Advertisement

ಬ್ಲ್ಯಾಕ್‌ ಲೇಬಲ್‌, ಬ್ಲೂ ಲೇಬಲ್‌ ನಿಮಗೆ ಗೊತ್ತೇ?

02:23 PM Jun 21, 2017 | |

ವಿಧಾನಸಭೆ: ಬ್ಲ್ಯಾಕ್‌ ಲೇಬಲ್‌, ಬ್ಲೂ ಲೇಬಲ್‌, ಗ್ರೀನ್‌ ಲೇಬಲ್‌, ರೆಡ್‌ ಲೇಬಲ್‌… ಎಲ್ಲವೂ ನನಗೆ ಗೊತ್ತು. ನಿಮಗೆ ಗೊತ್ತೇ ಎಂದು ಪರೀಕ್ಷೆ ಮಾಡಿದೆ. ಹೀಗೆಂದು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಅವರ ಕಾಲೆಳೆದಿದ್ದು ಮುಖ್ಯಮಂತ್ರಿ
ಸಿದ್ದರಾಮಯ್ಯ.

Advertisement

ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕದ ಮೇಲಿನ ಚರ್ಚೆ ವೇಳೆ ಅಬಕಾರಿ ಇಲಾಖೆಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಉದಾಹರಣೆಯೊಂದನ್ನು ನೀಡಿದ ಜಗದೀಶ ಶೆಟ್ಟರ್‌, ಹುಬ್ಬಳ್ಳಿ-ಧಾರವಾಡದಲ್ಲಿ ವೈನ್‌ಶಾಪ್‌ ಒಂದಕ್ಕೆ ಪರವಾನಗಿ ನೀಡುವ ಕುರಿತು ಅದರ ಮಾಲೀಕರು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೂ ಪರವಾನಗಿ ನೀಡದ ಕಾರಣ ಆತ ನನ್ನ ಬಳಿ ಬಂದು ಹೇಳಿಕೊಂಡಿದ್ದರು. 

ನಾನು ಎರಡು ಬಾರಿ ಆ ಜಿಲ್ಲಾಧಿಕಾರಿಗೆ ಫೋನ್‌ ಮಾಡಿದ ಬಳಿಕ ಅರ್ಜಿದಾರರನ್ನು ಸಂಪರ್ಕಿಸಿದ ಆ ಅಧಿಕಾರಿ, ಪರವಾನಗಿಗೆ ಇಂತಿಷ್ಟು ಎಂದು ಕೊಡಬೇಕಿದೆ. ಆದರೆ, ನೀವು ಅವರಿಂದೆಲ್ಲಾ ಫೋನ್‌ ಮಾಡಿಸಿದ್ದರಿಂದ ರಿಯಾಯಿತಿ ಕೊಡೋಣ.

ಆದರೆ, ನನಗೆ ಇಂಪೋರ್ಟೆಡ್‌ ಬಾಟಲ್‌ ಒಂದನ್ನು ಕೊಡಿಸಿ ಅಂದರಂತೆ. ಅದೇನೋ ಬ್ಲೂ ಟೇಬಲ್ಲೋ, ಲೇಬಲ್ಲೋ ಏನೋ ಇದ್ಯಂತಲ್ಲಾ ಅದು. ನನಗೆ ಅದು ಗೊತ್ತಾಗಲ್ಲ ಎಂದರು.

ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ಅದು ಬ್ಲೂ ಲೇಬಲ್‌ ಅಂತ ಎಂದಾಗ, ನನಗೆ ಅದೆಲ್ಲಾ ಗೊತ್ತಿಲ್ಲ. ನಿಮಗೆ ಗೊತ್ತಿರಬೇಕು ಎಂದು ಜಗದೀಶ ಶೆಟ್ಟರ್‌ ತಿರುಗೇಟು ನೀಡಿದರು. ನನಗೆ ಎಲ್ಲಾ ಗೊತ್ತಿದೆ. ಬ್ಲೂ ಲೇಬಲ್‌, ಬ್ಲ್ಯಾಕ್‌ ಲೇಬಲ್‌, ಗ್ರೀನ್‌ ಲೇಬಲ್‌, ರೆಡ್‌ ಲೇಬಲ್‌ ಎಲ್ಲವೂ ಗೊತ್ತಿದೆ ಎಂದಾಗ, ಮುಖ್ಯಮಂತ್ರಿಗಳೇ ಗ್ಲೆನ್‌ ಪೆಡಿಚ್‌ ಸಿಂಗಲ್‌ ಮಾಲ್ಟ್ ವಿಸ್ಕಿ ಹೆಸರೇ ಮರೆತುಬಿಟ್ರಲ್ಲಾ ಎಂದು ಬಿಜೆಪಿಯ ಅರವಿಂದ ಲಿಂಬಾವಳಿ ಕಾಲೆಳೆದರು.

Advertisement

ನಿನಗೆ ನೆನಪಿಲ್ವಾ ಎಂದು ಮುಖ್ಯಮಂತ್ರಿಗಳು ಮರುಪ್ರಶ್ನೆ ಹಾಕಿದಾಗ, ನೀವೇ ಆ ಬ್ರಾಂಡ್‌ ನನಗೆ ಕೊಡಿಸಿದ್ದು
ಮರೆಯೋಕೆ ಸಾಧ್ಯವೇ ಎಂದು ಅರವಿಂದ ಲಿಂಬಾವಳಿ ಉತ್ತರಿಸಿದರು. ಅಷ್ಟರಲ್ಲಿ ಬಿಜೆಪಿಯ ಡಿ.ಎನ್‌.ಜೀವರಾಜ್‌, ಅವರಿಗೆ ಮಾತ್ರ ಏಕೆ, ನಮಗೂ ಕೊಡಿಸಿ ಎಂದು ಹೇಳಿದರೆ, ಪಾಪ ಜೀವರಾಜ್‌ಗೆ ಆಸೆ ಬಂದಿದೆ. ಕೊಡಿಸಿ ಎಂದು ಲಿಂಬಾವಳಿ ಪ್ರತಿಕ್ರಿಯಿಸಿದರು. ಮಲೆನಾಡಿನವರಿಗೆ ಅದೆಲ್ಲಾ ಏಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆಗೆ ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next