ಹೊಸದಿಲ್ಲಿ: ವ್ಯಕ್ತಿಯೊಬ್ಬರಿಗೆ ಕ್ಷಯ ರೋಗ ಇರುವ ಮಾಹಿತಿ ತಿಳಿದಿದ್ದೂ ಅದನ್ನು ಸರಕಾರದ ಗಮನಕ್ಕೆ ತಾರದಿರುವ ವೈದ್ಯರಿಗೆ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಅಥವಾ ಔಷಧ ತಜ್ಞರಿಗೆ ಕನಿಷ್ಟ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದೆಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ. ಇತ್ತೀಚೆಗಷ್ಟೇ, ಪ್ರಧಾನಿ ನರೇಂದ್ರ ಮೋದಿ 2025ರ ವೇಳೆಗೆ ಭಾರತವನ್ನು ಕ್ಷಯ ರೋಗ ಮುಕ್ತವಾಗಿಸಬೇಕೆಂದು ಕರೆ ನೀಡಿದ್ದರು. ಅದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆಯು ಈ ಎಚ್ಚರಿಕೆ ಪ್ರಕಟಿಸಿರುವುದು ಗಮನಾರ್ಹ.
2017ರ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲೂಎಚ್‌ಒ) ವರದಿಯ ಪ್ರಕಾರ, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಕ್ಷಯ ರೋಗಿಗಳನ್ನು (28 ಲಕ್ಷ) ಹೊಂದಿರುವ ದೇಶ ಎಂಬ ಹೆಸರು ಪಡೆದಿದೆ. ಕ್ಷಯದಿಂದಾಗಿ 2017ರಲ್ಲಿ 4,23,000 ಜನರು ಸಾವಿಗೀಡಾ ಗಿದ್ದು, ಪ್ರತಿ 1 ಲಕ್ಷ ಮಂದಿಗೆ 211 ಜನರು ಟಿಬಿಯ ಸೋಂಕಿಗೆ ತುತ್ತಾಗುತ್ತಿದ್ದಾರೆ. ಹಾಗಾಗಿ, ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ, ಕ್ಷಯವನ್ನು ಭಾರತದಿಂದ ನಿರ್ಮೂಲನೆಗೊಳಿಸಲು ಪಣ ತೊಟ್ಟಿದೆ.
2012ರಲ್ಲೇ ಕ್ಷಯ ರೋಗವನ್ನು ಪ್ರಕಟಾರ್ಹ ರೋಗವೆಂದು ಭಾರತ ಘೋಷಿಸಿದೆ. ಆದರೂ, ಹಲವಾರು ವೈದ್ಯಕೀಯ ಸಿಬ್ಬಂದಿ, ಈ ರೋಗ ಪತ್ತೆಯಾದ ಪ್ರಕರಣಗಳನ್ನು ಸರಕಾರಕ್ಕೆ ತಿಳಿಸುತ್ತಿಲ್ಲ. ಶೇ. 76ರಷ್ಟು ಮಾಹಿತಿ ಕೊರತೆಯಾಗುತ್ತಿದೆ. ಇದರಿಂದಾಗಿ ರೋಗ ನಿರ್ಮೂಲನೆ ಸಾಧ್ಯವಾಗುತ್ತಿಲ್ಲ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
28ಲಕ್ಷ ಭಾರತದಲ್ಲಿರುವ ಕ್ಷಯ ರೋಗಿಗಳು
4.2ಲಕ್ಷ ಕಳೆದ ವರ್ಷ ಕ್ಷಯದಿಂದ ಸಾವನ್ನಪ್ಪಿದವರು
211ಪ್ರತಿ 1 ಲಕ್ಷ ಜನರಲ್ಲಿ ಸೋಂಕಿಗೆ ತುತ್ತಾಗುತ್ತಿರುವವರು