Advertisement
ಫೆ. 27ರಂದು ನಡೆದ ವಾಯುಪಡೆ ದಾಳಿ ವೇಳೆ ರಫೇಲ್ ಯುದ್ಧವಿಮಾನವೇನಾದರೂ ಇದ್ದಿದ್ದರೆ ಅದರ ಕಥೆಯೇ ಬೇರೆಯಾಗಿರುತ್ತಿತ್ತು ಎಂಬ ತಮ್ಮ ಹೇಳಿಕೆಯನ್ನು ಖಂಡಿಸಿರುವ ವಿಪಕ್ಷಗಳನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಪಕ್ಷ ಗಳಿಗೆ ಕನಿಷ್ಠ ಜ್ಞಾನವೂ ಇಲ್ಲವೇ ಎಂದು ಅವರು ಪ್ರಶ್ನಿಸಿ ದ್ದಾರೆ. ಇನ್ನೊಂದೆಡೆ, ಭಾರತದ ವೈಮಾನಿಕ ದಾಳಿ ಯಿಂದಾದ ಸಾವು-ನೋವಿನ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಸರಕಾರ ಬಹಿರಂಗಪಡಿಸಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ.
ಆಯುಷ್ಮಾನ್ ಭಾರತ್ ಯೋಜನೆಯ ಅನುಕೂಲತೆ ಬಗ್ಗೆ ವಿವರಿಸುವಾಗ ಪ್ರಧಾನಿ ಮೋದಿ ಅವರು ಕೇರಳದ “ಕೊಚ್ಚಿ’ ಎನ್ನುವ ಬದಲು ಪಾಕಿಸ್ಥಾನದ “ಕರಾಚಿ’ ಪದವನ್ನು ಬಳಕೆ ಮಾಡಿ ಎಡವಟ್ಟು ಮಾಡಿಕೊಂಡರು. ಆದರೆ, ಕೂಡಲೇ ಎಚ್ಚೆತ್ತ ಅವರು ತಪ್ಪನ್ನು ಅಲ್ಲೇ ಸರಿಪಡಿಸಿಕೊಂಡು ಜಾಣ್ಮೆ ಪ್ರದರ್ಶಿಸಿದರು. “ಆಯುಷ್ಮಾನ್ ಯೋಜನೆಯಿಂದಾಗಿ ಜಾಮ್‌ನಗರದ ನಿವಾಸಿಯು, ಕೋಲ್ಕತ್ತಾವಾಗಿರಲೀ, ಕರಾಚಿಯಾಗಿರಲೀ… ಒಟ್ಟಿನಲ್ಲಿ ದೇಶದ ಯಾವುದೇ ಮೂಲೆಯಲ್ಲಾದರೂ ಚಿಕಿತ್ಸೆ ಪಡೆಯಬಹುದು’ ಎಂದು ಮೋದಿ ಹೇಳಿದರು. ಕೊಚ್ಚಿಯ ಬದಲು ಕರಾಚಿ ಬಳಸಿದ್ದು ಅರಿವಿಗೆ ಬಂದೊಡನೆ, “ಓಹ್, ಕರಾಚಿ ಅಲ್ಲ, ಕೊಚ್ಚಿ. ನನ್ನ ಮನಸ್ಸಲ್ಲಿ ಈಗ ನೆರೆರಾಷ್ಟ್ರದ ವಿಚಾರಗಳೇ ಗಿರಕಿ ಹೊಡೆಯುತ್ತಿವೆ’ ಎಂದು ಹೇಳುತ್ತಾ ಗೊಂದಲಕ್ಕೆ ತೆರೆ ಎಳೆದರು.
