ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನ್ಯೂರೋಲಾಜಿಸ್ಟ್ ವಿಭಾಗದ ವೈದ್ಯರೊಬ್ಬರು ವಾಟ್ಸ್‌ಆ್ಯಪ್‌ನಲ್ಲಿ ಡೆತ್‌ನೋಟ್ ಬರೆದಿಟ್ಟು ತಾವು ವಾಸವಾಗಿದ್ದ ಅಪಾರ್ಟ್‌ಮೆಂಟ್‌ನ 11ನೇ ಮಹಡಿಯಿಂದ ಜಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಮೃತಹಳ್ಳಿಯ ಗೋದ್ರೇಜ್ ಅಪಾರ್ಟ್‌ಮೆಂಟ್ ನಿವಾಸಿ ಡಾ| ಪೃಥ್ವಿಕಾಂತ್ ರೆಡ್ಡಿ(31) ಆತ್ಮಹತ್ಯೆ ಮಾಡಿಕೊಂಡ ವೈದ್ಯ.
ಆಂಧ್ರಪ್ರದೇಶದ ಕಡಪ ಮೂಲದ ಪೃಥ್ವಿಕಾಂತ್ ರೆಡ್ಡಿ ಸ್ನಾತಕೋತ್ತರ ವೈದ್ಯಕೀಯ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನ್ಯೂರೋಲಾಜಿಸ್ಟ್ ವಿಭಾಗದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಮೂರು ತಿಂಗಳ ಹಿಂದಷ್ಟೇ ರಾಮಯ್ಯ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯೆಯಾಗಿದ್ದ ತನ್ಮಯಿ ಅವರನ್ನು ಮದುವೆಯಾಗಿದ್ದು, ದಂಪತಿ ಅಮೃತಹಳ್ಳಿಯ ಗೋದ್ರೆಜ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಈ ಮಧ್ಯೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಇದರಿಂದ ನೊಂದಿದ್ದರು. ಈ ವಿಚಾರವನ್ನು ಪತ್ನಿ ಬಳಿ ಹೇಳಿಕೊಂಡಿರಲಿಲ್ಲ ಎಂದು ಹೇಳಲಾಗಿದೆ.
11ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ
ತಮ್ಮ ಹೃದಯ ಸಂಬಂಧಿ ಕಾಯಿಲೆಯಿಂದ ಮಾನಸಿಕವಾಗಿನೊಂದಿದ್ದ ಪೃಥ್ವಿಕಾಂತ್ ರೆಡ್ಡಿ, ಮನೆಯಲ್ಲಿ ಪತ್ನಿ ಮಲಗಿದ್ದಾಗ ಬುಧವಾರ ಮುಂಜಾನೆ 11ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆಲಕ್ಕೆ ಬಿದ್ದ ಶಬ್ದ ಕೇಳಿ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿಗಾರ್ಡ್ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ತೀರ್ಥಹಳ್ಳಿ ಪಾದಯಾತ್ರೆಯಲ್ಲಿ ಕನ್ನಡ ಧ್ವಜಕ್ಕೆ ಅಪಮಾನ!: ಆರೋಪ
ಮೊಬೈಲ್‌ನಲ್ಲಿ ಡೆತ್‌ನೋಟ್
ಘಟನೆ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪೃಥ್ವಿಕಾಂತ್ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಡೆತ್‌ನೋಟ್ ಬರೆದಿರುವುದು ಪತ್ತೆಯಾಗಿದೆ. “ನಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ಇದು ವಾಸಿಯಾಗುವ ಸಾಧ್ಯತೆಗಳಿಲ್ಲ. ಹೀಗಾಗಿ ನೀನು ಬೇರೆ ವಿವಾಹವಾಗು’ ಎಂದು ಪತ್ನಿಯನ್ನು ಉದ್ದೇಶಿಸಿ ಬರೆದಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು. ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.