Advertisement
ಮಕ್ಕಳು ಜತೆಗಿದ್ದರೆ ಸಾಕು: ಅವರಿಗೆ ಏನಾದರೂ ಬುದ್ಧಿಮಾತು ಹೇಳುವುದು ಅಪ್ಪನಿಗೆ ಅಭ್ಯಾಸ ವಾಗಿಬಿಟ್ಟಿತ್ತು. ಬುದ್ಧಿಮಾತನ್ನಷ್ಟೇ ಹೇಳಿ ಅವರು ಸುಮ್ಮನಾಗುತ್ತಿರಲಿಲ್ಲ, ಅದಕ್ಕೆ ಹೊಂದುವಂಥ ಒಂದು ಉಪಕಥೆಯನ್ನೂ ಹೇಳುತ್ತಿದ್ದರು. “ನಾನು ಹೇಳುವುದನ್ನು ಗಮನ ವಿಟ್ಟು ಕೇಳಿಸ್ಕೊಳ್ಳಿ. ನೀವು ಮುಂದೊಮ್ಮೆ ಕಷ್ಟಕ್ಕೆ ಸಿಕ್ಕಿಕೊಂಡಾಗ ಈ ಮಾತುಗಳ ಮಹತ್ವ ಗೊತ್ತಾಗುತ್ತೆ ನಿಮಗೆ…’ ಎನ್ನುತ್ತಿದ್ದರು.
Related Articles
Advertisement
ಈ ಮಾತಲ್ಲಿ ನನಗಂತೂ ನಂಬಿಕೆ ಇರಲಿಲ್ಲ. ಫ್ರೆಂಡ್‌ಗಳಿಂದ ತೊಂದರೆಯೇ ಜಾಸ್ತಿ ಅನ್ನುವುದು ನನ್ನ ನಂಬಿಕೆಯಾಗಿತ್ತು. ಏಕೆಂದರೆ ಒಂದಿಬ್ಬರು ಗೆಳೆಯರು ಸಾಲ ಪಡೆದು ಅದನ್ನು ವಾಪಸ್ ಮಾಡದೆ ಸತಾಯಿಸುತ್ತಿದ್ದರು. ಇನ್ನೊಂದಿಬ್ಬರು, ಹೊಟ್ಟೆಕಿಚ್ಚಿನಿಂದ ಕುದಿಯುತ್ತಿದ್ದರು. ಮತ್ತೂಬ್ಬ, ನನ್ನ ಮೇಲೆ ಇಲ್ಲಸಲ್ಲದ ಗಾಸಿಪ್ ಹಬ್ಬಿಸಿದ್ದ! ಇವನ್ನೆಲ್ಲ ಅಪ್ಪನಿಗೆ ಹೇಳಿ, ಇಂಥಾ ಫ್ರೆಂಡ್‌ಗಳಿಂದ ಏನಪ್ಪಾ ಉಪಯೋಗ? ಇವರೆಲ್ಲ ಕಾಸಿನ ಅಗತ್ಯ ಇದ್ದಾಗ ಮಾತ್ರ ಬರ್ತಾರೆ. ಇಂಥವರು ಇದ್ರೆಷ್ಟು, ಬಿಟ್ಟರೆಷ್ಟು?ಅಂದೆ.