Related Articles
ಮೋದಿ ನೇತೃತ್ವದ ಸರಕಾರವು ಕೇವಲ ಭರವಸೆ ನೀಡುವುದಿಲ್ಲ. ಬದಲಿಗೆ ಕ್ರಮ ತೆಗೆದುಕೊಳ್ಳುವುದರಲ್ಲಿ ವಿಶ್ವಾಸವನ್ನಿರಿಸಿದೆ. ಸೇನೆಗೆ ಸಂಬಂಧಿಸಿದಂತೆ ಸಮಾನ ಹುದ್ದೆ, ಸಮಾನ ಪಿಂಚಣಿ, ರಾಷ್ಟ್ರೀಯ ಯುದ್ಧ ಸ್ಮಾರಕದಂತಹ ವಿಷಯಗಳು ದಶಕದಿಂದಲೂ ನಿರ್ಧಾರವಾಗದೇ ಉಳಿದಿದ್ದವು. ಇದನ್ನು ನಮ್ಮ ಸರಕಾರವು ಪರಿಹರಿಸಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಯಾಕೆಂದರೆ ನಾವು ಕ್ರಮ ತೆಗೆದುಕೊಳ್ಳುವುದರಲ್ಲಿ ವಿಶ್ವಾಸವಿರಿಸಿದ್ದೇವೆ. ಹಿಂದಿನ ಸರಕಾರದಂತೆ ಕೇವಲ ಭರವಸೆ ನೀಡುವುದು ನಮ್ಮ ಉದ್ದೇಶವಲ್ಲ ಎಂದು ಅವರು ಹೇಳಿದ್ದಾರೆ. 35 ಸಾವಿರ ಕೋಟಿ ರೂ.ಗಳನ್ನು ಒಆರ್‌ಒಪಿ ಅಡಿ ಫಲಾನುಭವಿಗಳಿಗೆ ನೀಡಲಾಗಿದೆ. ಮಧ್ಯಂತರ ಬಜೆಟ್‌ನಲ್ಲಿ 8 ಸಾವಿರ ಕೋಟಿ ರೂ. ಒದಗಿಸಲಾಗಿದೆ. ಬಾಕಿ ಪಿಂಚಣಿಯನ್ನು 4 ಕಂತುಗಳಲ್ಲಿ ನೀಡಲಾಗಿದೆ. ಸಶಸ್ತ್ರ ಸೇನಾ ಪಡೆಗಳ ಸಿಬಂದಿಗೆ ಕನಿಷ್ಠ ಪಿಂಚಣಿಯನ್ನು 10 ಸಾವಿರ ರೂ. ನಿಂದ 18 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
Advertisement
ಬಾಲಕೋಟ್‌ನಲ್ಲಿ 300 ಮೊಬೈಲ್ ಸಂಪರ್ಕವಿತ್ತು!ಫೆ. 26ರ ರಾತ್ರಿ ಪಾಕಿಸ್ಥಾನದ ಬಾಲಕೋಟ್‌ನಲ್ಲಿ ವಾಯುಪಡೆ ದಾಳಿ ನಡೆಸುವುದಕ್ಕೂ ಮುನ್ನ ಇಲ್ಲಿ 300 ಮೊಬೈಲ್ ಫೋನ್‌ಗಳು ಸಕ್ರಿಯವಾಗಿದ್ದವು ಎಂದು ರಾಷ್ಟ್ರೀಯ ತಾಂತ್ರಿಕ ಸಂಶೋಧನೆ ಸಂಸ್ಥೆ (ಎನ್‌ಟಿಆರ್‌ಒ) ಕಂಡುಕೊಂಡಿದೆ. ಈ ಕಟ್ಟಡವಿದ್ದಲ್ಲಿ ಈ ಸಂಪರ್ಕಗಳು ಸಕ್ರಿಯವಾಗಿದ್ದವು. ಇದು ಈ ಕ್ಯಾಂಪ್‌ನಲ್ಲಿ ಇದ್ದ ಜನರ ಸಂಖ್ಯೆಯನ್ನು ಅಳೆಯಲು ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರಕಾರವು