Advertisement

ಕೋವಿಡ್‌ ಕುರಿತು ವೈದ್ಯರಿಗೇ ಕಳವಳ

03:18 PM May 19, 2020 | sudhir |

ಲಂಡನ್‌: ಕೃಷ್ಣವರ್ಣೀಯ , ಏಷ್ಯಾ ಹಾಗೂ ಅಲ್ಪಸಂಖ್ಯಾಕ ಸಮುದಾಯ (ಬಿಎಎಂಇ)ದ ವೈದ್ಯರ ಪೈಕಿ ಮುಕ್ಕಾಲು ಪಾಲು ವೈದ್ಯರು ತಮ್ಮ ಕರ್ತವ್ಯದ ವೇಳೆ ತಮಗೆ ಕೋವಿಡ್‌-19 ತಗಲಬಹುದೆಂದು ಚಿಂತಿತರಾಗಿದ್ದಾರೆಂದು ಸಮೀಕ್ಷೆಯೊಂದು ತೋರಿಸಿದೆ.

Advertisement

ವೈಯಕ್ತಿಕ ರಕ್ಷಣಾ ಸಾಧನಗಳ ಕೊರತೆ, ಮಾಸ್ಕ್ ಗಳನ್ನು ಧರಿಸುವ ಕುರಿತು ಸರಿಯಾದ ತರಬೇತಿ ಇಲ್ಲದಿರುವುದು ಮತ್ತು ವೈರಸ್‌ ಪರೀಕ್ಷೆಗೆ ಸುದೀರ್ಘ‌ ಕಾಯುವಿಕೆಯಿಂದಾಗಿ ತಮಗೆ ವೈರಸ್‌ ಸೋಂಕು ಉಂಟಾಗಬಹುದು ಮತ್ತು ಅದು ತಮ್ಮೊಂದಿಗೆ ವಾಸಿಸುವವರಿಗೆ ಹರಡಬಹುದೆಂದು ತಾವು ಭೀತಿಯಲ್ಲಿರುವುದಾಗಿ ವೈದ್ಯರು ಹೇಳಿದ್ದಾರೆ.

ಸಮೀಕ್ಷೆಗೆ ಉತ್ತರಿಸಿದ ವೈದ್ಯರ ಪೈಕಿ ಶೇ. 48 ಮಂದಿ ತಮ್ಮ ಆರೋಗ್ಯದ ಕುರಿತು ಅತಿಯಾಗಿ ಚಿಂತಿತರಾಗಿದ್ದಾರೆ. ಬಿಎಎಂಇ ವೈದ್ಯರ ಪೈಕಿ ಈ ಸಂಖ್ಯೆ ಶೇ.76ರಷ್ಟಿದೆ ಎಂದು ರಾಯಲ್‌ ಕಾಲೇಜ್‌ ಆಫ್ ಫಿಸಿಶಿಯನ್ಸ್‌(ಆರ್‌ಸಿಪಿ) ಕಂಡುಕೊಂಡಿದೆ.

ಪಿಪಿಇಯದ್ದೇ ಚಿಂತೆ
“ಪರಿಸ್ಥಿತಿ ನಮಗೆ ಅವಶ್ಯವಿರುವಂತೆ ಇಲ್ಲ. ಕೋವಿಡ್‌ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರು ಚೆನ್ನಾಗಿದ್ದಾರೆಂದು ಜನರು ಭಾವಿಸಿದ್ದಾರೆ. ಇದು ಉತ್ತಮ ವಿಚಾರವಾದರೂ ವೈದ್ಯರು ಚಿಂತಿತರಾಗಿದ್ದಾರೆಂಬುದನ್ನು ಸಮೀಕ್ಷೆ ತೋರಿಸಿದೆ. ಪಿಪಿಇ ಒಂದು ಕಳವಳಕಾರಿ ವಿಚಾರವಾಗಿ ಉಳಿದಿದೆ. ಪರೀಕ್ಷೆಗಳು ಹೆಚ್ಚು ಉತ್ತಮವಾಗಿ ನಡೆಯುತ್ತಿವೆಯಾದರೂ ವಿಶೇಷವಾಗಿ ಫ‌ಲಿತಾಂಶ ಸಿಗುವಲ್ಲಿ ವಿಳಂಬವಾಗುವುದು ಕಳವಳಕ್ಕೆ ಕಾರಣವಾಗಿದೆ’ ಎಂದು ಆರ್‌ಸಿಪಿ ಅಧ್ಯಕ್ಷ ಪ್ರೊ|ಆ್ಯಂಡ್ರೂ ಗೊಡ್ಡಾರ್ಡ್‌ ಹೇಳಿದರು.

