ಚಿಂಚೋಳಿ: ವೃತ್ತಿಯಲ್ಲಿ ಶಸ್ತ್ರ ಚಿಕಿತ್ಸಾ ತಜ್ಞರಾಗಿರುವ ಡಾ| ಉಮೇಶ ಜಾಧವ ಈಗ ತಾವೇ ‘ಆಪರೇಷನ್ ಕಮಲ’ದಲ್ಲಿ ಸಿಲುಕಿದ್ದಾರೆ.
ಕಾಂಗ್ರೆಸ್ ಪಕ್ಷವೇ ತಮ್ಮ ಕುಟುಂಬ, ಕಾಂಗ್ರೆಸ್ ಪಕ್ಷದ ರಕ್ತವೇ ತಮ್ಮ ಮೈಯಲ್ಲಿ ಹರಿಯುತ್ತಿದೆ, ಈ ಪಕ್ಷವೇ ತಮ್ಮ ಜೀವ ಎನ್ನುತ್ತಿದ್ದ ಜಾಧವ ಕಮಲ ಪಾಳೆಯದತ್ತ ಹೆಜ್ಜೆ ಹಾಕಲು ಕಾರಣವೇನು ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಶಾಸಕರ ಅಳಿಯ ಅರುಣ ಪವಾರ, ಹಿರಿಯ ಸಹೋದರ ರಾಮಚಂದ್ರ ಜಾಧವ ಈ ತಂತ್ರದ ರೂವಾರಿ ಎನ್ನಲಾಗುತ್ತಿದೆ.
ಮೀಸಲು ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎರಡನೇ ಬಾರಿ ಗೆಲುವು ಸಾಧಿಸಿದ ಡಾ| ಉಮೇಶ ಜಾಧವ ಈಗಾಗಲೇ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಅಲ್ಲದೇ ಈ ಬಾರಿ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹೀಗಿದ್ದರೂ ಸಚಿವ ಸ್ಥಾನ ದೊರೆಯಲಿಲ್ಲ ಎನ್ನುವ ಕಾರಣಕ್ಕಾಗಿಯೇ ಮುನಿಸಿಕೊಂಡರೇ ಹೇಗೆ ಎನ್ನುವ ವಿಷಯ ಚರ್ಚೆಗೆ ಗ್ರಾಸವಾಗಿದೆ.
ಹೈದ್ರಾಬಾದ ಕರ್ನಾಟಕದ ಯಾವುದೇ ವಿಧಾನಸಭೆ ಮತಕ್ಷೇತ್ರಗಳಲ್ಲಿ ಬಿಜೆಪಿ ಅಲೆ ಅಷ್ಟೊಂದು ಇಲ್ಲ. ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಭಾಗದಲ್ಲಿ ಯಾರೂ ಪ್ರಬಲ ಪ್ರತಿಸ್ಪರ್ಧಿಯಾಗುವ ನಿಟ್ಟಿನಲ್ಲಿ ಬೆಳೆದಿಲ್ಲ. ಹೀಗಿದ್ದಾಗೂ ಯಾಕೆ ಜಾಧವ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎನ್ನುವ ಆತಂಕ ಅವರ ಬೆಂಬಲಿ ಗರದ್ದಾಗಿದೆ. ಕಲಬುರಗಿ ಲೋಕಸಭೆ ಮತಕ್ಷೇತ್ರಕ್ಕೆ ಡಾ| ಮಲ್ಲಿಕಾರ್ಜುನ ಖರ್ಗೆ ಸತತವಾಗಿ ಎರಡು ಬಾರಿ ಜಯ ಸಾಧಿಸಿ ಹಿಂದುಳಿದ ಭಾಗದ ಅಭಿವೃದ್ಧಿಗೆ ಸಾಕಷ್ಟು ಪರಿಶ್ರಮಿಸಿದ್ದಾರೆ.
ಶಾಮರಾವ ಚಿಂಚೋಳಿ