ಬೆಂಗಳೂರು: ಏಳು ತಿಂಗಳ ಗಂಡು ಶಿಶುವಿನ ಹೊಟ್ಟೆಯಲ್ಲಿದ್ದ ಭ್ರೂಣದಂತಹ ಗಡ್ಡೆ ಹೊರತೆಗೆಯುವಲ್ಲಿ ಮಣಿಪಾಲ್ ಆಸ್ಪತ್ರೆ ಯಶಸ್ವಿಯಾಗಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋರಮಂಗಲದ ಮಣಿಪಾಲ್ ಆಸ್ಪತ್ರೆಯ ವಿಭಾಗೀಯ ಮುಖ್ಯಸ್ಥ ರಾಧಾಕೃಷ್ಣ, ಪಶ್ಚಿಮ ಬಂಗಾಳದ ತನ್ಮಯ್ ಮಂಡಲ್ ಮತ್ತು ಬಿಜಿಯ ಮಂಡಲ್ ದಂಪತಿಯ ಏಳು ತಿಂಗಳ ಮಗುವಿನ ಹೊಟ್ಟೆ ಭಾಗ ಊದಿಕೊಂಡಿದ್ದನ್ನು ಗಮನಿಸಿ ತಕ್ಷಣ ಕೋಲ್ಕತಾ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ.
ವೈದ್ಯರು ಹೊಟ್ಟೆಯಲ್ಲಿ ಗಡ್ಡೆ ಇರುವುದನ್ನು ಖಚಿತ ಪಡಿಸಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೇರಿಸಲು ಸಲಹೆ ನೀಡಿದ್ದು, ಮಗುವನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದರು. ದೇಹದ ಇತರೆ ಅಂಗಗಳಿಂದ ಗಡ್ಡೆಯನ್ನು ಬೇರ್ಪಡಿಸಿ ಬಹಳ ಎಚ್ಚರಿಕೆಯಿಂದ ಶಸ್ತ್ರ ಚಿಕಿತ್ಸೆ ಮಾಡಲಾಯಿತು ಎಂದು ತಿಳಿಸಿದರು.
ಮಗುವಿನ ಹೊಟ್ಟೆಯಲ್ಲಿ 600 ಗ್ರಾಂ ತೂಕದ ಗಡ್ಡೆ ಇತ್ತು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಟೆರಟೋಮಾ ಗಡ್ಡೆ ಎಂದು ಕರೆಯಲಾಗುತ್ತದೆ. ಸತತ ಮೂರು ಗಂಟೆ ಶಸ್ತ್ರ ಚಿಕಿತ್ಸೆ ನಡೆಸಿ ಭ್ರೂಣದಂತಹ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು. ಸೂಕ್ತ ಸಮಯದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿದ್ದರಿಂದ ಮುಂಬರುವ ದಿನಗಳಲ್ಲಿ ಮಗುವಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ಮಗುವಿನ ತಂದೆ ತನ್ಮಯ್ ಮಂಡಲ್ ಮಾತನಾಡಿ, ಮಗುವಿನ ಸ್ಥಿತಿ ನೋಡಿ ಆತಂಕವಾಗಿತ್ತು. ಮಣಿಪಾಲ್ ಆಸ್ಪತ್ರೆ ವೈದ್ಯರು ನಮಗೆ ಧೈರ್ಯ ಹೇಳಿ, ಯಶಸ್ವಿಯಾಗಿ ಶಸ್ತ್ರ ಚಿಕ್ಸಿತೆ ಮಾಡಿದ್ದಾರೆ. ಸದ್ಯ ಮಗು ಆರೋಗ್ಯವಾಗಿದೆ. ಮಂಗಳವಾರ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದೇವೆ. ಮಣಿಪಾಲ್ ಆಸ್ಪತ್ರೆ ವೈದ್ಯರು ಉತ್ತಮವಾಗಿ ಚಿಕಿತ್ಸೆ ನೀಡಿ, ಚಿಕಿತ್ಸಾ ವೆಚ್ಚದಲ್ಲೂ ವಿನಾಯಿತಿ ನೀಡಿರುವುದು ಸಂತೋಷವಾಯಿತು ಎಂದು ಹೇಳಿದರು.