Advertisement
ನೆಂಟರಿಷ್ಟರ ಮನೆಗೆ ಹೋದಾಗಲೆಲ್ಲಾ ನನ್ನದೊಂದು ಅಭ್ಯಾಸ. ಅವರ ಹಳೆಯ ಫೋಟೋಗಳನ್ನು ನೋಡುವುದು. ನನ್ನ ಈ ವರ್ತನೆ ನೋಡಿ ಉತ್ಸಾಹಿತರಾಗುವ ಆ ಮನೆಯವರು ಕಂತೆಗಟ್ಟಲೆ ಫ್ಯಾಮಿಲಿ ಆಲ್ಬಮ್ಮುಗಳನ್ನು ಟೀಪಾಯ… ಮೇಲಿರಿಸಿ, ಕುಡಿಯಲು ಪಾನೀಯ, ತಿನ್ನಲು ಕುರುಕಲು ತಿಂಡಿ ಪ್ಲೇಟ್‌ನಲ್ಲಿ ಕೊಟ್ಟು ಕೂರಿಸಿ ಹೋಗುತ್ತಾರೆ. ಮನೆಯ ಅಲ್ಮೆರಾಗಳಲ್ಲಿ, ಬಟ್ಟೆಗಳ ಮಧ್ಯದಲ್ಲಿ ದಶಕಗಳ ಕಾಲದಿಂದ ಸ್ಥಾನ ಪಡೆದಿರುವ ಫ್ಯಾಮಿಲಿ ಆಲ್ಬಮ್ಮುಗಳನ್ನು ಪ್ರಪಂಚದ ಮೊದಲ ಇನ್‌ಸ್ಟಗ್ರಾಮ್ ಎಂದು ಕರೆಯಬಹುದು. ನಮ್ಮ ಬದುಕಿನ ಪುಟಗಳನ್ನು ಇಂದು ನಾವೆಲ್ಲರೂ ಇನ್‌ಸ್ಟಗ್ರಾಮ್‌ನಂಥ ಫೋಟೋ ಶೇರಿಂಗ್ ಜಾಲತಾಣಗಳಲ್ಲಿ ಜಗತ್ತಿಗೇ ಪ್ರಚುರ ಪಡಿಸುತ್ತಿದ್ದೇವೆ. ಹಿಂದೆಲ್ಲಾ ಮನೆಗೆ ಬಂದ ಅತಿಥಿಗಳಿಗೆ ಮನೆಯವರು ತಮ್ಮಲ್ಲಿದ್ದ ಫ್ಯಾಮಿಲಿ ಆಲ್ಬಮ್ಮುಗಳನ್ನು ತೋರಿಸುತ್ತಿದ್ದರು. ಅದರಲ್ಲೂ ಅತಿಥಿಗಳು ಆಲ್ಬಂ ಪುಟಗಳನ್ನು ತಿರುವುತ್ತಿದ್ದರೆ ಮನೆಯಾಕೆಗೆ ಎಲ್ಲಿಲ್ಲದ ಸಂಭ್ರಮ. ನಡು ನಡುವೆ ಫೋಟೋದಲ್ಲಿರುವವರು ಯಾರು, ಅದನ್ನು ಯಾವ ಸಂದರ್ಭದಲ್ಲಿ ತೆಗೆದಿದ್ದು ಎಂಬುದನ್ನು ಸ್ಥಳದಲ್ಲೇ ಆಕೆ ವಿವರಿಸುತ್ತಿದ್ದಳು. ಇಂದು ಡಿಜಿಟಲ… ಫೋಟೋಗಳ ಜಮಾನಾ ಬಂದಿದ್ದರೂ, ಪ್ರಿಂಟು ಹಾಕಿಸಿದ ಫ್ಯಾಮಿಲಿ ಆಲ್ಬಮ್ಮುಗಳು ನೀಡುವ ಅನುಭೂತಿಯೇ ಬೇರೆ. ಸಾವಿರಾರು ಫೋಟೋಗಳನ್ನು ನಾವಿಂದು ಕ್ಲಿಕ್ಕಿಸುತ್ತಿದ್ದೇವೆ, ಮೆಮೋರಿ ಕಾರ್ಡ್ ಭರ್ತಿಯಾಗುವಷ್ಟು ಫೋಟೋಗಳನ್ನು ತುಂಬಿಸುತ್ತಿದ್ದೇವೆ. ಫ್ಯಾಮಿಲಿ ಆಲ್ಬಮ್ಮುಗಳನ್ನು ಜತನದಿಂದ ಕಾಪಿಟ್ಟುಕೊಳ್ಳುತ್ತಿದ್ದ ಕಾಲ ಈಗಿಲ್ಲ. ಫೋಟೋಗಳು ಮತ್ತು ಅದು ತನ್ನಲ್ಲಿ ಹಿಡಿದಿಟ್ಟ ನೆನಪುಗಳ ಭಾವ, ಇವ್ಯಾವುದರ ಕುರಿತೂ ಸೆಂಟಿಮೆಂಟಲ್ ಭಾವನೆ ನಮ್ಮಲ್ಲಿ ಕಳೆದು ಹೋಗುತ್ತಿದೆ ಎಂದು ಕೆಲವೊಮ್ಮೆ ನನಗೆ ಅನ್ನಿಸುತ್ತದೆ.
