ಹೊಸದಿಲ್ಲಿ : ದಿಲ್ಲಿ ಸರಕಾರ ನಡೆಸುತ್ತಿರುವ ಇಲ್ಲಿನ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿ ಮೇಲೆ ರೋಗಿಯ ಸಹಾಯಕ ಹಲ್ಲೆ ನಡೆಸಿದುದನ್ನು ಅನುಸರಿಸಿ ಆಸ್ಪತ್ರೆಯ ವೈದ್ಯರು ಇಂದು ಸೋಮವಾರ ಮುಷ್ಕರಕ್ಕೆ ತೊಡಗಿದ್ದಾರೆ.
ಇಂದು ಸೋಮವಾರ ಬೆಳಗ್ಗಿನಿಂದ ಆರಂಭಗೊಂಡಿರುವ ವೈದ್ಯರ ಮುಷ್ಕರದ ಪರಿಣಾಮವಾಗಿ ಆಸ್ಪತ್ರೆಯಲ್ಲಿನ ತುರ್ತು ಸೇವೆ ಮತ್ತು ದಿನನಿತ್ಯದ ಸೇವೆಗಳು ಸಂಪೂರ್ಣವಾಗಿ ನಿಂತು ಹೋಗಿವೆ ಎಂದು ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ತಿಳಿಸಿದ್ದಾರೆ.
ನಿನ್ನೆ ಭಾನುವಾರ ರಾತ್ರಿ ಎಮರ್ಜೆನ್ಸಿ ವಿಭಾಗದಲ್ಲಿ ಸೇವೆಯಲ್ಲಿದ್ದ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿನ ಮೂರನೇ ವರ್ಷದ ವೈದ್ಯ ವಿದ್ಯಾರ್ಥಿ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಪ್ರತಿಭಟನೆಯಾಗಿ ಲೋಕ ನಾಯಕ ಜೈ ಪ್ರಕಾಶ್ ನಾರಾಯಣ್ (ಎಲ್‌ಎನ್‌ಜೆಪಿ) ಆಸ್ಪತ್ರೆಯ ರೆಸಿಡೆಂಟ್ ವೈದ್ಯರ ಸಂಘ ಇಂದು ಸೋಮವಾರದಿಂದ ಮುಷ್ಕರ ಆರಂಭಿಸಿತು.
‘ಭಾನುವಾರ ರಾತ್ರಿ ಇಆರ್ ಡಿಪಾರ್ಟ್‌ಮೆಂಟಿಗೆ ರೋಗಿಯೊಬ್ಬರನ್ನು ತರಲಾಗಿತ್ತು. ಆತ ಸ್ವಲ್ಪವೇ ಹೊತ್ತಿನಲ್ಲಿ ಆರೋಗ್ಯ ವಿಷಮಿಸಿ ಕೊನೆಯುಸಿರೆಳೆದಿದ್ದ. ರೋಗಿಯ ಜತೆಗಿದ್ದ ಆತನ ಸಹಾಯಕ ಇದರಿಂದ ಕ್ರುದ್ಧನಾಗಿ ವೈದ್ಯ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ’ ಎಂದು ಆರ್‌ಡಿಎ ಅಧ್ಯಕ್ಷ ಸಾಯಿಕೇತ್ ಜೇನಾ ಹೇಳಿದರು.
ಇತ್ತೀಚೆಗಿನ ದಿನಗಳಲ್ಲಿ ವೈದ್ಯರ ಮೇಲೆ ರೋಗಿಗಳ ಮನೆಯವರು ಹಲ್ಲೆ ನಡೆಸಿರುವ ಅನೇಕ ಘಟನೆಗಳು ನಡೆದಿರುವುದನ್ನು ಪ್ರತಿಭಟಿಸಿ ನಾವು ಇಂದು ಮುಷ್ಕರಕ್ಕೆ ತೊಡಗಿದ್ದೇವೆ. ನಮಗೆ ಸೂಕ್ತ ಭದ್ರತೆ ಬೇಕು ಎಂದು ಸಾಯಿಕೇತ್ ಹೇಳಿದರು.
ಪಶ್ಚಿಮ ಬಂಗಾಲದಲ್ಲಿ ಈಚೆಗಷ್ಟೇ ಜೂನಿಯರ್ ವೈದ್ಯರು ತಮ್ಮ ಸಹೋದ್ಯೋಗಿಗಳ ಮೇಲಿನ ಹಲ್ಲೆಯನ್ನು ಪ್ರತಿಭಟಿಸಿ, ಹೆಚ್ಚಿನ ಭದ್ರತೆಯನ್ನು ಆಗ್ರಹಿಸಿ, ಹಲವು ದಿನಗಳ ಕಾಲ ಮುಷ್ಕರ ಹೂಡಿದ್ದು ದೇಶಾದ್ಯಂತ ವೈದ್ಯರಿಂದ ಅವರಿಗೆ ಬೆಂಬಲ ವ್ಯಕ್ತವಾಗಿ ದೇಶವ್ಯಾಪಿ ಆರೋಗ್ಯ ಸೇವೆಗಳು ತೀವ್ರವಾಗಿ ಬಾಧಿತವಾಗಿದ್ದವು.