ಬಹಳ ಹಿಂದೆ, ನನ್ನ ತಂದೆಯವರ ಬಳಿ ಕೆ.ಜಿ ತೂಕದ ಆಗ್ಭಾ ಬೆಲ್ಲೋಸ್‌ಫಿಲಂ ರೋಲ್ ಕ್ಯಾಮೆರಾ ಇತ್ತು. 100 ಮಿ.ಮೀ ಅಳತೆಯ ಒಂದೊಂದು ಪ್ರೇಂನಲ್ಲಿ ಚೌಕಾಶಿ ಮಾಡಿ ಒಟ್ಟು 8 ದೃಶ್ಯಗಳನ್ನಷ್ಟೇ ಕ್ಲಿಕ್ಕಿಸುತ್ತಿದ್ದರು; ದಶಕಗಳ ನಂತರ 35 ಮಿ.ಮೀ. ಪ್ರೇಂನಲ್ಲಿ ಒಟ್ಟು 36 ಚಿತ್ರಗಳನ್ನು ದಾಖಲಿಸಬಲ್ಲ ಪುಟ್ಟ ಕ್ಯಾಮೆರಾ ಬಂದ ಮೇಲಷ್ಟೇ ಫೋಟೋಗ್ರಫಿ ಹವ್ಯಾಸ ಕೈಗೆಟುಕುವಂತಾದದ್ದು.
ಹೊಡೆದ ಫೋಟೊ ಹೇಗೆ ಬಂದಿರಬಹುದು ಎಂದು ನೋಡಬೇಕಿದ್ದರೆ, ಫಿಲ್ಮ್ ತೊಳೆದು, ಡೆವಲಪ್ ಮಾಡಿ, ನೆಗೆಟಿವ್ ತಯಾರಿಸಿ ನಂತರ ಪಾಸಿಟಿವ್ ಪ್ರಿಂಟ್ ಹಾಕುವ ತನಕ ಕಾಯಬೇಕಿತ್ತು.
2. ಮಾಂಗಲ್ಯಂ ತಂತುನಾನೇನ : ಚಿತ್ರ : ಕೆ,ಎಸ….ರಾಜಾರಾಮ…, ಮೊಬೈಲ್: 25 ಎಮ್ಎಮ್ ವೈಡ್, f- 1.8 ವೇಗ 1/125 ಸೆಕೆಂಡ…, ಐ.ಎಸ್ಒ. 250, ಫ್ಲಾಶ್ ಬಳಸಿಲ್ಲ
ಈಗ ಪುಟಾಣಿ ಮೊಬೈಲ್‌ನಲ್ಲೂ ಬೆರಳ ತುದಿ ಮೀಟಿ, ಕೂಡಲೇ ತೆಗೆದ ಚಿತ್ರವನ್ನು ನೋಡಿ ಅನಂದಿಸುವ ಸಾಧ್ಯತೆ ಕೈಗೆಟುಕಿದೆ. ಅಂದಮೇಲೆ, ಅದರಲ್ಲಿ ಕಲಿಯುವುದೇನಿದೆ ಅಲ್ಲವಾ? ಅದು ಹಾಗಲ್ಲ. ಮಾರುಕಟ್ಟೆಯಲ್ಲಿ ಸಿಗುವ ದಿಢೀರ್ ಪುಳಿಯೊಗರೇಗೂ, ಅಜ್ಜಿ ಮನೆಯಲ್ಲೇ ಮಾಡಿ ಉಣಿಸುವ ಪುಳಿಯೊಗರೆಗೂ ವ್ಯತ್ಯಾಸ ಒಂದೇನಾ? ಅಜ್ಜಿ ಪುಳಿಯೋಗರೆ ಏನು ರುಚಿ ಅಲ್ಲವೇ? ಫೋಟೋಗ್ರಫಿ ಕೂಡ ಹೀಗೇನೆ.
ಕಣ್ಣಿಗೆ ಕಂಡ ದೃಶ್ಯವೊಂದು ಮನಸ್ಸಿಗೂ, ಹೃದಯಕ್ಕೂ ನಾಟಿ, ಭಾವಪೂರ್ಣವೆನಿಸಿದ ಸೌಂದರ್ಯಾನುಭೂತಿ ನೀಡುವಂತಿದ್ದರೆ, ಆ ಫೋಟೋ ಸಾಯುವುದಿಲ್ಲ, ಅದೊಂದು “ಚಿತ್ರಣ’ವಾಗಿ ಸದಾ ಜೀವಂತಿಕೆ ಹೊಂದಿಬಿಡುತ್ತದೆ ಹೀಗಂತ ನನ್ನ ಗುರು ಡಾ. ಡಿ. ವಿ. ರಾವ್ ಹೇಳುತ್ತಿದ್ದರು.
