Advertisement
ಕೆಲ ವರ್ಷಗಳ ಹಿಂದೆ ಚಿತ್ರರಂಗದತ್ತ ಅತಿ ಹೆಚ್ಚು ಆಕರ್ಷಿತರಾಗಿದ್ದು ಇಂಜಿನಿಯರ್. ಇಂಜಿನಿಯರಿಂಗ್ ಓದಿ,ಕೈ ತುಂಬಾ ಸಂಬಳ ತರುವ ಉದ್ಯೋಗದಲ್ಲಿದ್ದ ಅದೆಷ್ಟೋ ಮಂದಿ ಇಂಜಿನಿಯರ್‌ಗಳು ಆ ಕೆಲಸಕ್ಕೆ ಗುಡ್ ಬೈ ಹೇಳಿ ಸಿನಿಮಾದತ್ತ ಬಂದಿದ್ದಾರೆ. ಇನ್ನು ಕೆಲವರು ಇಂಜಿನಿಯರಿಂಗ್ ಮುಗಿಸಿಕೊಂಡು, ಉದ್ಯೋಗದತ್ತ ಮುಖವೂ ಮಾಡದೇ ನೇರವಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಕೆಲವು ವರ್ಷಗಳ ಹಿಂದಿನ ಮಾತಾದರೆ, ಈಗ ಚಿತ್ರರಂಗಕ್ಕೆ ಮತ್ತೂಂದು ಕ್ಷೇತ್ರದ ಮಂದಿ ಆಕರ್ಷಿತರಾಗುತ್ತಿದ್ದಾರೆ. ಅದು ವೈದ್ಯರು.
Related Articles
Advertisement
ವೃತ್ತಿಯಲ್ಲಿ ನ್ಯೂರಾಲಜಿಸ್ಟ್ ಆಗಿರುವ ಡಾ. ರಾಘವೇಂದ್ರ ಚಿಕ್ಕ ವಯಸ್ಸಿನಿಂದಲೇ ಸಿನಿಮಾದ ಕಡೆಗೆ ಆಸಕ್ತಿ ಬೆಳೆಸಿಕೊಂಡವರು. ತಮ್ಮ ವೈದ್ಯಕೀಯ ಶಿಕ್ಷಣ ಪೂರ್ಣಗೊಂಡ ಬಳಿಕ, ವೈದ್ಯಕೀಯ ವೃತ್ತಿಯಲ್ಲೇ ತೊಡಗಿಕೊಂಡ ಡಾ. ರಾಘವೇಂದ್ರ, ಜೊತೆ ಜೊತೆಗೆ ಸಿನಿಮಾ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ “ಪ್ರೇಮಂ ಪೂಜ್ಯಂ’ ಚಿತ್ರವನ್ನು ನಿರ್ದೇಶಿಸಿ, ನಿರ್ದೇಶಕನಾಗಿ ಸ್ಯಾಂಡಲ್ ವುಡ್‌ನಲ್ಲಿ ಗುರುತಿಸಿಕೊಳ್ಳುತ್ತಿರುವ ಡಾ. ರಾಘವೇಂದ್ರ, ಆದಷ್ಟು ಬೇಗ ತಮ್ಮ ಚೊಚ್ಚಲ ಚಿತ್ರವನ್ನು ತೆರೆಗೆ ತರಲು ಅಣಿಯಾಗಿದ್ದಾರೆ.
