ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಉಗ್ರರ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ವೈದ್ಯರು ಮತ್ತು ಪೊಲೀಸ್ ಸೇರಿದಂತೆ ನಾಲ್ವರು ಸರ್ಕಾರಿ ನೌಕರರನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತ ಬುಧವಾರ ವಜಾಗೊಳಿಸಿದೆ.
ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಇಂತಹ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರ ನೀಡುವ ಭಾರತದ ಸಂವಿಧಾನದ 311 ನೇ ವಿಧಿಯ (2) ಖಂಡದ ನಿಬಂಧನೆಯ ಉಪ-ಕಲಂ (ಸಿ) ಅನುಸಾರವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಶ್ರೀನಗರದ ಎಸ್‌ಎಂಎಚ್‌ಎಸ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ (ವೈದ್ಯಕೀಯ), ನಿಸಾರ್-ಉಲ್-ಹಸನ್, ಕಾನ್ಸ್‌ಟೇಬಲ್ (ಜಮ್ಮು ಮತ್ತು ಕಾಶ್ಮೀರ ಪೊಲೀಸ್) ಅಬ್ದುಲ್ ಮಜೀದ್ ಭಟ್, ಉನ್ನತ ಶಿಕ್ಷಣ ಇಲಾಖೆಯ ಲ್ಯಾಬೋರೇಟರಿ ಬೇರರ್ ಅಬ್ದುಲ್ ಸಲಾಂ ರಾಥರ್ ಮತ್ತು ಶಿಕ್ಷಣ ಇಲಾಖೆಯ ಶಿಕ್ಷಕ ಫಾರೂಕ್ ಅಹ್ಮದ್ ಮಿರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಫಾರೂಕ್ ಅಹ್ಮದ್ ಮಿರ್ ಅವರನ್ನು 1994 ರಲ್ಲಿ ಶಿಕ್ಷಣ ಇಲಾಖೆಗೆ ನೇಮಿಸಲಾಯಿತು ಆ ಬಳಿಕ 2007 ರಲ್ಲಿ ಶಿಕ್ಷಕರಾಗಿ ಬಡ್ತಿ ಹೊಂದಿದ್ದರು.
ಅಧಿಕಾರಿಗಳ ಮಾಹಿತಿ ಪ್ರಕಾರ ಈ ನಾಲ್ವರು ಸರ್ಕಾರಿ ನೌಕರರು ಉಗ್ರಗಾಮಿ ಸಂಘಟನೆಗಳಿಗೆ ಹಣಕಾಸು ಸಂಗ್ರಹಿಸಿರುವುದಲ್ಲದೆ ಅವರ ಸಿದ್ಧಾಂತವನ್ನು ಪ್ರಚಾರ ಮಾಡಿದ್ದಾರೆಂದು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಭಯೋತ್ಪಾದಕರ ಜೊತೆ ಸಂಪರ್ಕ, ಭಯೋತ್ಪಾದಕ ಚಟುವಟಿಕೆ, ಉಗ್ರರಿಗೆ ಹಣಕಾಸಿನ ನೆರವು ಹೀಗೆ ಸಂವಿಧಾನದ 311 (2) (ಸಿ) ಅಡಿಯಲ್ಲಿ 50 ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Israel-Hamas War: 50 ಒತ್ತೆಯಾಳುಗಳ ಬಿಡುಗಡೆಗೆ 4 ದಿನ ಕದನ ವಿರಾಮ ಘೋಷಿಸಿದ ಇಸ್ರೇಲ್