Advertisement
ಈ ಮೂರೂ ಬದ್ದತೆಗಳನ್ನು ಮೈಗೂಡಿಸಿಕೊಂಡು ತಮ್ಮ ಕೆಲಸದಲ್ಲಿ ಆತ್ಮತೃಪ್ತಿಯೊಂದಿಗೆ ಸರಳ ಜೀವನದ ಅನ್ವರ್ಥದಂತೆ ಸದ್ದಿಲ್ಲದೇ ತಮ್ಮ ಕಾಯಕದಲ್ಲಿ ನಿರತರಾಗಿರುವವರು ಹುಬ್ಬಳ್ಳಿಯ ಕಾರಟಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ. ರಾಮಚಂದ್ರ ಕಾರಟಗಿಯವರು. ಸದಾ ಸೇವಾನಿರತ ಮನೋಭಾವದವರು, ಯೋಧರು, ವಯೋವೃದ್ದರ ಹಾರೈಕೆಯಲ್ಲಿ ಸಾರ್ಥಕತೆ ಕಂಡುಕೊಂಡವರು.
Related Articles
ಬಿಡುವಿನ ವೇಳೆಯಲ್ಲಿ ರಾಜ್ಯಮಟ್ಟದ ಎಲ್ಲಾ ಪತ್ರಿಕೆಗಳಲ್ಲಿ ನಿರಂತರ ಲೇಖನಗಳನ್ನು ಬರೆಯುತ್ತಾ ತನ್ನ ವೃತ್ತಿ ಜ್ಞಾನವನ್ನು ಅಕ್ಷರ ರೂಪಕ್ಕಿಳಿಸಿ ಸಮಾಜಕ್ಕೆ ಮಾಹಿತಿ ನೀಡುವ ಕೆಲಸವನ್ನೂ ಮಾಡುತ್ತಿದ್ದಾರೆ. ಹೀಗೆ, ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ವೈದ್ಯ ಸಾಹಿತಿಯಾಗಿಯೂ ರಾಮಚಂದ್ರ ಅವರು ತನ್ನ ಛಾಪನ್ನು ಮೂಡಿಸಿದ್ದಾರೆ.
Advertisement
ಅಂಗನವಾಡಿ ಆಶಾ ಕಾರ್ಯಕರ್ತೆಯರಿಗೆ ವೈದ್ಯಕೀಯ ಸೇವೆ ನೀಡುವ ಬಗ್ಗೆ ತರಬೇತಿ ಕಾರ್ಯಾಗಾರದ ಮೂಲಕ ಜಾಗೃತಿ ಮೂಡಿಸುವ ಕೆಲಸ. ಗುಡ್ಡಗಾಡು ಪ್ರದೇಶದಲ್ಲಿ ಸ್ವಚ್ಛತೆ, ಶಿಕ್ಷಣದಲ್ಲಿ ಸೇರಿದಂತೆ ಆರೋಗ್ಯ ಕೇಂದ್ರದ ವತಿಯಿಂದ ವೈದ್ಯಕೀಯ ಶಿಬಿರಗಳ ಆಯೋಜನೆ. ಮದ್ಯಪಾನದ ದುಷ್ಪರಿಣಾಮದ ಬಗ್ಗೆ ಜಾಗೃತಿ ಹಾಗೂ ಮದ್ಯವರ್ಜನ ಶಿಬಿರಗಳ ಆಯೋಜನೆ, ದುಶ್ಚಟ ನಿವಾರಣಾ ಶಿಬಿರಗಳ ಆಯೋಜನೆ ಮೂಲಕ ಅರಿವು, ಕಾರಾಗೃಹದಲ್ಲಿ ಕೈದಿಗಳಿಗೆ ಮಾನಸಿಕ ಪರಿವರ್ತನೆ, ಮುಕ್ತ ಸಮಾಲೋಚನೆ ಹಾಗೂ ಸಹಜ ಸಾಮಾಜಿಕ ಜೀವನದ ಮರಳುವಿಕೆಯ ಬಗ್ಗೆ ಅರಿವು ನೀಡುತ್ತಿದ್ದಾರೆ.
ಯುವಕರಲ್ಲಿ ದುಶ್ಚಟಗಳ ನಿವಾರಣೆಗಾಗಿ ಶಿಬಿರಗಳನ್ನು ಆಯೋಜಿಸಿ ಯುವಕರ ತಂಡ ಕಟ್ಟಿ ಜಾಗೃತಿ ಕಾರ್ಯಕ್ರಮ ಆಯೋಜನೆ ಜೊತೆ ಕ್ರೀಡಾಕೂಟಗಳು, ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಈ ವಿಷಯದಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನು ಇರಿಸುತ್ತಿದ್ದಾರೆ. ಗ್ರಾಮೀಣ ಭಾಗದ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದವರಾಗಿಯೂ ಗುರುತಿಸಿಕೊಂಡವರು ವೈದ್ಯ ರಾಮಚಂದ್ರ ಕಾರಟಗಿ.
