Advertisement

‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ’ಕಾರ್ಯಕ್ರಮಕ್ಕೆ ಸಚಿವ ಅಶೋಕ್ ಚಾಲನೆ

04:46 PM Aug 16, 2021 | Team Udayavani |

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ದೇಶದಲ್ಲೇ ಮೊದಲ ‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

Advertisement

ಈ ಬಗ್ಗೆ ಮಾತನಾಡಿದ ಸಚಿವ ಅಶೋಕ್,”ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಕೆಲ ದಿಟ್ಟ ನಿರ್ಧಾರಗಳನ್ನ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಹೀಗಾಗಿ ನನಗೆ ಈ ಕಾರ್ಯಕ್ರಮದ ಆಲೋಚನೆ ಹೊಳೆಯಿತು. ಪ್ರತಿ ಮನೆಯ ಸದಸ್ಯರನ್ನು ಪರೀಕ್ಷೆಗೊಳಪಡಿಸಿದರೆ ಖಂಡಿತಾ ನಿಯಂತ್ರಣದ ನಿಟ್ಟಿನಲ್ಲಿ ಮಹತ್ವದ ಯಶಸ್ಸು ಸಿಗಲಿದೆ ಎಂಬುದು ನನ್ನ ಅಭಿಪ್ರಾಯ. ಎಲ್ಲರಿಗೂ ಆಸ್ಪತ್ರೆಗೆ ಹೋಗುವುದು ಸಾಧ್ಯವಾಗುವುದಿಲ್ಲ. ಆದರೆ ಈ ಪ್ರಯತ್ನದ ಮೂಲಕ ಅವರೆಲ್ಲರನ್ನ ತಲುಪುವ ಕೆಲಸವವಾಗಲಿದೆ. ಸಾರ್ವಜನಿಕರು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕು”, ಎಂದು ಮನವಿ ಮಾಡಿಕೊಂಡರು.

“ಈ ಕಾರ್ಯಕ್ರಮವು ಸಂಪೂರ್ಣವಾಗಿ ಪೇಪರ್ ಲೆಸ್ ಆಗಿದ್ದು, ತಂಡವು ಟ್ಯಾಬ್ ನಲ್ಲಿ ಮನೆಯ ಸದಸ್ಯರ ವಿವರಗಳನ್ನ ದಾಖಲಿಸಲಿದ್ದಾರೆ. ಅದು ಬಿಬಿಎಂಪಿ ತಂತ್ರಾಂಶದಲ್ಲಿಯೂ ಅಪ್ ಲೋಡ್ ಆಗಲಿದೆ. ಜನರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಏನೇನು ಕಠಿಣ ಕ್ರಮಗಳನ್ನ ತೆಗದುಕೊಳ್ಳಬಹುದೋ ಅದೆಲ್ಲವನ್ನು ಸರ್ಕಾರ ತೆಗೆದುಕೊಳ್ಳಲಿದೆ”, ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಜಮೀರ್ ಅಹಮದ್ ಖಾನ್ ಭೇಟಿಯಾದ ಮಾಜಿ ಡಿಸಿಎಂ ಜಿ. ಪರಮೇಶ್ವರ್

ಈ ವಿಶಿಷ್ಟ ಕಾರ್ಯಕ್ರಮದಡಿ ನಗರದ 54 ವಾರ್ಡ್‍ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ವೈದ್ಯರ ತಂಡವು ಪ್ರತಿನಿತ್ಯ 50 ಮನೆಗಳಿಗೆ ಭೇಟಿ ನೀಡಿ, ಆ ಕುಟುಂಬ ಸದಸ್ಯರ ಸಂಪೂರ್ಣ ಆರೋಗ್ಯದ ವಿವರಗಳನ್ನ ಪಡೆಯಲಿದ್ದಾರೆ. ಈ ವೇಳೆ ಬಿಪಿ, ಶುಗರ್ ಸೇರಿದಂತೆ ಕೆಲ ಸಾಮಾನ್ಯ ಕಾಯಿಲೆ ಹಾಗೂ ಗಂಭೀರ ಕಾಯಿಲೆಗಳ ಕುರಿತಂತೆಯೂ ಮಾಹಿತಿ ಕಲೆಹಾಕುವ ಕಾರ್ಯವಾಗಲಿದೆ. ಮನೆಯ ಸದಸ್ಯರು ಲಸಿಕೆ ಪಡೆದ ಬಗ್ಗೆ ಮಾಹಿತಿ ತೆಗೆದುಕೊಳ್ಳಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಆ ಮನೆಯಲ್ಲಿ ಭೇಟಿಯ ಸಮಯದಲ್ಲಿ ಕೋವಿಡ್ ಸೋಂಕಿತರು ಪತ್ತೆಯಾದಲ್ಲಿ ಅವರಿಗೆ ಹೋಮ್ ಐಸೋಲೇಷನ್ ಕಿಟ್ ನೀಡಲಾಗುತ್ತದೆ.

Advertisement

ಈ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಐವರು ಸದಸ್ಯರ ತಂಡವನ್ನ ರಚಿಸಲಾಗಿದ್ದು, ಅದರಲ್ಲಿ ಒಬ್ಬ ವೈದ್ಯಾಧಿಕಾರಿ (ಎಂಬಿಬಿಎಸ್/ಬಿಡಿಎಸ್/ಆಯುಷ್) ಹಾಗೂ ಉಳಿದಂತೆ ನರ್ಸ್, ಆಶಾಕಾರ್ಯಕರ್ತೆಯರು ಸೇರಿದಂತೆ ಅರೆ ವೈದ್ಯಕೀಯ ಸಿಬ್ಬಂದಿಗಳಿರುತ್ತಾರೆ. ಪ್ರತಿ ತಂಡದ ವೈದ್ಯಾಧಿಕಾರಿಗಳು ‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ, ನಿಮ್ಮ ಆರೋಗ್ಯವೇ ನಮ್ಮ ಭಾಗ್ಯ’ ಎಂಬ ಘೋಷಣೆಯನ್ನೊಳಗೊಂಡ ಬಿಳಿ ಬಣ್ಣದ ಏಪ್ರಾನ್ ಧರಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next