ನಿನ್ನೊಂದಿಗೆ ಕಳೆದ ಸವಿ ಘಳಿಗೆಯ ಸಿಹಿ ನೆನಪುಗಳನ್ನು ಹಿಡಿದು ಕಟ್ಟಿ ಹಾಕಬೇಕೆಂದರೂ ಆಗುತ್ತಿಲ್ಲ. ಸೆರೆ ಹಿಡಿದು ಸುಟ್ಟು ಹಾಕಬೇಕೆಂದರೆ ಸಿಗುತ್ತಿಲ್ಲ. ನಿನ್ನ ಮರೆತು ಬಾಳುವ ಶಕ್ತಿಯೂ ನನಗಿಲ್ಲ…
ನನ್ನೆದೆಯ ಗೂಡಿನಲ್ಲಿ ಕಡ್ಡಿ ಕಡ್ಡಿ ಕೂಡಿಸಿ, ಗೂಡು ಕಟ್ಟಿ, ಬೀಡು ಬಿಟ್ಟ ಪುಟ್ಟ ಹಕ್ಕಿಯೇ, ನಿನ್ನ ಚಿಲಿಪಿಲಿಯ ಗಾನವು ಸಾವಿರ ವೀಣೆಯ ಗಾನ ಮಾಧುರ್ಯದಂತೆ. ಬರಡಾದ ಬಾಳಲ್ಲಿ ಸದ್ದಿಲ್ಲದೆ ಬಂದು ಪ್ರೀತಿಯ ಸಿರಿ ಬಿತ್ತಿ ಬೆಳೆದವಳೇ, ನಿನ್ನ ಪರಿಚಯವೇ ನನಗೊಂದು ಆಕಸ್ಮಿಕ. ಪರಿಚಯ ಸ್ನೇಹವಾಗಿ, ಸ್ನೇಹವೇ ಪ್ರೀತಿಯತ್ತ ವಾಲಿತು ಅಲ್ವಾ? ರೋಜಾ ಹೂವಿನೊಂದಿಗೆ ಸ್ಪರ್ಧಿಸುವ ಆ ನಿನ್ನ ಮೈ ಕಾಂತಿ, ಕಂಡೂ ಕಾಣದಂತಿದ್ದು ನಿನ್ನ ಚೆಲುವು ಹೆಚ್ಚಿಸುವ ಆ ನಿನ್ನ ಬಿಂದಿ, ಹೊಳೆಯುವ ಆ ನಿನ್ನ ಕಪ್ಪು ಹುಬ್ಬು, ಮಗುವಿನ ಆ ನಿನ್ನ ಕಿಲಕಿಲ ನಗು, ರಸಗುಲ್ಲದಂಥ ಆ ನಿನ್ನ ಗಲ್ಲ, ಬಂಗಾರದ ಬಣ್ಣದ ಆ ನೀಳ ಕೇಶರಾಶಿ… ಹೀಗೆ ನೀನು ಎಲ್ಲದರಲ್ಲಿಯೂ ಪದಗಳಿಗೂ ಸಿಗದ ಚೆಂದದ ಚೆಲುವಿನ ತಾರೆ.
ನಿನ್ನ ರೂಪವೇ ಲಲಿತವಾದದ್ದು. ನಿನ್ನ ರೂಪಕ್ಕೆ ಮರುಳಾಗಿ ಲೆಕ್ಕವಿಲ್ಲದಷ್ಟು ಲವ್ ಅಪ್ಲಿಕೇಷನ್‌ಗಳು ಬಂದರೂ ಅವುಗಳನ್ನು ತಿರಸ್ಕರಿಸಿ ನನ್ನನ್ನು ಪ್ರೀತಿಸಿದೆ. ರೂಪಕ್ಕೆ ಮರುಳಾಗಿ ಪ್ರೀತಿಸಿದವ ನಾನಲ್ಲ. ಇಷ್ಟಪಟ್ಟಿರುವುದನ್ನು ಎಷ್ಟೇ ಕಷ್ಟವಾದರೂ ಪಡೆದೇ ತೀರಬೇಕೆನ್ನುವ ಹುಂಬತನದೊಳಗೆ ಪಡೆದುಕೊಂಡುದಕ್ಕಿಂತ ಕಳೆದುಕೊಂಡುದರ ಪಟ್ಟಿಯೇ ಉದ್ದವಿದೆ.
ಆದರೂ ನಮ್ಮಿಬ್ಬರ ಪ್ರೀತಿ ಚಂದ್ರನ ಚೆಲುವಿನಂತೆ. ಚಿಪ್ಪಿನೊಳಗಿನ ಮುತ್ತಿನಂತೆ. ನಿನ್ನಾತ್ಮದ ಕುಲುಮೆಯಲಿ ಕರಗಿ ನಿನ್ನೊಲವಿನ ಬಲೆಯೊಳಗೆ ಬಂಧಿಯಾಗಿರುವೆ. ನೀರಿನ ಒಂದೊಂದು ಅಲೆಯೂ, ಮಿನುಗುವ ಒಂದೊಂದು ತಾರೆಯೂ, ಗುಂಯುಡುವ ಒಂದೊಂದು ದುಂಬಿಯೂ ನಮ್ಮ ಪ್ರೀತಿಯ ಸವಿನೆನಪಿನ ಕುರುಹುಗಳನ್ನೇ ಸಾರುತ್ತವೆ.
ಪ್ರೀತಿ ಅಂದ್ರೆ ಮುಖಕ್ಕೆ ಬಣ್ಣ ಹಚ್ಚಿಕೊಂಡು ಮಾಡುವ ನಾಟಕವಲ್ಲ ಎನ್ನುವ ವೇದವಾಕ್ಯವನ್ನು ಹೇಳಿಕೊಟ್ಟ ನೀನೇ, ಉತ್ಕಟ ಪ್ರೀತಿಯ ನಾಟಕವಾಡಿದೆ. ಕಥಾನಾಯಕಿಯಾಗಿ ಅಭಿನಯಿಸಿ ನಾಟಕವನ್ನು ಯಶಸ್ವಿಗೊಳಿಸದೆ ಖಳನಟಿಯಾಗಿ ನಟಿಸಿ ನನ್ನ ಅಮೋಘ ನಾಟಕಕ್ಕೆ ದಾರುಣ ಅಂತ್ಯ ಹಾಡಿದೆ. ನಿನ್ನೊಂದಿಗೆ ಕಳೆದ ಸವಿ ಘಳಿಗೆಯ ಸಿಹಿ ನೆನಪುಗಳನ್ನು ಹಿಡಿದು ಕಟ್ಟಿ ಹಾಕಬೇಕೆಂದರೂ ಆಗುತ್ತಿಲ್ಲ. ಸೆರೆ ಹಿಡಿದು ಸುಟ್ಟು ಹಾಕಬೇಕೆಂದರೆ ಸಿಗುತ್ತಿಲ್ಲ. ನಿನ್ನ ಮರೆತು ಬಾಳುವ ಶಕ್ತಿಯೂ ನನಗಿಲ್ಲ.
ಏಕೆ ಹೀಗಾಯಿತೋ, ನಾನು ಕಾಣೆನೂ….
– ಇಂತಿ ನಿನ್ನವ
ರಂಗನಾಥ ಎಸ್ ಗುಡಿಮನಿ