ಹೀಗೆ ವೃತ್ತಿಯಲ್ಲಿ ಮಾನವೀಯ ಕಳಕಳಿಯ ಒಬ್ಬ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವುದು ಮಾತ್ರವಲ್ಲದೇ ಸಮಾಜಮುಖಿಯಾಗಿಯೂ ಹಲವಾರು ಕಾರ್ಯಗಳನ್ನು ಮಾಡುವ ಮೂಲಕ ಸಮಾಜಕ್ಕೆ ಇವರು ನೀಡುತ್ತಿರುವ ಕೊಡುಗೆ ಎಲ್ಲರೂ ಮೆಚ್ಚುವಂತದ್ದು.ಇವರ ಈ ಎಲ್ಲಾ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ವೈದ್ಯಕೀಯ ಸವಾಲುಗಳು, ವೈದ್ಯ ವೃತ್ತಿಯಲ್ಲಿನ ಸೇವೆ, ಪ್ರಚಲಿತ ವೈದ್ಯಕೀಯ ವಿದ್ಯಮಾನಗಳ ಕುರಿತು ಖಾಸಗಿ ವಾಹಿನಿಗಳಲ್ಲಿ ಸಂದರ್ಶನ. ಖಾಸಗಿ ಸುದ್ದಿ ವಾಹಿನಿಯಲ್ಲಿ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ‘ಪಬ್ಲಿಕ್ ಹಿರೋ’ ಕಾರ್ಯಕ್ರಮದಲ್ಲಿ ಸಂದರ್ಶನ. ರೇಡಿಯೋದ ಫೋನ್ ಇನ್ ಕಾರ್ಯಕ್ರಮದಲ್ಲಿ ರೋಗಿಗಳು,ಸಾರ್ವಜನಿಕರೊಂದಿಗೆ ಆರೋಗ್ಯದ ಕುರಿತು ಮಾತುಕತೆ. ಹುಬ್ಬಳ್ಳಿಯ ರೆಡ್ ಎಫ್.ಎಂ 93.5ನಲ್ಲಿ ಗಣರಾಜ್ಯೋತ್ಸವ ದಿನದಂದು ವೈದ್ಯಕೀಯ ವೃತ್ತಿ ಹಾಗೂ ಸೇವೆಯ ಅನುಭವ ಕುರಿತು ಸಂದರ್ಶನಗಳು ಈಗಾಗಲೇ ಪ್ರಸಾರವಾಗಿವೆ. ದಾವಣಗೆರೆಯ ಶಿವಯೋಗಾಶ್ರಮದಲ್ಲಿ ವೈದ್ಯ ರತ್ನ ಪ್ರಶಸ್ತಿ. ಧಾರವಾಡದ ಸೃಜನ ರಂಗಮಂದಿರದಲ್ಲಿ ಸಮಾಜ ಸೇವಾ ಪ್ರಶಸ್ತಿ. ಯಾದಗಿರಿ ಜಿಲ್ಲೆಯ ಹುಣಸಿಹೊಳೆಯಲ್ಲಿ ಕಣ್ವಕಣ್ಮಣಿ ಪ್ರಶಸ್ತಿ. ದಾವಣಗೆರೆಯ ವಿರಕ್ತ ಮಠದಲ್ಲಿ ಕರುಣಾ ಸೇವಾ ಪ್ರಶಸ್ತಿ. ದಾವಣಗೆರೆಯ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂದಿರದಲ್ಲಿ ಭಾರತ ಸೇವಾರತ್ನ ರಾಷ್ಟ್ರೀಯ ಪ್ರಶಸ್ತಿ. ಮಂತ್ರಾಲಯದ ಗುರು ರಾಘವೇಂದ್ರ ಶ್ರೀಗಳ ಸನ್ನಿಧಾನದಲ್ಲಿ ಚಿಂತನ ಶ್ರೀ ಪ್ರಶಸ್ತಿ. ಹುಬ್ಬಳ್ಳಿಯ ಕಿಮ್ಸ್ ಆಡಿಟೋರಿಯಂನಲ್ಲಿ ಸಾಧನ ಭೂಷಣ ಪ್ರಶಸ್ತಿ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ರಂಗಮಂದಿರದಲ್ಲಿ ಭಾರತ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ. ಬೆಂಗಳೂರಿನ ನಯನ ರಂಗ ಮಂದಿರದಲ್ಲಿ ವೈದ್ಯ ಭೂಷಣ ಪ್ರಶಸ್ತಿ ಸೇರಿದಂತೆ, ಇನ್ನೂ ಹಲವಾರು ಪ್ರಶಸ್ತಿ ಸನ್ಮಾನಗಳಿಗೆ ಡಾ. ರಾಮಚಂದ್ರ ಕಾರಟಗಿ ಅವರು ಭಾಜನರಾಗಿದ್ದಾರೆ.
– ಶ್ವೇತಾ ಪ್ರಸನ್ನ ಹೆಗಡೆ, ಶಿರಸಿ