ಡಾ.ಜಾಕ್ಲೀನ್ ಫ್ರಾನ್ಸಿಸ್ :
ಜಾಕ್ಲಿನ್ ಫ್ರಾನ್ಸಿಸ್ ಅವರು “ನಾನೊಂಥರ’ ಎಂಬ ಸಿನಿಮಾ ನಿರ್ಮಿಸಿದ್ದಾರೆ. ಈ ಚಿತ್ರ ಡಿಸೆಂಬರ್ 18 ರಂದು ತೆರೆಕಾಣುತ್ತಿದೆ. ತಮ್ಮದೇ ಆಸ್ಪತ್ರೆ ಹೊಂದಿರುವ ಜಾಕ್ಲಿನ್ ಅವರು ಸಿನಿಮಾ ಕ್ಷೇತ್ರದ ಮೇಲಿನ ಆಸಕ್ತಿಯಿಂದ ಬಂದವರು. “ಧ್ರುವತಾರೆ’ ಚಿತ್ರದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದಾರೆಕೂಡಾ. ವೈದ್ಯೆಯಾಗಿರುವ ಅವರು ಈಗ ಸಿನಿಮಾ ನಿರ್ಮಾಣ ಮಾಡಲು ಕಾರಣ ಚಿತ್ರದ ಕಥೆ. “ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ತುಂಬಾ ಹೊಸತನದಿಂದ ಕೂಡಿದೆ. ಹಾಗಾಗಿ, ನಿರ್ಮಾಣಕ್ಕೆ ಮುಂದಾದೆ. ಸಿನಿಮಾ ಅಂದುಕೊಂಡಂತೆ ಬಂದಿದೆ’ ಎನ್ನುತ್ತಾರೆ ಅವರು.
ಡಾ.ಶೈಲೇಶ್ :
ವೃತ್ತಿಯಲ್ಲಿ ವೈದ್ಯರಾಗಿರುವ ಶೈಲೇಶ್ ಅವರು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ವಸಿಷ್ಠ ಸಿಂಹ ಮುಖ್ಯಭೂಮಿಕೆಯಲ್ಲಿರುವ “ತಲ್ವಾರ್‌ಪೇಟೆ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟುಚಿತ್ರಗಳನ್ನುನಿರ್ಮಿಸುವ ಉದ್ದೇಶ ಅವರಿಗಿದೆ.
ಡಾ.ಕಾಮಿನಿ ರಾವ್ :
ಪ್ರಸೂತಿ ಮತ್ತು ಸ್ರೀರೋಗ ತಜ್ಞೆಯಾಗಿ ವೈದ್ಯಕೀಯ ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ವೈದ್ಯೆ ಡಾ.ಕಾಮಿನಿ ರಾವ್, ವೈದ್ಯಕೀಯ ರಂಗದ ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳಲ್ಲೂ ಗುರುತಿಸಿಕೊಂಡವರು.ಇದೀಗ ವೈದ್ಯಕೀಯ ಮತ್ತು ಸಾಮಾಜಿಕ ಕಾರ್ಯಗಳ ಜೊತೆಗೆ ಡಾ.ಕಾಮಿನಿ ರಾವ್, ಮನರಂಜನಾಕ್ಷೇತ್ರಕ್ಕೂ ಅಡಿಯಿಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಸದ್ಯ “ಪೂರ್ವಿ ಪ್ರೊಡಕ್ಷನ್ಸ್’ ಹೆಸರಿನಲ್ಲಿ ತಮ್ಮದೇ ಆದ ಸ್ವಂತ ನಿರ್ಮಾಣ ಸಂಸ್ಥೆಯನ್ನು ಆರಂಭಿಸುತ್ತಿರುವ ಡಾ.ಕಾಮಿನಿ ರಾವ್, ಈ ಮೂಲಕ ಒಂದಷ್ಟು ಮನರಂಜನಾ ಚಟುವಟಿಕೆಗಳ ಮೂಲಕ ಪ್ರೇಕ್ಷರ ಮುಂದೆ ಬರಲು ತಯಾರಿ ನಡೆಸಿದ್ದಾರೆ.
ಇನ್ನೂ ವೈದ್ಯಕೀಯಕ್ಷೇತ್ರದ ಅನೇಕರು ನಟನೆ, ಸಂಗೀತ, ಗಾಯನ … ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಇದು ಒಳ್ಳೆಯ ಬೆಳವಣಿಗೆಕೂಡಾ. ಬೇರೆ ಬೇರೆಕ್ಷೇತ್ರದವರು ಚಿತ್ರರಂಗಕ್ಕೆ ಬಂದಂತೆ ಹೊಸ ಹೊಸಆಲೋಚನೆಗಳು ಹುಟ್ಟುತ್ತವೆ. ಈ ಮೂಲಕ ಚಿತ್ರರಂಗ ಹೆಚ್ಚು ಸಮೃದ್ಧಿಯಾಗುತ್ತಾ ಹೊಗುತ್ತದೆ.
ರವಿ ರೈ