಿರುದ್ಧ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದುಬೈನಲ್ಲಿ ಎ.ಸಿ ಟೆಕ್ನಿಶಿಯನ್ ಆಗಿ ಕೆಲಸ ಮಾಡಿಕೊಂಡಿದ್ದ ಅಮರ್ ಶೆಟ್ಟಿ, ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದು ಹೊಟೇಲ್ ಉದ್ಯಮ ಆರಂಭಿಸಿದ್ದರು. ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು. ಆ.13ರಂದು ಬೆಳಗ್ಗೆ 10 ಗಂಟೆಗೆ ಜ್ವರ ಕಾಣಿಸಿಕೊಂಡ ಕಾರಣ ಕೆ.ಪಿ.ಅಗ್ರಹಾರದಲ್ಲಿರುವ ಭಾಗ್ಯ ಕ್ಲಿನಿಕ್‌ಗೆ ಹೋಗಿದ್ದಾರೆ.
ಪರೀಕ್ಷಿಸಿದ ವೈದ್ಯರು ಇಂಜೆಕ್ಷನ್ ನೀಡಿ, ಮಾತ್ರೆ ಕೊಟ್ಟು ಕಳಿಸಿದ್ದರು. ಆ ನಂತರದಲ್ಲಿ ಇಂಜೆಕ್ಷನ್ ಪಡೆದ ಜಾಗದಲ್ಲಿ ಊತವುಂಟಾಗಿ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಆ.16ರಂದು ರಾಜಾಜಿನಗರದ ಚೇತನ್ ಕ್ಲಿನಿಕ್‌ಗೆ ಕರೆದೊಯ್ದು ಪರಿಶೀಲಿಸಿದಾಗ ವೈದ್ಯರು ನೋವು ನಿವಾರಕ ಮಾತ್ರೆ ನೀಡಿ ಗ್ಲುಕೋಸ್ ಹಾಕಿ ಕಳುಹಿಸಿದ್ದರು. ಆದರೂ, ಊತ ಕಡಿಮೆಯಾಗದ ಕಾರಣ ಕೂಡಲೇ ಕೀಮ್ಸ್‌ಗೆ ಹೋಗುವಂತೆ ಸೂಚಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆ.18 ರಂದು ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದರು.
ಭಾಗ್ಯ ಕ್ಲಿನಿಕ್‌ನ ವೈದ್ಯರಾದ ರಂಜೀತ್ ಹಾಗೂ ಸಿಬ್ಬಂದಿ ಅನುಸರಿಸಿದ ಚಿಕಿತ್ಸಾ ವಿಧಾನ, ಇಂಜೆಕ್ಷನ್ ಹಾಗೂ ಮಾತ್ರೆಗಳ ಅಡ್ಡ ಪರಿಣಾಮದಿಂದ ಅಮರ್ ಶೆಟ್ಟಿ ಮೃತಪಟ್ಟಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.
ಅಂಗಾಂಗ ವೈಫಲ್ಯ: ಇಂಜೆಕ್ಷನ್ ಅಡ್ಡ ಪರಿಣಾಮದಿಂದ ಜ್ವರ ಕಡಿಮೆಯಾಗದಿದ್ದಾಗ ತಕ್ಷಣವೇ ಅಮರ್‌ಶೆಟ್ಟಿ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಿಯನ್ನು ದಾಖಲಿಸಿಕೊಂಡ ವೈದ್ಯರು ಪರೀಕ್ಷೆ ನಡೆಸಿ ಇಂಜೆಕ್ಷನ್ ಅಡ್ಡಪರಿಣಾಮದಿಂದಾಗಿ ಬಹು ಅಂಗಾಂಗ ವೈಫಲ್ಯವಾಗಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.