ವಾಯುಪಡೆ ದಾಳಿ ನಡೆಸಿದ ಸಮಯದಿಂದಲೇ ಈ ಮೇಲ್ವಿಚಾರಣೆ ನಡೆಸಲಾಗುತ್ತಿತ್ತು. ರಾಷ್ಟ್ರೀಯ ಭದ್ರತಾ ಸಲಹೆಗಾರರ ನಿರ್ದೇಶನದ ಮೇರೆಗೆ ಎನ್‌ಟಿಆರ್‌ಒ ಈ ವಿಚಕ್ಷಣೆ ನಡೆಸುತ್ತಿತ್ತು. ಎನ್‌ಟಿಆರ್‌ಒಗೆ ಲಭ್ಯವಾದ ಮಾಹಿತಿಯನ್ನು ಇತರ ಗುಪ್ತಚರ ಸಂಸ್ಥೆಗಳೊಂದಿಗೆ ಹೋಲಿಕೆ ಮಾಡಿದಾಗ ಇದು ಖಚಿತಪಟ್ಟಿದೆ. ಸುಮಾರು ಇಷ್ಟೇ ಸಂಖ್ಯೆಯ ಉಗ್ರರು ಈ ಕ್ಯಾಂಪ್‌ನಲ್ಲಿ ಇರುವುದು ತಿಳಿದುಬಂದಿದೆ. ಇಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹವೂ ಇತ್ತು ಎಂದು ಹೇಳಲಾಗಿದೆ. ಎನ್‌ಟಿಆರ್‌ಒ ದೇಶದಲ್ಲಿನ ಉಗ್ರ ಚಟುವಟಿಕೆಗಳ ಮೇಲೆ ಕಣ್ಗಾವಲಿಡುತ್ತದೆ. ಇದು ಗೃಹ ಸಚಿವಾಲಯ ಹಾಗೂ ಭದ್ರತಾ ಸಲಹೆಗಾರರ ನೇರ ಆಣತಿಯಲ್ಲಿ ಕೆಲಸ ಮಾಡುತ್ತದೆ. ಕ್ಷಮೆ ಕೇಳಿದ ಟ್ರವರ್ ನೋವಾ
ಭಾರತ-ಪಾಕ್ ಸಂಘರ್ಷದ ಬಗ್ಗೆ ಜೋಕ್ ಮಾಡಿದ ಕೆನಡಾ ಮೂಲದ ಕಾಮೆಡಿಯನ್ ಟ್ರೆವರ್ ನೋವಾ ಕ್ಷಮೆ ಕೇಳಿದ್ದಾರೆ. ಇದೊಂದು ಮನೋರಂಜನೆಯ ಸಂಗತಿ. ಇದು ಅತ್ಯಂತ ಸುದೀರ್ಘ ಅವಧಿಯ ಯುದ್ಧ. ಇದ ರಲ್ಲಿ ಮೊನ್ನೆ ನಡೆದ ಕದನವೊಂದು ಡ್ಯಾನ್ಸ್ ಐಟಂ ಇದ್ದಂತೆ ಎಂದು ತಮ್ಮ ದಿ ಡೈಲಿ ಶೋ ಕಾರ್ಯಕ್ರಮದಲ್ಲ ಅಪಹಾಸ್ಯ ಮಾಡಿದ್ದರು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ನೋವಾ ಕ್ಷಮೆ ಕೇಳಿದ್ದು, ನಾನು ನೋವನ್ನು ನಗುವಿನ ಮೂಲಕ ಹೊರಹಾಕುತ್ತೇನೆ. ಆದರೆ ಇದರಿಂದ ನಿಮಗೆ ನೋವಾಗಿ ದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಆದರೆ, ಮೂಲ ವಿಷಯಕ್ಕಿಂತ ನಾನು ಮಾಡಿದ ಹಾಸ್ಯವೇ ಹೆಚ್ಚು ಚರ್ಚೆಗೆ ಒಳಗಾದಂತಿದೆ ಎಂಬ ಟೀಕೆಯನ್ನೂ ಅವರು ಈ ವೇಳೆ ಮಾಡಿದ್ದಾರೆ. ಮತ್ತೆ ಪಾಕ್ ಕುತಂತ್ರ?
