ಮಂಡ್ಯ: ಪಶ್ಚಿಮ ಬಂಗಾಳದಲ್ಲಿ ವೈದ್ಯ ಪರಿಬಾಹ ಮುಖರ್ಜಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದನ್ನು ಖಂಡಿಸಿ ನಗರದಲ್ಲಿ ಶುಕ್ರವಾರ ಭಾರತೀಯ ವೈದ್ಯಕೀಯ ಸಂಘ ಮತ್ತು ಕಿರಿಯ ವೈದ್ಯರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಮಿಮ್ಸ್ ಆವರಣದಲ್ಲಿ ಜಮಾವಣೆಗೊಂಡ ವೈದ್ಯರು, ಕೈಗೆ ಕಪ್ಪುಪಟ್ಟಿ ಧರಿಸಿ ಮತ್ತು ಕೆಲ ಕಿರಿಯ ವೈದ್ಯರು ತಲೆ, ಕೈಗಳಿಗೆ ಬಿಳಿ ಬ್ಯಾಂಡೇಜ್ ಕಟ್ಟಿಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆ ಬಂದು ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು.
ಜೂ.10ರಂದು ವೃದ್ಧನಿಗೆ ಸರಿಯಾಗಿ ಚಿಕಿತ್ಸೆ ನೀಡದ ಪರಿಣಾಮ ಆತ ಸಾವನ್ನಪ್ಪಿದ್ದರೆಂದು ಆರೋಪಿಸಿ ಆತನ ಸಂಬಂಧಿಕರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಡಾ.ಪರಿಬಾಹ ಮುಖರ್ಜಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಪ್ರಕರಣ ನಡೆದಿದ್ದರೂ, ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಅಲ್ಲದೆ, ಘಟನೆ ಖಂಡಿಸಿ ಪ್ರತಿಭಟಿಸುತ್ತಿರುವ ವೈದ್ಯರ ವಿರುದ್ಧವೇ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ಸರ್ಕಾರಗಳು ಎಚ್ಚರ ವಹಿಸಬೇಕೆಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾದ ಸಿಎಂ ಮಮತಾ ಬ್ಯಾನರ್ಜಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಮರೀಗೌಡ, ಕಾರ್ಯದರ್ಶಿ ಡಾ.ವಿನಯ್, ಡಾ.ಜಗದೀಶ್, ಡಾ.ಕೆ.ಮೋಹನ್‌ಕುಮಾರ್, ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ.ಪ್ರಶಾಂತ್, ಉಪಾಧ್ಯಕ್ಷ ಡಾ.ಕಾವ್ಯಾ ಕೃಷ್ಣ, ಮಿಮ್ಸ್ ಮಾಧ್ಯಮ ಸಂಪರ್ಕಾಧಿಕಾರಿ ಉಮೇಶ್ ಇದ್ದರು.