“ಬಿಎಎಂಇ ವೈದ್ಯರಲ್ಲಿ ಕಳವಳ ತೀವ್ರವಾಗಿದೆ. ಬಿಎಎಂಇ ಮೂಲದ ಆರೋಗ್ಯ ಕಾರ್ಯಕರ್ತರು ಹಾಗೂ ಸಮಾಜದಲ್ಲಿನ ಜನರ ಸಾವುಗಳನ್ನು ಪರಿಗಣನೆಗೆ ತೆಗೆದುಕೊಂಡಲ್ಲಿ ಇದರಲ್ಲಿ ಅಚ್ಚರಿಯೇನೂ ಇಲ್ಲ. ನಾವು ಬಿಎಎಂಇ ಕಾರ್ಯಪಡೆಯನ್ನು ಅತಿಹೆಚ್ಚು ಅವಲಂಬಿಸಿರುವುದರಿಂದ ಮತ್ತು ಕಾರ್ಯಪಡೆಯವರು ತಮ್ಮದೇ ಆರೋಗ್ಯದ ಕುರಿತು ಅತಿಯಾಗಿ ಚಿಂತಿತರಾಗಿರುವುದರಿಂದ ನಾವು ಎಚ್ಚರಗೊಳ್ಳಬೇಕಾದ ಅಗತ್ಯವಿದೆ’ ಎಂದು ಅವರು ನುಡಿದರು.

Advertisement

ಬಿಎಎಂಇ ಆರೋಗ್ಯ ಕಾರ್ಯಕರ್ತರು ಯಾಕೆ ಅಸಮಾನ ಸಂಖ್ಯೆಯಲ್ಲಿ ವೈರಸ್‌ಪೀಡಿತರಾಗುತ್ತಾರೆಂದು ತನಿಖೆ ನಡೆಸಬೇಕಾಗಿದೆಯೆಂದು ಬ್ರಿಟಿಷ್‌ ಮೆಡಿಕಲ್‌ ಎಸೋಸಿಯೇಶನ್‌ ಅಧ್ಯಕ್ಷ ಡಾ|ಚಂದ್‌ ನಾಗ್‌ಪಾಲ್‌ ಅವರು ಸರಕಾರವನ್ನು ಆಗ್ರಹಿಸಿದ ಬಳಿಕ ಈ ಸಮೀಕ್ಷೆ ನಡೆಸಲಾಯಿತು. ರಾಷ್ಟೀಯ ಆರೋಗ್ಯ ಸೇವೆ(ಎನ್‌ಎಚ್‌ಎಸ್‌)ಯ ಉನ್ನತ ಅಧಿಕಾರಿಗಳ ಮಾರ್ಗದರ್ಶಿ ಸೂತ್ರದನ್ವಯ ಬಿಎಎಂಇ ಸಿಬಂದಿಯ ಸುರಕ್ಷತೆಗಾಗಿ ಈಗ ಆಸ್ಪತ್ರೆಗಳು ಅವರನ್ನು ಮುಂಚೂಣಿಯಿಂದ ಹಿಂದೆಗೆಕೊಳ್ಳುವ ಕುರಿತು ಪರಿಶೀಲಿಸುತ್ತಿವೆ.

ಕೋವಿಡ್‌ ಬಿಕ್ಕಟ್ಟಿನ ವೇಳೆ ಮೂರನೆ ಒಂದರಷ್ಟು ಸಂಖ್ಯೆಯ ವೈದ್ಯರು ಕರ್ತವ್ಯದಲ್ಲಿಲ್ಲ. ಸಮೀಕ್ಷೆಗೊಳಪಟ್ಟ 1,500ಕ್ಕೂ ಅಧಿಕ ವೈದ್ಯರ ಪೈಕಿ ಐದನೆ ಒಂದು ಪಾಲು ವೈದ್ಯರಿಗೆ ಸೋಂಕು ತಗಲಿದೆ ಮತ್ತು ಶೇ. 39 ಮಂದಿಗೆ ಸೋಂಕು ತಗಲಿರುವ ಶಂಕೆಯಿದೆ.ಕೋವಿಡ್‌ ಲಂಡನ್‌ನಲ್ಲಿ ತೀವ್ರ ಪರಿಣಾಮ ಬೀರಿದ್ದು ಸಮೀಕ್ಷೆಗೊಳಗಾದವರ ಪೈಕಿ ಶೇ. 42 ಮಂದಿ ಕೋವಿಡ್‌ ಇಂಗ್ಲೆಂಡ್‌ಗೆ ತಲಪಿದ ಬಳಿಕ ತಾವು ರಜೆ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next