ಗಂಗಾವತಿ: ಬಡತನದಲ್ಲಿದ್ದ ಬಾಲಕಿಯನ್ನು ಕಾಲೇಜಿಗೆ ಸೇರಿಸಿ, ವಿದ್ಯಾಭ್ಯಾಸ ಕೊಡಿಸುತ್ತೇನೆ ಎಂದು ಕರೆದುಕೊಂಡು ಬಂದ ವೈದ್ಯ, ಮನೆಗೆಲಸ ಮಾಡಿಸಿಕೊಳ್ಳುತ್ತಿರುವುದಕ್ಕೆ ಕಂಗಾಲಾದ ಬಾಲಕಿ ಪೊಲೀಸರಿಗೆ ವಿಷಯ ತಿಳಿಸಿದ್ದರಿಂದ ಆಕೆಯನ್ನು ರಕ್ಷಣೆ ಮಾಡಲಾಗಿದೆ.
ಸಮೀಪದ ಬಸಾಪೂರ ರಾಜರಾಮಪೇಟೆಯ ಬಾಲಕಿ ರಾಧಿಕಾ, ಪೊಲೀಸ್ ಕಂಟ್ರೋಲ್ ರೂಂ ಹಾಗೂ ಎಸಿಬಿಗೆ ಕರೆ ಮಾಡಿ, ತನ್ನನ್ನು ಕಾಲೇಜಿಗೆ ಕಳುಹಿಸುತ್ತೇವೆ ಎಂದು ಕರೆದುಕೊಂಡು ಬಂದು ಮನೆಯಲ್ಲಿ ಕೆಲಸ ಮಾಡಿಸುತ್ತಿದ್ದಾರೆ. ನಮ್ಮ ತಂದೆಗೆ ಅಪಘಾತವಾಗಿದ್ದು, ಅವರ ಆರೋಗ್ಯ ಸರಿಯಿಲ್ಲ.
ವೈದ್ಯರ ಆಶ್ರಯದಲ್ಲಿ ಓದಬೇಕೆಂದು ಆಗಮಿಸಿದ್ದೆ. ಇವರು ಕಾಲೇಜಿಗೆ ಸೇರಿಸುತ್ತಿಲ್ಲ. ಮನೆಯಲ್ಲಿ ಕೆಲಸ ಮಾಡಿಕೊಂಡು ಇರಬೇಕಾಗಿದೆ. 10ನೇ ತರಗತಿಯಲ್ಲಿ ಶೇ.70 ಅಂಕ ಪಡೆದು ಉತ್ತೀರ್ಣಳಾಗಿದ್ದು, ತನ್ನನ್ನು ರಕ್ಷಿಸಿ, ಕಾಲೇಜಿಗೆ ಹೋಗಲು ಸಹಾಯ ಮಾಡುವಂತೆ ಕೋರಿದ್ದಾಳೆ.
ಈ ವಿಷಯವನ್ನು ಪೊಲೀಸ್ ಕಂಟ್ರೋಲ್ ರೂಂನಿಂದ ಗಂಗಾವತಿ ನಗರ ಠಾಣೆಯ ಪಿಐ ಉದಯರವಿ ಅವರ ಗಮನಕ್ಕೆ ತರಲಾಯಿತು. ಬುಧವಾರ ಸಂಜೆ ಬಾಲಕಿ ರಾಧಿಕಾ ಹಾಗೂ ಖಾಸಗಿ ವೈದ್ಯರಾದ ಡಾ| ಸೋಮರಾಜು ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಯಿತು.
ನಂತರ ವೈದ್ಯ ಡಾ| ಸೋಮರಾಜು ಹಾಗೂ ಅವರ ಪುತ್ರನ ವಿಚಾರಣೆ ನಡೆಸಿ, ಕೂಡಲೇ ಬಾಲಕಿಯನ್ನು ಪಾಲಕರ ಸುಪರ್ದಿಗೆ ವಹಿಸುವಂತೆ ಸೂಚನೆ ನೀಡಿ, ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದಾರೆ. ಬಾಲಕಿ ರಾ ಧಿಕಾಳನ್ನು ಮಕ್ಕಳ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಉದಯರವಿ ತಿಳಿಸಿದ್ದಾರೆ.
ಬಾಲಕಿಯನ್ನು ಕಾಲೇಜಿಗೆ ಅಡ್ಮಿಷನ್ ಮಾಡಿಸುವುದಾಗಿ ಹೇಳಿ ಖಾಸಗಿ ವೈದ್ಯರು ಮನೆಗೆಲಸಕ್ಕೆ ಇಟ್ಟುಕೊಂಡಿದ್ದ ವಿಷಯ ಎಸಿಬಿಯಿಂದ ತಿಳಿಯಿತು. ಬಾಲಕಿ ಮತ್ತು ವೈದ್ಯರನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ವಿಷಯ ಖಚಿತವಾಗಿದ್ದು, ವೈದ್ಯರಿಗೆ ಎಚ್ಚರಿಕೆ ನೀಡಲಾಗಿದೆ. ಬಾಲಕಿಯನ್ನು ಮಕ್ಕಳ ಸಾಂತ್ವನ ಕೇಂದ್ರದ ಮೂಲಕ ಪಾಲಕರ ಬಳಿಗೆ ಕಳಿಸಲಾಗುತ್ತದೆ. ಬಾಲಕಿಯ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಾಗುತ್ತದೆ.
-ಉದಯರವಿ, ಪೊಲೀಸ್ ಇನ್ಸ್‌ಪೆಕ್ಟರ್