ಶಿರಸಿ: ಕಲ್ಕತ್ತದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಆರೋಪಿಗಳನ್ನು ಬಂಧಿಸದೇ ಇರುವುದನ್ನು ಆಕ್ಷೇಪಿಸಿ ಇಲ್ಲಿನ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು, ಸದಸ್ಯರು ದವಾಖಾನೆ, ಆಸ್ಪತ್ರೆಗಳ ಬಾಗಿಲು ತೆರೆಯದೇ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಸಮಾಜದ ಸ್ವಾಸ್ಥ್ಯ, ರೋಗಿಯ ಆರೋಗ್ಯಕ್ಕೆ ಪ್ರಾಮಾಣಿಕವಾಗಿ ಕಾರ್ಯ ಮಾಡುತ್ತಿರುವ ವೈದ್ಯರ ವಿರುದ್ಧ ಇಂಥ ಘಟನೆಗಳು ಪದೇಪದೇ ಆಗುತ್ತಿದೆ. ವೈದ್ಯರ ರಕ್ಷಣೆಗೆ ಯಾವುದೇ ಕಾನೂನು ಇಲ್ಲವಾಗಿದೆ. ಇದರಿಂದ ಅಸುರಕ್ಷತೆ ವಾತಾವರಣದಲ್ಲಿ ವೈದ್ಯರಿದ್ದಾರೆ. ಈಗಾಗಲೇ ಕೇಂದ್ರ ಸರಕಾರಕ್ಕೆ ಈ ಬಗ್ಗೆ ಬಿಗಿಯಾದ ಕಾಯಿದೆ ಅನುಷ್ಠಾನಕ್ಕೆ ತಂದು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಆಗಬೇಕು ಎಂದೂ ಆಗ್ರಹಿಸಿದರು. ಉತ್ತರ ಕನ್ನಡದಲ್ಲಿ ಕೂಡ ಸಾಕಷ್ಟು ಸಲ ವೈದ್ಯರ ಮೇಲೆ ಹಲ್ಲೆಯಾಗಿದೆ.
ಒಳ ರೋಗಿಗಳ ವಿಭಾಗದಲ್ಲಿ ತುರ್ತು ಸ್ಥಿತಿಯಲ್ಲಿ, ಡಿಲೆವರಿ ಸಂದರ್ಭದಲ್ಲಿ, ಅಪಘಾತದಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ಆಗುತ್ತವೆ. ವೈದ್ಯರು ಪ್ರಾಮಾಣಿಕವಾಗಿ ಕಾರ್ಯ ಮಾಡಿದರೂ ಚಿಕಿತ್ಸೆ ಸ್ಪಂದಿಸದೇ ಇದ್ದಾಗ ಏನು ಮಾಡಬೇಕು ಎಂದೂ ಕೇಳಿದ ಅವರು, 2009 ಕಾಯಿದೆ ಬಂದಿದ್ದರೂ ಪ್ರಯೋಜನ ಆಗಿಲ್ಲ ಎಂದೂ ಹೇಳಿದರು.
ಶಿರಸಿ ಐಎಂಎ ಅನೇಕ ಕಾರ್ಯ ಮಾಡುತ್ತಿದೆ. ಸರಕಾರದ ಜೊತೆಗೆ ಕೂಡ ಅನೇಕ ಪಬ್ಲಿಕ್ ಪ್ರೈವೇಟ್ ಪಾಟ್ನರ್ ಶಿಪ್ ಜೊತೆ ಕೆಲಸ ಮಾಡುತ್ತಿದೆ. ಬ್ಲಿಡ್ ಬ್ಯಾಂಕ್, ನವಜಾತ ಶಿಶು ವಿಭಾಗಗಳನ್ನೂ ಪಂಡಿತ್ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ. ಶಿರಸಿ ಸಿಟಿಸ್ಕ್ಯಾನ್‌ನಲ್ಲಿ ರವಿವಾರ ಕೂಡ ತಜ್ಞರು ಪಾಳಿ ಪ್ರಕಾರ ಕೆಲಸ ಮಾಡುತ್ತಿದ್ದೇವೆ. ನಮ್ಮಿಂದಾದ ಎಲ್ಲ ಬಗೆಯ ಸೇವೆಗಳನ್ನೂ ಒದಗಿಸಲಾಗುತ್ತಿದೆ ಎಂದೂ ಹೇಳಿದರು.