“ಛೆ ಛೆ, ಅಂಥವರಲ್ಲ ಕಣಯ್ನಾ. ನಿನ್ನ ಬಾಲ್ಯದ ಗೆಳೆಯರು ಅಂತ ಇದ್ದಾರಲ್ಲ, ಅವರಲ್ಲಿ ಎಷ್ಟೋ ಜನ ಈವರೆಗೂ ನಿನ್ನಿಂದ ಯಾವುದೇ ಸಹಾಯ ಕೇಳಿಲ್ಲ. ಆದ್ರೆ ಈಗಲೂ ತುಂಬಾ ಪ್ರೀತಿ-ವಿಶ್ವಾಸ ತೋರಿಸ್ತಾರೆ. ನೀನೇನು ಮಾಡಿದ್ದೀಯಾ ಅಂದ್ರೆ- ನಿನ್ನದೇ ಆಫೀಸ್‌ನ, ನಿನ್ನಂತೆಯೇ ಸಂಬಳ ಪಡೆ ಯುವ ಜನರನ್ನು ಹತ್ತಿರ ಬಿಟ್ಕೊಂಡಿದೀಯ. ಅವ ರನ್ನೇ ಫ್ರೆಂಡ್ಸ್ ಅಂತ ತಿಳಿದಿದ್ದೀಯ. ಅದನ್ನೇ ತಪ್ಪು ಅನ್ನೋದು. ಇವರೆಲ್ಲ, ನೀನು ಚೆನ್ನಾಗಿ ರುವಷ್ಟು ದಿನ ಮಾತ್ರ ನಿನ್ನ ಜತೆ ಇರ್ತಾರೆ. ನಾಳೆ ಅಕಸ್ಮಾತ್ ನೀನು ಏನಾದರೂ ತೊಂದರೆಗೆ ಸಿಕ್ಕಿಕೊಂಡರೆ- ತತ್‌ಕ್ಷಣ ಮಾಯ ಆಗ್ತಾರೆ. ಅಂಥವರಿಂದ ಪ್ರಯೋಜನವಿಲ್ಲ. ಯಾವುದೇ ಪ್ರತಿಫಲ ಬಯ ಸದೇ ಬಂದು, ನಾಲ್ಕು ಸಮಾಧಾನದ ಮಾತಾ ಡ್ತಾರಲ್ಲ; ಅಂಥವರು ಬೇಕು. ಅಂಥವರ ಜೊತೆ ಕಾಂಟ್ಯಾಕ್ಟ್ ಇಟ್ಕೊà..’ ಅಂದರು ಅಪ್ಪ. ಅಷ್ಟಕ್ಕೇ ಸುಮ್ಮನಾಗದೆ ನನ್ನದೇ ವಾರಿ ಗೆಯ ಐದಾರು ಜನರ ಹೆಸರನ್ನೂ ಸೂಚಿಸಿದರು.
ಅಪ್ಪ ಹೇಳಿದ್ದಕ್ಕೆಲ್ಲ ತಲೆಯಾಡಿಸಿಕೊಂಡು ಕೂರಲು ಆಗುತ್ತಾ? ಫ್ರೆಂಡ್ಸ್ ಅಂತ ಹೊರಟ್ರೆ, ಫ್ಯಾಮಿಲಿನ ಮಿಸ್ ಮಾಡ್ಕೊಬೇಕಾಗುತ್ತೆ. ನಮಗೆ ಫ್ಯಾಮಿಲಿ ಮುಖ್ಯ. ಫ್ಯಾಮಿಲಿ ಜತೆ ಲೈಫ್ನ ಎಂಜಾಯ್ ಮಾಡಬೇಕು. ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ನಾನು ರಿಟೈರ್ಡ್ ಆಗುವ ಮೊದಲೇ ಅವರಿಗೊಂದು ಕೆಲಸ ಸಿಗುವ ಹಾಗೆ ನೋಡ್ಕೊಬೇಕು… ಇಷ್ಟೇ ನನ್ನ ತಲೆಯಲ್ಲಿತ್ತು. ಹಾಗಾಗಿ ನನ್ನಿಷ್ಟದಂತೆಯೇ ಬದುಕಿಬಿಟ್ಟೆ. ಆದರೆ ಅಪ್ಪನ ಮಾತುಗಳು ಮೇಲಿಂದ ಮೇಲೆ ನೆನಪಾ ಗುತ್ತಲೇ ಇದ್ದವು. ಆಗೆಲ್ಲ ಅನಿವಾರ್ಯವಾಗಿ ಬಾಲ್ಯದ ಗೆಳೆಯರಿಗೆ ಫೋನ್ ಮಾಡಿ ಅಥವಾ ಎಲ್ಲಾದರೂ ಭೇಟಿ ಮಾಡಿ ನಾಲ್ಕಾರು ಮಾತಾಡಿ ಸುಮ್ಮನಾಗುತ್ತಿದ್ದೆ.