ವೈಮಾನಿಕ ದಾಳಿಯಿಂದ ಸುಮ್ಮನಾಗದ ಪಾಕಿಸ್ಥಾನ ಮತ್ತೆ ತನ್ನ ಕುತಂತ್ರ ಬುದ್ಧಿ ತೋರಿಸುತ್ತಾ ಎಂಬ ಅನುಮಾನ ಮೂಡಿದೆ. ಪಾಕ್ ವಾಯುಪಡೆಯ ಮುಖ್ಯಸ್ಥರು ಅಲ್ಲಿನ ಅಧಿಕಾರಿಗಳಿಗೆ ಈ ಕುರಿತ ಸುಳಿವು ನೀಡಿದ್ದು, ದೇಶ ಎದುರಿಸುತ್ತಿರುವ ಸವಾಲು ಇನ್ನೂ ಮುಗಿದಿಲ್ಲ. ಎಲ್ಲರೂ ಸನ್ನದ್ಧರಾಗಿರಿ ಎಂದು ಸೂಚಿಸಿದ್ದಾರೆ. ಸೋಮವಾರ ಏರ್ ಚೀಫ್ ಮಾರ್ಷಲ್ ಮುಜಾಹಿದ್ ಅನ್ವರ್ ಖಾನ್ ಅವರು ಸೇನೆಯ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿ, ಅಲ್ಲಿರುವ ಸೈನಿಕರು, ವೈಮಾನಿಕ ರಕ್ಷಣೆ ಮತ್ತು ಎಂಜಿನಿಯರಿಂಗ್ ಸಿಬಂದಿ ಜತೆ ಮಾತುಕತೆ ನಡೆಸಿದ್ದಾರೆ. ಎಲ್ಲ ರೀತಿಯ ಪರಿಸ್ಥಿತಿಗೂ ಸಿದ್ಧರಾಗಿರಿ ಎಂಬ ಸಂದೇಶವನ್ನೂ ನೀಡಿದ್ದಾರೆ. ನೊಬೆಲ್ ಸಲ್ಲಬೇಕಾದ್ದು ನನಗಲ್ಲ
ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ಸಂದಬೇಕು ಎಂದು ಪಾಕ್ ಸಂಸತ್‌ನಲ್ಲಿ ನಿಲುವಳಿ ಮಂಡಿಸಿರುವ ಕುರಿತು ಸೋಮವಾರ ಪ್ರತಿಕ್ರಿಯಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್, “ನಾನು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹನಲ್ಲ. ಅದು ಸಲ್ಲಬೇಕಾದ್ದು ನನಗಲ್ಲ. ಬದಲಿಗೆ, ಕಾಶ್ಮೀರಿಗರ ಇಚ್ಛೆಯನ್ನು ಅರಿತು, ಅದರನುಸಾರ ಕಾಶ್ಮೀರ ಸಮಸ್ಯೆಯನ್ನು ಯಾರು ಇತ್ಯರ್ಥಪಡಿಸಿ, ಶಾಂತಿ ನೆಲೆಸಲು ಕಾರಣವಾಗುತ್ತಾರೋ ಅವರಿಗೆ ಈ ಪ್ರಶಸ್ತಿ ಸಲ್ಲಬೇಕು’ ಎಂದು ಹೇಳಿದ್ದಾರೆ. ವಿಂಗ್ ಕಮಾಂಡರ್ ಅಭಿನಂದನ್‌ರನ್ನು ಭಾರತಕ್ಕೆ ಹಸ್ತಾಂತರಿಸಿದ ಹಿನ್ನೆಲೆಯಲ್ಲಿ ಇಮ್ರಾನ್‌ಗೆ ಶಾಂತಿ ನೊಬೆಲ್ ನೀಡಬೇಕು ಎಂಬ ನಿಲುವಳಿ ಮಂಡಿಸಲಾಗಿತ್ತು. ಪಾಕ್ ಶೆಲ್ ದಾಳಿ