Advertisement
ಪ್ರಮುಖರಾದ ಡಾ| ತನುಶ್ರೀ ಹೆಗಡೆ, ಡಾ| ದಿನೇಶ ಹೆಗಡೆ, ಡಾ| ಶಿವರಾಮ ಕೆ.ವಿ., ಡಾ| ಕೃಷ್ಣಮೂರ್ತಿ ರಾಯಸದ, ಡಾ| ಡಿ.ಎಂ. ಹೆಗಡೆ ಇತರರು ಮಾತನಾಡಿ ಜನಪ್ರತಿನಿಧಿಗಳು, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಐಎಂಎ ತೀರ್ಮಾನಕ್ಕೆ ದಂತ ವೈದ್ಯರ ಸಂಘ ಕೂಡ ಬೆಂಬಲ ಕೊಡುತ್ತದೆ ಎಂದು ಜಿಲ್ಲಾ ಘಟಕದ ಪ್ರಮುಖರಾದ ಡಾ| ಅರ್ಪಣಾ ಹೆಗಡೆ ತಿಳಿಸಿದರು.
ಡಾ| ರವಿಕಿರಣ ಪಟವರ್ಧನ್, ಡಾ| ಧರ್ಮಶಾಲಾ, ಡಾ| ರಮೇಶ ಹೆಗಡೆ, ಡಾ| ಕೈಲಾಶ ಪೈ, ಡಾ| ಎನ್.ಆರ್. ಹೆಗಡೆ, ಡಾ| ಮಧುಕೇಶ್ವರ ಜಿ.ವಿ., ಡಾ| ಸುಮನ್ ಹೆಗಡೆ ಇತರರು ಇದ್ದರು.
ವೈದ್ಯರ ಮುಷ್ಕರ: ರೋಗಿಗಳ ಪರದಾಟ
ಭಟ್ಕಳ: ಕಲ್ಕತ್ತದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಐ.ಎಂ.ಎ. ಕರೆ ನೀಡಿದ ದೇಶವ್ಯಾಪಿ ಮುಷ್ಕರದಲ್ಲಿ ಭಟ್ಕಳ ತಾಲೂಕಿನ ವೈದ್ಯರು ಅಧ್ಯಕ್ಷ ಡಾ| ಗಣೇಶ ಪ್ರಭು ನೇತೃತ್ವದಲ್ಲಿ ಸಹಾಯಕ ಕಮಿಷನರ್‌ಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಪಶ್ಚಿಮ ಬಂಗಾಳದ ಎನ್‌ಆರ್‌ಎಸ್ ಮೆಡಿಕಲ್ ಕಾಲೇಜಿನ ಡಾ| ಪರಿಭಾ ಮುಖರ್ಜಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಅವರು ಜೀವನ್ಮರಣ ಹೋರಾಟದಲ್ಲಿದ್ದಾರೆ. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಈ ಕುರಿತು ರಾಷ್ಟ್ರೀಯ ಕಾನೂನು ತರಬೇಕೆಂದು ಒತ್ತಾಯಿಸುತ್ತದೆ. ಅಂತಾರಾಷ್ಟ್ರೀಯ ವೈದ್ಯಕೀಯ ಸಂಘವೂ ಕೂಡಾ ವೈದ್ಯರ ಹಾಗೂ ವೈದ್ಯಕೀಯ ಉಪಕರಣದ ಮೇಲೆ ನಡೆಯುವ ದಾಂಧಲೆಯನ್ನು ತೀವ್ರವಾಗಿ ಪರಿಗಣಿಸುವರೇ ಕ್ರಮಕ್ಕೆ ಆಗ್ರಹಿಸಿದೆ. ತಕ್ಷಣ ಆಸ್ಪತ್ರೆ ಮತ್ತು ವೈದ್ಯರ ಹಿತದೃಷ್ಟಿ ಕಾಪಾಡಲು ರಾಷ್ಟ್ರೀಯ ಕಾನೂನು ತುರ್ತಾಗಿ ತರುವುದು ಅವಶ್ಯಕವಾಗಿದೆ ಎಂದೂ ಹೇಳಲಾಗಿದೆ. ಐಎಂಎ ಅಧ್ಯಕ್ಷ ಡಾ| ಗಣೇಶ ಪ್ರಭು ಅವರು ಮನವಿ ಓದಿದರು. ಮಾಜಿ ಅಧ್ಯಕ್ಷ ಡಾ| ಆರ್.