ಇಲ್ಲೂ ಕೂಡ ಬಗೆ ಬಗೆಯ ಫೋಟೋಗ್ರಫಿಗಳಿವೆ. ಮದುವೆ, ಪ್ರವಾಸಿ, ಸ್ಟ್ರೀಟ್, ಸಮಾರಂಭಗಳು, ವಾಸ್ತುಶಿಲ್ಪ, ಹಬ್ಬ, ಗ್ಲಾಮರ್, ಪ್ಯಾಶನ್, ಪೊಲೀಸ್ ಫೋರೆನ್ಸಿಕ್, ಭಾವಚಿತ್ರ, ಸ್ಟುಡಿಯೋ, ವನ್ಯಜೀವಿ, ಸೂಕ್ಷ್ಮಜೀವಿ, ಲ್ಯಾಂಡ್ ಸ್ಕೇಪ್, ಲಲಿತ ಕಲಾತ್ಮಕ, ಭಾವಪ್ರಚೋದಿತ, ಕ್ಯಾಂಡಿಡ್ ಇತ್ಯಾದಿ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಇದರಲ್ಲಿ ಕೆಲವು ವಿಭಾಗಗಳು ಸಮರ್ಪಕವಾದ ಕ್ಯಾಮೆರಾ ಉಪಕರಣ ಹೊಂದಿದ, ಆಳವಾದ ವಸ್ತುನಿಷ್ಠ ಪರಿಣಿತರಿಗಷ್ಟೇ ಸೀಮಿತ. ಮತ್ತೆ ಕೆಲವು ಹವ್ಯಾಸಿಗರಿಗೆ. ಅಭಿರುಚಿಗೆ ತಕ್ಕಂತೆ ಸಾಧಾರಣ ಮೌಲ್ಯದ ಕ್ಯಾಮೆರಾಗಳಿಂದ ಹಿಡಿದು ದುಬಾರಿ ಉಪಕರಣಗಳ ಬಳೆಕೆಯೂ ಉಂಟು. ಕೆಲವು ಎಲ್ಲರಿಗೂ ಪ್ರಿಯ. ಅಂಥದೇ ಒಂದು ಬಗೆ ಎಂದರೆ ಮದುವೆಯ ಕ್ಯಾಂಡಿಡ್ ಚಿತ್ರಗಳು: ಈ ಬಗ್ಗೆ ನೋಡೋಣ.
ಕ್ಯಾಂಡಿಡ್ ಎಂದರೆ, ವ್ಯಕ್ತಿಗೆ / ವ್ಯಕ್ತಿಗಳಿಗೆ ಅರಿವಿಲ್ಲದಂತೆ ಕ್ಯಾಮೆರಾದಲ್ಲಿ ಒಂದು ಕ್ಷಣವನ್ನು ಸೆರೆಹಿಡಿಯುವುದು. ಮದುವೆ ಸಂದರ್ಭದಲ್ಲಿ ಇದು ಹೇಗೆ ಸಾಧ್ಯ? ಅಲ್ಲವೇ!
ನವ ಜೋಡಿಗಳು ಕ್ಯಾಮೆರಾಕ್ಕೆ ಪೋಸ್ ಕೊಡುವುದು ಸಾಮಾನ್ಯ. ಅಲ್ಲೇ ಇರುವುದು ಗುಟ್ಟು. ಸಮಾರಂಭದೆಲ್ಲೆಡೆ ಅನೇಕರು ತಮ್ಮಷ್ಟಕ್ಕೇ ಗಡಿಬಿಡಿಯಲ್ಲಿರುತ್ತಾರೆ. ಮದುಮಕ್ಕಳೂ ಆಗಾಗ ಕ್ಯಾಮೆರವನ್ನು ಮರೆತು ಭಾವಪೂರ್ಣವಾದ ವಿಷಯದಲ್ಲಿ ತೊಡಗಿರುತ್ತಾರೆ. ಗಂಡು, ಗೆಳೆಯರೊಂದಿಗೆ ಮಾತನಾಡುತ್ತಾ ಆವೇಷ ಭರಿತನಾಗಿ ಬಿಡಬಹುದು. ಹೆಣ್ಣುಮಕ್ಕಳು, ಚಿಣ್ಣರು ಇತರರು ತಮ್ಮಷ್ಟಕ್ಕೆ ತಾವೇ ಕೆಲಸದಲ್ಲಿ ತೊಡಗಿರುತ್ತಾರೆ. ಧಾರವಾಡದ ಹರ್ಷದ್ ಉದಯ ಕಾಮತ್ ಸೆರೆ ಹಿಡಿದ ಇಲ್ಲಿನ ಚಿತ್ರದಲ್ಲಿ ವಧು, ಮನೆಯವರನ್ನೆಲ್ಲಾ ನೆನೆದು ಕಣ್ಣನ್ನು ತೇವ ತುಂಬಿಕೊಳ್ಳುತ್ತಾಳೆ. ಮತ್ತೂಂದು ಚಿತ್ರ ನನ್ನದು. ವಧುವಿಗೆ ಮಾಂಗಲ್ಯಧಾರಣೆಗೆ ಮೊದಲು ಪುರೋಹಿತರು ಕಾರ್ಯದ ಆಗು ಹೋಗುಗಳ ಬಗ್ಗೆ ಮಾಹಿತಿ ಕೊಡುತ್ತಿದ್ದಾರೆ.
1. ತವರಿನ ಮಮತೆಯ ನೆನೆದು, ಹೊಸ ದಾರಿಯೆತ್ತ ಪಯಣ ..
ಚಿತ್ರ : ಹರ್ಷದ್ ಉದಯ ಕಾಮತ್, ಧಾರವಾಡ.
200 ಎಮ್ಎಮ್ ಫೋಕಲ್ ಲೆಂಗ್ತ್ ಅಪಾರ್ಚರ್ – 2.8, ವೇಗ 1/250 ಸೆಕೆಂಡ…, ಐ.ಎಸ್ಒ. 640, ಫ್ಲಾಶ್ ಬಳಸಿಲ್ಲ.
ಕೆ.ಎಸ್. ರಾಜಾರಾಮ್