ಬಳ್ಳಾರಿ: ಇಲ್ಲಿನ ವಿಜಯ ಶ್ರೀಕೃಷ್ಣ ದೇವರಾಯ ವಿವಿ 11ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಇಬ್ಬರು (ಒಬ್ಬರಿಗೆ ಮರಣೋತ್ತರ) ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಜು.13ರ ಗುರುವಾರ ಪ್ರದಾನ ಮಾಡಲಾಯಿತು.
ರಾಜ್ಯದ ರಾಜ್ಯಪಾಲರು, ವಿಎಸ್ ಕೆ ವಿವಿ ಕುಲಾಧಿಪತಿಗಳೂ ಆದ ಥಾವರ್ ಚಂದ್ ಗೆಹ್ಲೋಟ್ ಅವರು, ಕೃಷಿ ಕ್ಷೇತ್ರದಲ್ಲಿ ಅಪಾರ ಸೇವೆಗೈದ ಕವಿತಾ ಮಿಶ್ರಾ, ಡಿ. ಹಿರೇಹಾಳ್ ಇಬ್ರಾಹಿಂ ಸಾಬ್ (ಮರಣೋತ್ತರ) ಅವರನ್ನು ಸತ್ಕರಿಸಿ ಗೌರವ ಡಾಕ್ಟರೇಟ್ ಪದವಿಯನ್ನು ಪುರಸ್ಕಾರ ಮಾಡಿದರು.
ಹಿರೇಹಾಳ್ ಇಬ್ರಾಹಿಂ ಸಾಬ್ ಬದಲಿಗೆ ಅವರ ಪುತ್ರ ದಾದಾ ಖಲಂದರ್ ಅವರು ಗೌರವ ಡಾಕ್ಟರೇಟ್ ಪಸವಿಯನ್ನು ಸ್ವೀಕರಿಸಿದರು.
ಖ್ಯಾತ ಹಿಂದೂಸ್ತಾನಿ ಗಾಯಕ ವೆಂಕಟೇಶ್ ಕುಮಾರ್ ಅವರು, ಘಟಿಕೋತ್ಸವಕ್ಕೆ ಗೈರು ಹಾಜರಾಗಿದ್ದು, ಪದವಿ ಸ್ವೀಕರಿಸಲಿಲ್ಲ.
ಇದೇ ವೇಳೆ ಘಟಿಕೋತ್ಸವದಲ್ಲಿ ಮೂವರು ಸ್ನಾತಕೋತ್ತರ ವಿದ್ಯಾರ್ಥಿಗಳು ತಲಾ ಮೂರು ಚಿನ್ನದ ಪದಕ, ಐವರು ವಿದ್ಯಾರ್ಥಿಗಳು ತಲಾ ಎರೆಡೆರಡು ಚಿನ್ನದ ಪದಕಗಳನ್ನು ಪಡೆದಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರದಾನ ಮಾಡಿದರು. ಒಟ್ಟು ಸ್ನಾತಕ, ಸ್ನಾತಕೋತ್ತರ ವಿಭಾಗಗಳ 41 ವಿದ್ಯಾರ್ಥಿಗಳು 53 ಚಿನ್ನದ ಪದಕ ಪಡೆದಿದ್ದಾರೆ. ಅದೇ ರೀತಿ 32 ಸಂಶೋಧನಾ ವಿದ್ಯಾರ್ಥಿಗಳಿಗೆ ಪದವಿಗಳನ್ನು ಇದೇ ವೇಳೆ ವಿತರಿಸಲಾಯಿತು.
ಕುಲಪತಿ ಪ್ರೊ. ಸಿದ್ದು ಪಿ. ಅಲಗೂರು, ಕುಲಸಚಿವರಾದ ಎಸ್.ಜಿ.ಪಾಟೀಲ್, ರಮೇಶ್ ಓಲೇಕಾರ್, ಮುಖ್ಯ ಭಾಷಣಕಾರ ದೆಹಲಿಯ ಡಾ. ಜೆ.ಕೆ.ಬಜಾಜ್, ವಿದ್ಯಾವಿಷಯಕ ಸದಸ್ಯರು ಸೇರಿ ಹಲವರು ಇದ್ದರು.