2 ದಿನ ತಣ್ಣಗಾಗಿದ್ದ ಪಾಕಿಸ್ಥಾನ ಮತ್ತೆ ಕ್ಯಾತೆ ಶುರುವಿಟ್ಟುಕೊಂಡಿದೆ. ಸೋಮವಾರ ಜಮ್ಮು-ಕಾಶ್ಮೀರದ ಅಖೂ°ರ್ ವಲಯದ ಗಡಿ ನಿಯಂತ್ರಣ ರೇಖೆ ಬಳಿ ಗ್ರಾಮಗಳು ಹಾಗೂ ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ನಡೆಸಿದೆ. ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಗೆ ಭಾರತವೂ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಈ ನಡುವೆ, ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ರೇಖೆಯ ಬಳಿಯ ಹೊಲದಲ್ಲಿ ಸೋಮವಾರ ಸಜೀವ ಶೆಲ್‌ವೊಂದು ಪತ್ತೆಯಾಗಿದ್ದು, ಅದನ್ನು ಬಾಂಬ್ ನಿಷ್ಕ್ರಿಯ ಪಡೆಯು ನಿಷ್ಕ್ರಿಯಗೊಳಿಸಿದೆ. ಸಂಜೋತಾ ಸೇವೆ ಆರಂಭ
ಲಾಹೋರ್ ಮತ್ತು ದಿಲ್ಲಿ ನಡುವೆ ಸಂಚರಿಸುವ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸೇವೆ ಪಾಕಿಸ್ಥಾನದಲ್ಲೂ ಸೋಮವಾರ ಪುನಾರಂಭಗೊಂಡಿದೆ. ಭಾರತ-ಪಾಕ್ ಉದ್ವಿಗ್ನ ವಾತಾವರಣ ಹಿನ್ನೆಲೆಯಲ್ಲಿ ಸೇವೆಯನ್ನು ರದ್ದುಗೊಳಿಸಲಾಗಿತ್ತು. ರವಿವಾರ ಭಾರತದಲ್ಲಿ ಸೇವೆ ಮತ್ತೆ ಆರಂಭವಾಗಿತ್ತು. ಮುಂದುವರಿದ ವಾಕ್ಸಮರ
ವಾಯುಪಡೆ ಪಾಕ್‌ನಲ್ಲಿ ನಡೆಸಿದ ವೈಮಾನಿಕ ದಾಳಿಗೆ ಸಂಬಂಧಿಸಿ ರಾಜಕೀಯ ಕೆಸರೆರಚಾಟ ಮುಂದುವರಿದಿದೆ. ದಾಳಿ ಬಗ್ಗೆ ಸಾಕ್ಷ್ಯ ಕೊಡಿ ಎಂದು ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಕೇಳಿದ ಬೆನ್ನಲ್ಲೇ ಈಗ ಮತ್ತೂಬ್ಬ ನಾಯಕ ಕಪಿಲ್ ಸಿಬಲ್ ಕೂಡ ಇದೇ ಆಗ್ರಹವನ್ನು ಮಾಡಿದ್ದಾರೆ. ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್, ಡೈಲಿ ಟೆಲಿಗ್ರಾಫ್, ಗಾರ್ಡಿಯನ್, ರಾಯಿಟರ್ಸ್‌ನಂಥ ಅಂತಾ ರಾಷ್ಟ್ರೀಯ ಮಾಧ್ಯಮಗಳು ಪಾಕ್‌ನಲ್ಲಿ ವಾಯುಪಡೆ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ ಎಂದು ವರದಿ ಮಾಡಿರುವ ಕುರಿತು ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ಅವರು