ಓಡುವ ಕಾಲಕ್ಕೆ ಯಾವ ತಡೆ? ಅಪ್ಪನೀಗ ಗೋಡೆಯ ಮೇಲಿನ ಚಿತ್ರವಾಗಿದ್ದರು. ಇನ್ನು ಮುಂದೆ ಮನೆಗೆ ನಾನೇ ಹಿರಿಯ ಅಂದುಕೊಳ್ಳುವ ವೇಳೆಗೆ ನನಗೂ 60 ವರ್ಷ ತುಂಬಿ, ಸೇವೆಯಿಂದ ನಿವೃತ್ತಿಯೂ ಆಯಿತು. “ಕೆಲಸ ಇಲ್ಲ’ ಎಂದು ಗೊತ್ತಾದ ತತ್‌ಕ್ಷಣ, ಅದುವರೆಗೂ ಸುತ್ತಲೂ ಇರುತ್ತಿದ್ದ ಜನ ಇದ್ದಕ್ಕಿದ್ದಂತೆ ಮಾಯವಾದರು. ಈ ಮಧ್ಯೆ ಮತ್ತೆ ಮೂರು ವರ್ಷ ಕಳೆಯುವುದರೊಳಗೆ ಹೆಂಡತಿಗೆ ಏನೇನೋ ದೈಹಿಕ ತೊಂದರೆ ಗಳು ಕಾಣಿಸಿಕೊಂಡವು. ಇನ್ನೊಂದು ಕಡೆ ಮದುವೆ ವಯ ಸ್ಸಿಗೆ ಬಂದ ಮಕ್ಕಳು ನಾನು ಹೇಳಿದ್ದಕ್ಕೆಲ್ಲ ತಕರಾರು ತೆಗೆಯತೊಡಗಿದ್ದರು. ಕೆಲಸ ಹುಡುಕಿಕೊಂಡು ಬೇರೆ ಊರಿಗೆ ಅಥವಾ ಬೇರೆ ದೇಶಕ್ಕೆ ಹೋಗಿಬಿಡುವ ಮಾತನ್ನಾಡಿದರು.
“ಅಲ್ಲಯ್ಯ, ನೀವು ಹೋಗಿಬಿಟ್ರೆ ನಮ್ಮನ್ನು ನೋಡಿಕೊಳ್ಳೋರು ಯಾರು?’ ಅಂದರೆ, ಅದಕ್ಕೆ ಉತ್ತರಿಸಲೇ ಇಲ್ಲ. ಮರುದಿನ ಇದೇ ಪ್ರಶ್ನೆಯನ್ನು ಸ್ವಲ್ಪ ಜೋರಾಗಿ ಕೇಳಿದಾಗ-“ಅದಕ್ಕೆಲ್ಲ ನಾವೇನು ಮಾಡೋಕಾಗುತ್ತೆ? ನಮಗೆ ನಮ್ಮ ಲೈಫ್ ಮುಖ್ಯ’ ಅಂದುಬಿಟ್ಟರು.
ಮಕ್ಕಳು ಆಸೆಪಟ್ಟಂತೆಯೇ ನಾನು ಬದುಕಿದ್ದೆ. ಅವರನ್ನು ಚೆನ್ನಾಗಿ ಸಾಕಲು- ಓದಿಸಲು ಇನ್ನಿಲ್ಲದ ರಿಸ್ಕ್ ತೆಗೆದುಕೊಂಡಿದ್ದೆ. ನನಗೆ ಫ್ಯಾಮಿಲಿಯೇ ಮುಖ್ಯ ಅನ್ನುತ್ತಾ ಗೆಳೆಯರು- ಬಂಧುಗಳನ್ನು ದೂರಮಾಡಿದ್ದೆ. ಆದರೀಗ, ಆ ಮಕ್ಕಳೇ ನನ್ನಿಂದ ದೂರ ಹೋಗುವ ಹವಣಿಕೆಯಲ್ಲಿದ್ದರು. ಒರಟಾಗಿ ಮಾತಾಡಿದ್ದರು. ಇಂಥದೊಂದು ಸಂದರ್ಭದ ಕಲ್ಪನೆಯೂ ನನಗಿರಲಿಲ್ಲ. ಇದೇ ಯೋಚನೆಯಲ್ಲಿ ಹಣ್ಣಾದೆ. ಅವತ್ತೂಮ್ಮೆ ತಲೆಸುತ್ತು ಬಂದಂತಾಗಿ…
ಮತ್ತೆ ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ. ಯಾಕೋ ವಿಪರೀತ ಮಾತಾಡಬೇಕು ಅನ್ನಿಸಿತು. ಮನಸ್ಸಿನ ನೋವನ್ನೆಲ್ಲ ಯಾರೊಂದಿಗಾದರೂ ಹೇಳಿಕೊಳ್ಳಬೇಕನ್ನಿಸಿತು. ಆದರೆ ನನ್ನ ಮಾತು ಕೇಳಿಸಿಕೊಳ್ಳಲು ಅಲ್ಲಿ ಯಾರೂ ಇರಲಿಲ್ಲ. ಮಕ್ಕಳು ಆಫೀಸ್‌ಗೆ ಹೋಗಿ ಬಿಟ್ಟಿದ್ದರು. ಹೆಂಡತಿ ಊಟ ತರಲೆಂದು ಮನೆಗೆ ಹೋಗಿದ್ದಳು. ಅಪ್ಪನ ಮಾತುಗಳು ನೆನಪಾಗಿದ್ದೇ ಆಗ. ಒಮ್ಮೆ ಕಾಲ್ ಮಾಡಿ ನೋಡೋಣ ಅಂದುಕೊಂಡು, ಬಾಲ್ಯದ ಇಬ್ಬರು ಗೆಳೆಯರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಇದಾಗಿ ಎರಡು ಗಂಟೆಗಳು ಕಳೆದಿಲ್ಲ; ನಾಲ್ವರು ಚಡ್ಡಿ ದೋಸ್ತ್ಗಳು ಬಂದೇ ಬಿಟ್ಟರು! ಅವರಿಗೆ ನನ್ನಿಂದ ಯಾವ ಸಹಾಯವೂ ಆಗಿರಲಿಲ್ಲ. ಸಂಸಾರ ಮೊದಲು, ಸಂಬಂಧ ಆಮೇಲೆ ಅನ್ನುವ ಹಮ್ಮಿನಲ್ಲಿ ನಾನು ಅವರೆಲ್ಲರ ಜತೆ ಬೇಕಾಬಿಟ್ಟಿ ಮಾತಾಡಿದ್ದೆ. ಅದೆಲ್ಲ ನೆನಪಾಗಿ ನಾಚಿಕೆಯಾಯಿತು.
ಉಹೂಂ, ಆ ಗೆಳೆಯರು ಅದೇನನ್ನೂ ನೆನಪಿಸಲಿಲ್ಲ. “ನಾವೆಲ್ಲ ನಿನ್ನ ಜತೆಗೆ ಇತೇವೆ. ಏನೂ ಆಗಲ್ಲ ನಿನಗೆ. ಧೈರ್ಯವಾಗಿರು. ನೀನು ಆಸ್ಪತ್ರೆಯಲ್ಲಿ ಇರುವಷ್ಟೂ ದಿನ ಬೆಳಗ್ಗೆ ಇಬ್ಬರು, ಮಧ್ಯಾಹ್ನ ಇಬ್ಬರು ಬಂದು ಕಂಪೆನಿ ಕೊಡ್ತೇವೆ. ನನ್ನ ಮಗನನ್ನು ಕಷ್ಟಕಾಲದಲ್ಲಿ ನೋಡ್ಕೊಳ್ರಪ್ಪಾ ಅಂತ ನಿಮ್ಮ ತಂದೆ ಹಿಂದೊಮ್ಮೆ ಹೇಳಿದ್ರು, ಅದೂ ನೆನಪಿದೆ ನಮಗೆ…’ ಅಂದರು.
ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿ ಇದ್ದಷ್ಟೂ ದಿನ ತಪ್ಪದೇ ಬಂದರು. ನನ್ನ ಮಾತುಗಳಿಗೆ ಕಿವಿಯಾದರು. ಕಷ್ಟಗಳಿಗೆ ಹೆಗಲಾದರು. ಒಂಟಿತನಕ್ಕೆ ಜತೆಯಾದರು. ಕಡೆಗೊಮ್ಮೆ ಡಿಸ್ಚಾರ್ಜ್ ಆದಾಗ, ಆಸ್ಪತ್ರೆಯಿಂದ ಮನೆಗೂ ಅವರೇ ಕರೆತಂದರು. ಅರ್ಧಗಂಟೆ ಜತೆಗಿದ್ದು, ಧೈರ್ಯ ಹೇಳಿ ಎದ್ದು ಹೋದರು.ಆಗಲೇ ಮತ್ತೂಮ್ಮೆ ಅಪ್ಪ ಹೇಳಿದ್ದ ಮಾತುಗಳು ನೆನಪಿಗೆ ಬಂದವು: “”ಜೀವನದಲ್ಲಿ ಯಾವತ್ತೂ ಫ್ರೆಂಡ್‌ಗಳನ್ನೂ ಮರೆಯಬೇಡ. ಆಗಾಗ ಅವರನ್ನು ಮಾತಾಡಿಸು. ಕಷ್ಟಕಾಲದಲ್ಲಿ ಫ್ರೆಂಡ್‌ಗಳು ಬೇಕಾಗ್ತಾರೆ… ” ಅಂದಹಾಗೆ, ಫ್ರೆಂಡ್‌ಗಳನ್ನು ಆಗಾಗ ಮಾತಾಡಿಸ್ತಾ ಇದ್ದೀರಿ ತಾನೇ? ಎ.ಆರ್.ಮಣಿಕಾಂತ್