ಮಂಡ್ಯ/ಮಡಿಕೇರಿ: ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಆಲೆಮನೆಯಲ್ಲಿ ಹೆಣ್ಣು ಭ್ರೂಣಪತ್ತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಆರೋಪಿಸಲಾಗಿದ್ದ ಆಯುರ್ವೇದಿಕ್ ವೈದ್ಯರೊಬ್ಬರು ಕುಶಾಲನಗರ ತಾಲೂಕಿನ ಆನೆಕಾಡು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶವವಾಗಿ ಶುಕ್ರವಾರ ಪತ್ತೆಯಾಗಿದ್ದಾರೆ.
ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದ ಡಾ.ಸತೀಶ್(47) ಮೃತ ವೈದ್ಯ.
ಈತ ಈ ಹಿಂದೆ ಮಂಡ್ಯ ತಾಲೂಕಿನ ಶಿವಳ್ಳಿಯಲ್ಲಿ ಶ್ರೀ ವೆಂಕಟೇಶ್ವರ ಕ್ಲಿನಿಕ್‌ನಲ್ಲಿ ಆಯುರ್ವೇದಿಕ್ ವೈದ್ಯ ವೃತ್ತಿ ನಡೆಸುತ್ತಿದ್ದರು.
ಇತ್ತೀಚೆಗೆ ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿ ಯಾಗಿದ್ದ ಮಂಡ್ಯದ ಭ್ರೂಣಪತ್ತೆ ಪ್ರಕರಣದಲ್ಲಿ ಡಾ.ಸತೀಶ್ ಅವರ ಹೆಸರು ಕೇಳಿಬಂದಿತ್ತು. ಗುರುವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೃತ್ಯ ನಡೆಯುತ್ತಿತ್ತು ಎನ್ನಲಾದ ಆಲೆಮನೆಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಗ್ರಾಮಸ್ಥರು ಡಾ.ಸತೀಶ್ ವಿರುದ್ಧ ಆರೋಪ ಮಾಡಿದ್ದರು. ಅಲ್ಲದೆ, ಈ ಹಿಂದೆ ಮಂಡ್ಯದಲ್ಲಿ ನಡೆದಿದ್ದ ನಮ್ಮ ಮನೆ ನಮ್ಮ ಪಾಲಿ ಕ್ಲಿನಿಕ್ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿಯೂ ಇವರು ಭಾಗಿಯಾಗಿದ್ದರೆಂಬ ಆರೋಪಗಳು ಕೇಳಿಬಂದಿದ್ದವು.
ಈ ಪ್ರಕರಣ ವಿಚಾರಣೆ ಹಂತದಲ್ಲಿತ್ತು. ಇತ್ತೀಚೆಗೆ ಹಾಡ್ಯದ ಆಲೆಮನೆಯಲ್ಲಿ ಭ್ರೂಣಪತ್ತೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈತನ ವಿರುದ್ಧವೂ ಆರೋಪ ಕೇಳಿಬಂದಿತ್ತು. ಆದರೆ ಇದ್ದಕ್ಕಿದ್ದಂತೆ ಡಾ.ಸತೀಶ್ ಕುಶಾಲನಗರ ತಾಲೂಕಿನ ಆನೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಕಾರಿನಲ್ಲಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಡಾ.ಸತೀಶ್ ಪ್ರಸ್ತುತ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕೊಣಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುರ್ವೇದಿಕ್ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ. ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.