ಕೋರಿದ್ದಾರೆ. ಇನ್ನು ಮಾಜಿ ಸಚಿವ ಚಿದಂಬರಂ ಮಾತನಾಡಿ, “ದೇಶದ ಒಬ್ಬ ಹೆಮ್ಮೆಯ ನಾಗರಿಕನಾಗಿ ಸರಕಾರ ಹೇಳುವುದನ್ನು ನಾನು ನಂಬುತ್ತೇನೆ. ಆದರೆ, ಸರಕಾರವು ಜಗತ್ತೇ ನಂಬುವಂತೆ ತಮ್ಮ ಸ್ಪಷ್ಟನೆಯನ್ನು ನೀಡಲಿ’ ಎಂದು ಆಗ್ರಹಿಸಿದ್ದಾರೆ. ಮಾಹಿತಿ ನೀಡಲ್ಲ: ವಿಪಕ್ಷಗಳ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಕಾಶ್ ಜಾವಡೇಕರ್, “ಬಾಲಕೋಟ್‌ನ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದ್ದರ ವಿವರಗಳನ್ನು ನೀಡುವಂತೆ ವಿಪಕ್ಷಗಳು ಕೇಳುತ್ತಿವೆ. ಅದು ಅವರಿಗೆ ಸಶಸ್ತ್ರಪಡೆಗಳ ಮೇಲೆ ಇರುವ ವಿಶ್ವಾಸವನ್ನು ತೋರಿಸುತ್ತದೆ. ದೇಶದ ಒಳಿತಿನ ದೃಷ್ಟಿಯಿಂದ ಮಾಹಿತಿಗಳನ್ನು ಸೋರಿಕೆ ಮಾಡಲಾಗುವುದಿಲ್ಲ’ ಎಂದಿದ್ದಾರೆ. ಇದೇ ವೇಳೆ, ಸುಳ್ಳು ಮತ್ತು ತಿರುಚಿದ ವರದಿಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ದೇಶದ ಹಾದಿ ತಪ್ಪಿಸುವ, ಸಶಸ್ತ್ರ ಪಡೆಗಳಿಗೆ ಅವಮಾನ ಮಾಡುವ ಕೆಲಸವನ್ನು ನಿಲ್ಲಿಸಲಿ ಎಂದು ಸಚಿವ ಮುಖಾ¤ರ್ ನಖೀÌ ಹೇಳಿದ್ದಾರೆ. ಶಿಶುವಿಗೆ ಅಭಿ ಹೆಸರಿಟ್ಟ ಕರ್ನಾಟಕದ ದಂಪತಿ
ಪಾಕ್ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರು ಸ್ವದೇಶಕ್ಕೆ ಕಾಲಿಟ್ಟ ಸಮಯದಲ್ಲೇ ಜನಿಸಿದ ಮಗುವೊಂದಕ್ಕೆ “ಅಭಿನಂದನ್’ ಎಂದೇ ನಾಮಕರಣ ಮಾಡಲಾಗಿದೆ. ಕರ್ನಾಟಕದವರಾದ ಆಕಾಶ್ ಜೈನ್ ಹಾಗೂ ಮೋನಿಕಾ ದಂಪತಿ ಮಾ. 1ರ ರಾತ್ರಿ ಮುಂಬಯಿನ ಭಿವಂಡಿಯ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ವಿಂಗ್ ಕಮಾಂಡರ್ ಅವರ ದಿಟ್ಟತನಕ್ಕೆ ಗೌರವ ಸಲ್ಲಿಸುವ ಸಲುವಾಗಿ ಶಿಶುವಿಗೆ ಅವರದ್ದೇ ಹೆಸರಿಡಲು ನಿರ್ಧರಿಸಲಾಯಿತು ಎಂದು ಆಕಾಶ್‌ರ ತಂದೆ ಮಂಗಿಲಾಲ್ ಜೈನ್ ತಿಳಿಸಿದ್ದಾರೆ.