Related Articles
Advertisement
ಒಂದು ಲಕ್ಷ ಕೋಟಿಪ್ರಖ್ಯಾತ ಫೋಟೋಗ್ರಫಿ ಉತ್ಪನ್ನ ತಯಾರಕ ಕಂಪನಿ ಕೊಡ್ಯಾಕ್, 2000 ಇಸವಿಯನ್ನು ಗಮನಾರ್ಹ ಎಂದು ಬಣ್ಣಿಸಿತ್ತು. ಏಕೆಂದರೆ ಆಗಿನ್ನೂ ಸ್ಮಾರ್ಟ್‌ಫೋನುಗಳು, ಅಧಿಕ ಮೆಗಾಪಿಕ್ಸೆಲ್‌ಗಳ ಗೀಳು ಶುರುವಾಗಿರಲಿಲ್ಲ. ಜನರು ಇನ್ನೂ ರೀಲುಗಳನ್ನು ಬಳಸುತ್ತಿದ್ದರು. ಈಗಿನಂತೆ ಬೇಕಾಬಿಟ್ಟಿ, ಮನಸೋಇಚ್ಛೆ ಫೋಟೋ ತೆಗೆಯುತ್ತಿರಲಿಲ್ಲ. ರೀಲು ಖಾಲಿಯಾಗುವುದೆಂಬ ಕಾರಣಕ್ಕೆ ಅಳೆದು ತೂಗಿ ಫೋಟೋ ಕ್ಲಿಕ್ಕಿಸುತ್ತಿದ್ದರು. ಹೀಗಾಗಿ, ಪ್ರತಿವರ್ಷ ಜಗತ್ತಿನಾದ್ಯಂತ ತೆಗೆಯಲ್ಪಡುತ್ತಿದ್ದ ಒಟ್ಟು ಫೋಟೋಗಳ ಸಂಖ್ಯೆ 8000 ಕೋಟಿಯ ಆಸುಪಾಸಿನಲ್ಲಿರುತ್ತಿತ್ತು. 2017ನೇ ಇಸವಿಯಲ್ಲಿ ಈ ಸಂಖ್ಯೆ, ಒಂದು ಲಕ್ಷ ಕೋಟಿ ದಾಟಿತ್ತು. ಡಿಜಿಟಲ್ ಕಾಮೆರಾಗಳು, ಕ್ಯಾಮೆರಾ ಫೋನುಗಳ ಸುಧಾರಿತ ತಂತ್ರಜ್ಞಾನದ ಫಲಶ್ರುತಿ ಇದಾಗಿತ್ತು. ಫ್ಯಾಮಿಲಿ ಫೋಟೋ ಪವರ್
ಫ್ಯಾಮಿಲಿ ಫೋಟೋಗೆ ಇರುವ ತಾಕತ್ತನ್ನು ತಿಳಿಸುವ ಒಂದು ಘಟನೆ ಇಲ್ಲಿದೆ. ಸ್ಕಾಟ್ಲೆಂಡ್‌ನ ಮನಃಶಾಸ್ತ್ರಜ್ಞ ರಿಚರ್ಡ್ ವೈಸ್‌ಮನ್ ಒಂದು ವಿಲಕ್ಷಣವಾದ ಸಂಶೋಧನೆ ಕೈಗೊಂಡ. ಸಾರ್ವಜನಿಕ ಸ್ಥಳಗಳಲ್ಲಿ ಪರ್ಸುಗಳನ್ನು ಬೇಕೆಂದೇ ಬೀಳಿಸಿ ಬರುವುದು. ಈ ರೀತಿ ಆತ ಬಿಟ್ಟುಬಂದ ಪರ್ಸುಗಳು 240. ಖಾಲಿ ಪರ್ಸ್ ಎಂದುಕೊಳ್ಳದಿರಿ ಅದರಲ್ಲಿ ದುಡ್ಡು ಕೂಡಾ ಇತ್ತು. ಅವನಿಗೆಲ್ಲೋ ಅರಳು ಮರಳಿರಬೇಕು ಎಂದುಕೊಳ್ಳದಿರಿ. ಪರ್ಸಿನಲ್ಲಿ ದುಡ್ಡಿನ ಜೊತೆಗೆ ಫ್ಯಾಮಿಲಿ ಫೋಟೋವನ್ನು ಇಟ್ಟಿದ್ದ. ಇನ್ನು ಕೆಲ ಪರ್ಸುಗಳಲ್ಲಿ ಮಗುವಿನ ಭಾವಚಿತ್ರವಿದ್ದರೆ ಮತ್ತು ಕೆಲವುದರಲ್ಲಿ ಬರೀ ದುಡ್ಡು ಮಾತ್ರ ಇಟ್ಟಿದ್ದ! ಈ ಪರ್ಸುಗಳಲ್ಲಿ ಅನೇಕವು ಹಿಂದಿರುಗಿ ಬಂದವು. ಸಿಕ್ಕವರು ಪರ್ಸ್‌ನ ಐ.