2500 ವರ್ಷಗಳ ಹಿಂದೆ ಬೆರಳಿನ ಉಂಗುರಗಳ ಇತಿಹಾಸವಿದೆ. ಈಜಿಪ್ಟಿನ ನಾಗರಿಕರು ಮೊದಲು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಿದ್ದರು. ಈಗಿನ ಕಾಲದಲ್ಲಿ ಹುಡುಗ-ಹುಡುಗಿಯರ ಕೈಯಲ್ಲಿ ವಿಧವಿಧವಾದ ಉಂಗುರಗಳು ಕಾಣಿಸುತ್ತಿದೆ. ಆಮೆ ಪ್ರತಿಮೆಯು ಅಂಗಡಿಗಳಲ್ಲಿ , ಮನೆಯ ಶೋಕೇಸ್‌ಗಳಲ್ಲಿ ಆಲಂಕಾರಿಕ ವಸ್ತುವಾಗಿ ಇರುವುದನ್ನು ನಾವು ನೋಡಿದ್ದೇವೆ. ಆದರೆ, ಇತ್ತೀಚೆಗೆ ಹೊಸ ಬಗೆಯ ಉಂಗುರ ಚಾಲ್ತಿಯಲ್ಲಿದ್ದು, ಹೊಸ ಟ್ರೆಂಡ್ ಆಗಿದೆ. ಅದೇ ಆಮೆ ಆಕಾರದ ಉಂಗುರ.
ಆಮೆ ಆಕಾರದ ಉಂಗುರ ಧರಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ದೋಷಗಳು ನಿವಾರಣೆಯಾಗುತ್ತದೆ. ಹಾಗೇ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆಮೆ ಪ್ರಗತಿಯ ಸಂಕೇತ, ಸಮೃದ್ಧಿಯ ಪ್ರತೀಕ. ಆಮೆ ವಿಷ್ಣುವಿನ ಅವತಾರ ಎಂದು ನಾವು ಕೇಳಿದ್ದೇವೆ. ಹಾಗೆ ಸಮುದ್ರಮಥನದ ಸಮಯದಲ್ಲಿ ಆಮೆ ಉತ್ಪನ್ನವಾಗಿದೆ, ಆದ್ದರಿಂದ ಆಮೆಗೆ ಮಹಾಲಕ್ಷ್ಮೀಯ ಕೃಪೆ ಇದೆ. ಇದನ್ನು ಧರಿಸುವುದರಿಂದ ಧನ ಲಾಭವಾಗುತ್ತದೆ. ಜೊತೆಗೆ ಧೈರ್ಯ, ಶಾಂತಿ, ಸಮಾಧಾನ ಎಂದು ಹೇಳಲಾಗಿದೆ. ಹೇಗೆ ಆಮೆ ಸುದೀರ್ಘವಾಗಿ ಜೀವಿಸುತ್ತದೋ? ಹಾಗೆ ಈ ಆಕರದ ಉಂಗುರ ಧರಿಸುವುದರಿಂದ ವ್ಯಕ್ತಿಯ ಆಯುಷ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
ಆಮೆ ಉಂಗುರವನ್ನು ಚಿನ್ನ, ಬೆಳ್ಳಿ, ವಜ್ರದಿಂದ ತಯಾರಿಸುತ್ತಾರೆ.ಆದರೆ, ಬೆಳ್ಳಿ ಉಂಗುರ ಒಳ್ಳೆಯದು ಎಂದು ಹೇಳುತ್ತಾರೆ. ಅದನ್ನು ಬಲ ಕೈಗೆ ಧರಿಸುವುದು ಒಳ್ಳೆಯದು. ಆಮೆಯ ಮುಖವನ್ನು ನಮ್ಮತ್ತ ಕಾಣುವಂತೆ ಧರಿಸಬೇಕು. ಏಕೆಂದರೆ, ಅದನ್ನು ಎದುರುಮುಖವಾಗಿ ಧರಿಸಿದರೆ ನಮ್ಮಿಂದ ಹಣ, ಶಾಂತಿ ಎಲ್ಲವೂ ಹೋಗುತ್ತದೆ. ನಮ್ಮ ಕಡೆಗೆ ಅದರ ಮುಖ ಬರುವಂತೆ ಧರಿಸಿದರೆ ಹಣ, ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಧರಿಸಿದ ನಂತರ ಅದನ್ನು ಯಾವತ್ತೂ ತಿರುಗಿಸಬಾರದು ಅಥವಾ ತೆಗೆದು ಹಾಕಬಾರದು. ಅದರ ಶಕ್ತಿ ಹೋಗುತ್ತದೆ ಎಂಬ ನಂಬಿಕೆ ಇದೆ. ಈ ಆಮೆ ಉಂಗುರವನ್ನು ನಾವು ಖರೀದಿಸುವುದಕ್ಕಿಂತ ಇನ್ನೊಬ್ಬರು ಉಡುಗೊರೆಯಾಗಿ ನೀಡುವುದು ಉತ್ತಮ.
ಈಗಿನ ಹೊಸ ಟ್ರೆಂಡ್ ಕಾಲದಲ್ಲಿ ಆಮೆ ಉಂಗುರ ಎಲ್ಲರ ಕೈಯಲ್ಲಿ ರಾರಾಜಿಸುತ್ತಿದೆ. ಕೆಲವರು ಅಂದಕ್ಕಾಗಿ ಬಳಸುತ್ತಾರೆ. ಇನ್ನು ಕೆಲವರು ಟ್ರೆಂಡ್ ಎಂದು ಹಾಕುತ್ತಾರೆ. ಶಾಂತಿ-ನೆಮ್ಮದಿಗಾಗಿ ಧರಿಸುತ್ತಾರೆ, ಇದರಿಂದ ಸಮೃದ್ಧಿಯಾಗುತ್ತದೋ ಅಥವಾ ಬದಲಾವಣೆಯಾಗುತ್ತದೋ ಗೊತ್ತಿಲ್ಲ. ಅದೆಲ್ಲ ನಮ್ಮ ನಮ್ಮ ಮನಸ್ಸಿಗೆ, ನಂಬಿಕೆಗೆ ಸಂಬಂಧ ಪಟ್ಟಿದ್ದು. ಕೆಲವರಿಗೆ ಧನಾಗಮನ, ಶಾಂತಿ ದೊರಕಿದ್ದೂ ಇದೆ. ಇನ್ನು ಕೆಲವರು ಅದನ್ನು ನಂಬದೆ ಇರುವವರು ಫ್ಯಾಷನ್ ಮಾತ್ರ ಎಂದು ಧರಿಸಿದವರು ಇದ್ದಾರೆ.
ಆದೇನೆ ಇರಲಿ, ಆಮೆ ಉಂಗುರ ಈಗಿನ ಹೊಸ ಟ್ರೆಂಡ್ ಆಗಿ ಚಾಲ್ತಿಯಲ್ಲಿದ್ದು , ಬಹು ಬೇಡಿಕೆಯ ಉಂಗುರವಾಗಿದೆ.
ಚೈತ್ರಾ
ತೃತೀಯ ಬಿಎ., ಪತ್ರಿಕೋದ್ಯಮ ವಿದ್ಯಾರ್ಥಿ,
ಎಂಜಿಎಂ ಕಾಲೇಜು, ಉಡುಪಿ