ಹುಣಸೂರು: ನಗರದ ಶಾಸ್ತ್ರೀ ಪಬ್ಲಿಕ್ ಶಾಲೆಯ ವತಿಯಿಂದ ವೈದ್ಯರ ದಿನಾಚರಣೆಯನ್ನು ರಕ್ತದಾನ ಶಿಬಿರ ಆಯೋಜಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.
ನಗರದ ಕಾವೇರಿ ಆಸ್ಪತ್ರೆಯ ಸಂಸ್ಥಾಪಕ ಡಾ.ಲೋಹಿತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈದ್ಯರಾಗಲು ಕೇವಲ ಕನಸು ಕಾಣುವುದಲ್ಲ, ಕನಸಿನ ಮೆಟ್ಟಿಲುಗಳನ್ನು ನನಸು ಮಾಡಲು ಪ್ರತಿ ದಿನ ಸತತ 16-18 ಗಂಟೆಗಳ ಕಾಲ ಓದುವ, ಬರೆಯುವ ನಿರಂತರ ಪ್ರಯತ್ನ ನಡೆಸಬೇಕು. ಸಾಧನೆ ಮಾಡುವ ಛಲವೊಂದಿದ್ದರೆ ಎಲ್ಲವೂ ಸಾಧ್ಯ. ತಾವು ಕೂಡಾ ಮಂಡ್ಯದ ರೈತ ಕುಟುಂಬದಲ್ಲಿ ಜನಿಸಿ, ಶಿಕ್ಷಣ ಪಡೆದು ವೈದ್ಯನಾಗಿದ್ದೇನೆ. ಯಸಸ್ಸಿಗೆ ಪ್ರಯತ್ನವೇ ಕಾರಣ ಎಂದರು.
ಕಾವೇರಿ ಆಸ್ಪತ್ರೆಯ ಮೂಳೆ ತಜ್ಞ ಡಾ.ಅರ್ಜುನ್ ಮಾತನಾಡಿ ಪೋಷಕರು ಮಕ್ಕಳ ಮೇಲೆ ದೊಡ್ಡ ಕನಸನ್ನು ಹೊತ್ತು ಜ್ಞಾನಾರ್ಜನೆಗಾಗಿ ಪೋಷಕರು ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಸತತ ಪ್ರಯತ್ನದಿಂದ ಮಾತ್ರ ಉನ್ನತ ಮಟ್ಟಕ್ಕೇರಲು ಸಾಧ್ಯ. ಮೊಬೈಲ್ ಬಳಕೆಯಿಂದ ದೂರವಿದ್ದು ಓದಬಹುದು. ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದುವುದನ್ನು ರೂಡಿಸಿಕೊಳ್ಳಿ. ನೀವು ಓದಿದ ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿ ತರುವ ಜೊತೆಗೆ ಉನ್ನತ ಹುದ್ದೆಯ ಕನಸು ಕಾಣುವಂತೆ ಸಲಹೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ರಾಧಕೃಷ್ಣ ಕೋವಿಡ್-19 ನಿಂದ ಪ್ರಪಂಚದೆಲ್ಲೆಡೆ ಸಾವು ಸಂಭವಿಸುವಾಗ, ವೈದ್ಯರು ತಮ್ಮ ಸಾವನ್ನೂ ಲೆಕ್ಕಿಸದೆ ದೇವರ ಪ್ರತಿರೂಪದಂತೆ ಸಮಾಜದ ರಕ್ಷಣೆ ಮಾಡಿದರು. ಕರೋನಾ ವಿರುದ್ಧ ಹೋರಾಡಿ ಪ್ರತಿದಿನ, ಹಗಲು ರಾತ್ರಿ ಎನ್ನದೆ ಮಾನವ ಜನಾಂಗದ ಉಳಿವಿಗಾಗಿ ಶ್ರಮಿಸಿದ ಎಲ್ಲಾ ವೈದ್ಯರಿಗೆ ಧನ್ಯವಾದ ಅರ್ಪಿಸಿ, ಶಾಲೆಯಲ್ಲಿ ವೈದ್ಯರಾಗುವ ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿ 8ನೇ ತರಗತಿ ಹಂತದಿಂದ ಪಿಯುಸಿವರೆವಿಗೆ ʼಪೀರ್ʼ ಎಂಬ ಬೇಸಿಕ್ ಫೌಂಡೇಶನ್ ಕೋರ್ಸ್ ಪ್ರಾರಂಭಿಸಲಾಗಿದೆ ಎಂದರು.
ಸಂಸ್ಥೆಯ ಪ್ರಾಂಶುಪಾಲ ರವಿಶಂಕರ್ ಮಾತನಾಡಿದರು. ಶೈಕ್ಷಣಿಕ ಸಂಯೋಜಕ ಡಾ. ಸಿ. ಗುರುಮೂರ್ತಿ ಉಪಸ್ಥಿತರಿದ್ದರು.
ಶಿಕ್ಷಕರು-ಪೋಷಕರು,ವಿದ್ಯಾರ್ಥಿಗಳಿಂದ ರಕ್ತದಾನ: ವೈದ್ಯರ ದಿನಚರಣೆ ಅಂಗವಾಗಿ ಮೈಸೂರಿನ ಜೀವನ್ ಧಾರಾ ರಕ್ತ ನಿಧಿ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಶಾಲೆಯ ಶಿಕ್ಷಕರು ಹಾಗೂ ಪೋಷಕರು, ಹಳೇ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.