ವಿ. ಸರಾಫ್, ಡಾ| ಪಾಂಡುರಂಗ ನಾಯಕ ಮುಂತಾದವರು ಮಾತನಾಡಿದರು. ಡಾ| ವಿಶ್ವನಾಥ ನಾಯಕ, ಡಾ| ರವಿರಾಜ್, ಡಾ| ಗಾಯತ್ರಿ, ಡಾ| ವಾದಿರಾಜ ಭಟ್ಟ, ಡಾ| ಚೇತನ್ ಕಲ್ಕೂರ್, ಡಾ| ಲಿಂಗಪ್ರಸಾದ್, ಡಾ| ಸಮಿ, ಡಾ| ರವಿ ನಾಯ್ಕ, ಡಾ| ವಿನಿತಾ ನಾಯಕ ಮುಂತಾದ ವೈದ್ಯರು ಭಾಗವಹಿಸಿದ್ದರು. ಇಲ್ಲಿನ ಪ್ರವಾಸಿ ಬಂಗಲೆಯಿಂದ ಸಹಾಯಕ ಕಮಿಷನರ್ ಕಚೇರಿಗೆ ತೆರಳಿದ ವೈದ್ಯರು ಸಾಜಿದ್ ಅಹಮ್ಮದ್ ಮುಲ್ಲಾರಿಗೆ ಮನವಿ ಸಲ್ಲಿಸಿದರು.
ಖಾಸಗಿ ವೈದ್ಯರ ಪ್ರತಿಭಟನೆಗೆ ಬೆಂಬಲ
ಅಂಕೋಲಾ: ವೈದ್ಯರ ಮೇಲೆ ಆಗುತ್ತಿರುವ ಹಲ್ಲೆಯನ್ನು ಖಂಡಿಸಿ ದೇಶವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಎಲ್ಲಾ ವೈದ್ಯರಿಗೆ ರಕ್ಷಣೆ ಹಾಗೂ ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ತಾಲೂಕಿನ ವೈದ್ಯರು ಡಾ| ಲತಾ ಮಂಕಾಣಿ ನೇತೃತ್ವದಲ್ಲಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಾಲೂಕು ದಂಡಾಧಿಕಾರಿ ವಿವೇಕ ಶೇಣ್ವಿ ಮಾತನಾಡಿ, ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಡಾ| ಅವಿನಾಶ ತಿನೈಕರ, ಡಾ| ಎಸ್.ಎಂ. ಶೆಟ್ಟಿ, ಡಾ| ಪಿ.ಟಿ. ಅಬ್ರಾಹಂ, ಡಾ| ಎಂ.ಎಲ್. ಫರ್ನಾಂಡೀಸ್, ಡಾ| ಸಾಧನಾ ಭಟ್ಕಳ, ಡಾ| ಮನೀಶ ಸಿಂಘ, ಡಾ| ಮಹೇಂದ್ರ ನಾಯಕ, ಡಾ| ಸಂಜೀವ ನವಲ್ಯಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.