ಕಲಬುರಗಿ: ಸಮಾಜದ ಒಳಿತಿಗೆ, ಅಭಿವೃದ್ಧಿಗೆ ಶ್ರಮಿಸುವ ವೈದ್ಯರು ಮತ್ತು ಪತ್ರಕರ್ತರ ಸೇವೆ ಸಮಾನಾಂತರದಿಂದ ಕೂಡಿದೆ ಎಂದು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ) ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ ಹೇಳಿದರು. ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತರ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ಹಾಗೂ ವೈದ್ಯರು ದಿನದ 24 ಗಂಟೆ ಕಾಲ ಶ್ರಮಿಸುತ್ತಾರೆ. ವೈದ್ಯರು ನಿಷ್ಕಾಳಜಿ ತೋರಿದರೆ ಜೀವ ಹಾನಿಯಾಗುತ್ತದೆ. ಪತ್ರಕರ್ತ ಜವಾಬ್ದಾರಿ ಮರೆತರೆ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಇಬ್ಬರದ್ದು ಜವಾಬ್ದಾರಿ ಕಾರ್ಯವಾಗಿದೆ ಎಂದರು. ಕೋವಿಡ್ ಎರಡನೇ ಅಲೆ ವೈದ್ಯರ ಮೇಲೆ ತುಂಬಾ ಪರಿಣಾಮ ಬೀರಿದೆ. ಜೀವದ ಹಂಗು ತೊರೆದು ಹೋರಾಡಿದ್ದರಿಂದ 1500ಕ್ಕೂ ಹೆಚ್ಚು ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ.
ಬಸವೇಶ್ವರ ಆಸ್ಪತ್ರೆಯಲ್ಲಿ ಕೋವಿಡ್ ಸೇರಿದಂತೆ ಇತರ ರೋಗಗಳಿಗೆ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೇವೆಯನ್ನು ಅತ್ಯಂತ ಕಡಿಮೆ ದರದಲ್ಲಿ ನೀಡಲಾಗಿದೆ. ಇದೊಂದು ಸಂಸ್ಥೆಯಾಗಿದ್ದರಿಂದ ಇಲ್ಲಿ ಲಾಭದ ಬದಲು ಸೇವೆಗೆ ಪ್ರಾಮುಖ್ಯತೆ ನೀಡಲಾಗಿದೆ. ಬಸವೇಶ್ವರ ಆಸ್ಪತ್ರೆಯಲ್ಲಿ ಕ್ಲಿಷ್ಟಕರ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಹೇಳಿದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ ಮಾತನಾಡಿ, ಪತ್ರಕರ್ತರು ಹಾಗೂ ವೈದ್ಯರು ಸತತವಾಗಿ ದುಡಿಯುತ್ತಾರೆ.
ಪತ್ರಕರ್ತರು ಜೀವದ ಹಂಗು ತೊರೆದು ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ ಎಂದರು. ಎಚ್‌ಕೆಇ ಉಪಾಧ್ಯಕ್ಷ ಡಾ| ಶರಣಬಸಪ್ಪ ಹರವಾಳ ಮಾತನಾಡಿ, ಎರಡನೇ ಕೋವಿಡ್ ಅಲೆಯಲ್ಲಿ ಬಸವೇಶ್ವರ ಆಸ್ಪತ್ರೆಯಲ್ಲಿ 1545 ಜನರಿಗೆ ವೈದ್ಯಕೀಯ ಸೇವೆ ನೀಡಲಾಗಿದೆ ಎಂದು ಹೇಳಿದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಅವಂಟಿ ಮಾತನಾಡಿದರು.
ಒಬ್ಬರಿಗೊಬ್ಬರು ಸನ್ಮಾನ: ವೈದ್ಯರ ದಿನಾಚರಣೆ ಅಂಗವಾಗಿ ಪತ್ರಕರ್ತರ ಸಂಘದ ಪರವಾಗಿ ಕೋವಿಡ್ ವಾರಿಯರ್ಸ್‌ಗಳಾಗಿ ಶ್ರಮಿಸುತ್ತಿರುವ ಬಸವೇಶ್ವರ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ| ಬಸವರಾಜ ಮಂಗಶೆಟ್ಟಿ, ಡಾ| ಬಸವರಾಜ ಬೆಳ್ಳಿ, ಡಾ| ಎಂ.ಎಸ್. ತೆಗನೂರ, ಡಾ| ಶಿವಾನಂದ ಮೇಳಕುಂದಿ, ಡಾ| ಕವಿತಾ ಸಲಗರ, ಡಾ| ನಿತಿನ ಕುನ್ನೂರ, ಡಾ| ಕವಿರಾಜ, ಆಸ್ಪತ್ರೆ ಆಡಳಿತಾ ಧಿಕಾರಿ ಡಾ| ಎಂ.ಆರ್. ಪೂಜಾರಿ ಮತ್ತಿತರರನ್ನು ಸನ್ಮಾನಿಸಲಾಯಿತು.
ಇದೇ ರೀತಿ ಪತ್ರಿಕಾ ದಿನಾಚರಣೆ ಅಂಗವಾಗಿ ಎಚ್‌ಕೆಇ ಸಂಸ್ಥೆಯಿಂದ ಹಿರಿಯ ಪತ್ರಕರ್ತರಾದ ಟಿ.ವಿ. ಶಿವಾನಂದನ್, ಪತ್ರಕರ್ತರ ಸಂಘದ ಪದಾಧಿ ಕಾರಿಗಳು ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಎಚ್‌ಕೆಇ ಸಂಸ್ಥೆ ಕಾರ್ಯದರ್ಶಿ ಡಾ| ಜಗನ್ನಾಥ ಬಿಜಾಪುರೆ, ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಖಂಡೇರಾವ್, ಸೋಮನಾಥ ನಿಗ್ಗುಡಗಿ, ಡಾ| ಅನಿಲಕುಮಾರ ಪಟ್ಟಣ, ಡಾ| ಎನ್. ಗಿರಿಜಾ ಶಂಕರ ಮುಂತಾದವರಿದ್ದರು. ಡಾ| ಕಿರಣ ದೇಶಮುಖ, ಡಾ| ಕುಮಾರ ಅಂಗಡಿ ನಿರೂಪಿಸಿದರು. ಎಚ್‌ಕೆಇ ಆಡಳಿತ ಮಂಡಳಿ ಸದಸ್ಯರು ಹಾಗೂ ಬಸವೇಶ್ವರ ಆಸ್ಪತ್ರೆ ಸಂಚಾಲಕ ಡಾ| ಶರಣಬಸಪ್ಪ ಬಿ. ಕಾಮರೆಡ್ಡಿ ಸ್ವಾಗತಿಸಿದರು. ಪ್ರಾಂಶುಪಾಲ ಡಾ| ಶರಣಗೌಡ ಪಾಟೀಲ ವಂದಿಸಿದರು.