ಗದಗ: ರಾಮಮಂದಿರ ನಿರ್ಮಾಣ ಹಾಗೂ ದೇಣಿಗೆ ಸಂಗ್ರಹ ಕಾರ್ಯವನ್ನು ಟ್ರಸ್ಟ್ ನಿರ್ವಹಿಸುತ್ತಿದ್ದು, ಅದಕ್ಕಾಗಿ ಕಾರ್ಯದರ್ಶಿಗಳಿದ್ದಾರೆ. ಮಂದಿರ ನಿರ್ಮಾಣದ ಆಯ-ವ್ಯಯದ ಬಗ್ಗೆ ಅವರನ್ನೇ ಪ್ರಶ್ನಿಸಲಿ. ಹಾದಿಬೀದಿಯಲ್ಲಿ ಲೆಕ್ಕ ಕೇಳುವ ಅಗತ್ಯವೇನು ಎಂದು ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮ ಮಂದಿರ ಲೆಕ್ಕವನ್ನು ಸಾರ್ವಜನಿಕವಾಗಿ ಕೇಳುವುದಕ್ಕಿಂತ ಅದಕ್ಕೊಂದು ವ್ಯವಸ್ಥೆಯಿದ್ದು, ಅದರ ಚೌಕಟ್ಟಿನಲ್ಲಿ ಕೇಳಿ ತಿಳಿದುಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದರು.
ಚುನಾವಣೆ ಹತ್ತಿರ ಬಂದಾಗ ಯಾವುದೋ ಒಂದು ಗುಂಪು ಓಲೈಸುವ ನಿಟ್ಟಿನಲ್ಲಿ ಇಲ್ಲಸಲ್ಲದ ಮಾತುಗಳನ್ನಾಡುತ್ತಾರೆ. ಒಂದು ಮತೀಯರ ಓಲೈಕೆಗಾಗಿ ಭಾರತವನ್ನು ಹಿಂದೂ ರಾಷ್ಟ್ರವಾಗಲು ಬಿಡಲ್ಲ ಎಂಬ ಮಾತುಗಳು ಸಲ್ಲದು. ಇಂತಹ ಮಾತುಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡಮಟ್ಟದ ಹಾನಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ವಿವೇಕದಿಂದ ವರ್ತಿಸಬೇಕು ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ:ಲಸಿಕಾಕರಣಕ್ಕೆ ಟಮಟೆ ಬಾರಿಸಿ, ಮೈಕ್ ಮೂಲಕ ಜಾಗೃತಿ
ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ವಿಚಾರಗಳು ಗೌಣವಾಗಿದ್ದು, ಟೀಕೆ-ಟಿಪ್ಪಣಿಗಳು ಮುನ್ನೆಲೆಗೆ ಬಂದಿವೆ. ಅಲ್ಲದೆ ಅಭಿವೃದ್ಧಿಯಲ್ಲಿ ತಮ್ಮ ಪಾತ್ರವೇನು? ತಮ್ಮ ಕೊಡುಗೆ ಏನು? ಎಂಬುದಕ್ಕಿಂತ ಮತ್ತೊಬ್ಬರ ಕಾರ್ಯವೈಖರಿ ವಿಶ್ಲೇಷಿಸುವುದೇ ಹೆಚ್ಚಾಗಿದೆ. ಇದರಿಂದ ದೇಶದ ಹಿತಕ್ಕೆ ಹಿನ್ನಡೆಯಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.