ಡಿ. ಕಾರ್ಡ್‌ನಲ್ಲಿದ್ದ ವಿಳಾಸಕ್ಕೆ ಅದನ್ನು ಕೊರಿಯರ್ ಮಾಡಿದರು. ಸಂಶೋಧನೆಯ ಫಲಿತಾಂಶ ಅಚ್ಚರಿ ಮೂಡಿಸುವಂಥದ್ದು. ಯಾವ ಫೋಟೋ ಇಲ್ಲದ ಪರ್ಸುಗಳಲ್ಲಿ ಶೇ.22ರಷ್ಟು ಮಾತ್ರ ಮರಳಿದರೆ, ಫ್ಯಾಮಿಲಿ ಫೋಟೋ ಇದ್ದ ಪರ್ಸುಗಳಲ್ಲಿ ಶೇ.88ರಷ್ಟು ಮರಳಿದವು. ನಾವು ಫ್ಯಾಮಿಲಿ ಫೋಟೋಗಳಿಗೆ ನೀಡುವ ಬೆಲೆಯನ್ನು ಇದರಿಂದ ತಿಳಿಯಬಹುದು. ನಗ್ರಪ್ಪಾ ಎಲ್ಲಾರೂ…
ಹಳೆಯ ಫ್ಯಾಮಿಲಿ ಫೋಟೋಗಳಲ್ಲಿ ಜನರು ನಗದೇ ಇರುವುದನ್ನು ನೀವು ಗಮನಿಸಿದ್ದೀರಾ? ಹಳೆಯದು ಎಂದರೆ ಕನಿಷ್ಠ ಪಕ್ಷ 6- 7 ದಶಕಗಳಿಗೂ ಹಿಂದಿನದು. ಅಷ್ಟು ಹಳೆಯ ಫೋಟೋ ಮುಂದಿನ ಬಾರಿ ಸಿಕ್ಕಾಗ ಗಮನಿಸಿ, ಜನರು ಮುಖವನ್ನು ಗಂಟಿಕ್ಕಿಕೊಂಡಿರುವ ಸಂಗತಿ ನಿಮ್ಮ ಕಣ್ಣಿಗೂ ಬಿದ್ದೀತು. ಫ್ಯಾಮಿಲಿ ಫೋಟೋಗೆ ಪೋಸ್ ಕೊಡುವಾಗ ಇತರರಿಗಿಂತ ನಾವೇ ಚಂದಕೆ ಕಾಣಬೇಕು ಎಂದು ಸಿಂಗರಿಸಿಕೊಂಡು ಬರುತ್ತೇವೆ. ಫೋಟೋದಲ್ಲಿ ನಾವೇ ಎದ್ದುಕಾಣಬೇಕು ಎಂಬ ದೃಷ್ಟಿಯಿಂದ ಡಕ್ ಫೇಸ್, ಕಣ್ಣಗಲಿಸುವುದು, ಹೀಗೆ… ಏನೇನು ಮಾಡಬೇಕೋ ಅವೆಲ್ಲ ಕಸರತ್ತನ್ನೂ ಮಾಡುತ್ತೇವೆ. ಆದರೆ, ಆ ಹಳೆಯ ಫೋಟೋದಲ್ಲೇಕೆ ಜನರು ಮುಖ ಗಂಟಿಕ್ಕಿಕೊಂಡಿರುತ್ತಿದ್ದರು? ಅದಕ್ಕೆ ಕಾರಣ ತಿಳಿದರೆ ನೀವು ನಕ್ಕುಬಿಡುತ್ತೀರಾ. ಆಗಿನ ಕ್ಯಾಮೆರಾಗಳು ಭಾರಿ ತೂಕವನ್ನು ಹೊಂದಿರುತ್ತಿದ್ದವು. ಅದನ್ನು ಆಪರೇಟ್ ಮಾಡುವುದು ಸುಲಭವಿರಲಿಲ್ಲ. ಕ್ಯಾಮೆರಾದ ಎದುರಿನ ದೃಶ್ಯಾವಳಿ ನೆಗೆಟಿವ್ ಪ್ಲೇಟ್ ಮೇಲೆ ಮೂಡಲು ಗಂಟೆಗಳ ಕಾಲ ಹಿಡಿಯುತ್ತಿತ್ತು. ಅದರ ಅರ್ಥ ನಿಮಗೂ ಗೊತ್ತಾಗಿರಬೇಕಲ್ಲ? ಅಷ್ಟು ಸಮಯ ಅಂದರೆ ಗಂಟೆಗಟ್ಟಲೆ ವ್ಯಕ್ತಿಗಳು ಕ್ಯಾಮೆರಾ ಮುಂದೆ ವಿಗ್ರಹದಂತೆ ಕುಳಿತೋ ನಿಂತೋ ಇರಬೇಕಾಗುತ್ತಿತ್ತು. ಅಷ್ಟು ದೀರ್ಘ ಕಾಲ ನಗುತ್ತಲೇ ಇರುವುದಕ್ಕಾಗುತ್ತದೆಯೇ? – ಹರ್ಷವರ್ಧನ್ ಸುಳ್ಯ