Advertisement

ಬೇಕಲ ಏರ್‌ಸ್ಟ್ರಿಪ್‌ ಕನಸು ನನಸಾದೀತೇ?

04:57 PM Apr 27, 2017 | Harsha Rao |

ಕಾಸರಗೋಡು: ಪ್ರವಾ ಸೋದ್ಯಮ ಅಭಿವೃದ್ಧಿಗೆ ಕಾಸರಗೋಡು ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿದ್ದರೂ, ಅಂತಹ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೆ ಇರುವುದರಿಂದ ಅಭಿವೃದ್ಧಿ ಸಾಧ್ಯತೆ ಕುಂಠಿತಗೊಳ್ಳುತ್ತಿದೆ. ಇತಿಹಾಸ ಪ್ರಸಿದ್ಧ ಹಾಗೂ ಅಂತಾರಾಷ್ಟ್ರೀಯ ಭೂಪಟದಲ್ಲಿ ಸ್ಥಾನ ಪಡೆದಿರುವ ಬೇಕಲಕೋಟೆಯನ್ನು ಕೇಂದ್ರವಾಗಿರಿಸಿಕೊಂಡು ಕಾಸರಗೋಡು ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸಲು ಪೆರಿಯಾದಲ್ಲಿ ಆರಂಭಿ ಸಲು ಯೋಜಿಸಿದ “ಏರ್‌ಸ್ಟ್ರಿಪ್‌’ ಇನ್ನೂ ಕನಸಾಗಿಯೇ ಉಳಿದಿದೆ. ಜಿಲ್ಲೆಯಲ್ಲಿರುವ ಹಲವು ಪ್ರವಾಸಿ ಕೇಂದ್ರಗಳಲ್ಲಿ ಮೂಲ ಸೌಕರ್ಯ ಗಳಿಲ್ಲದಿರುವುದರಿಂದ ಪ್ರವಾಸಿಗರನ್ನು ಆಕರ್ಷಿಸಲು ವಿಫಲವಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಪೆರಿಯಾದಲ್ಲಿ ಏರ್‌ಸ್ಟ್ರಿಪ್‌ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಈ ಯೋಜನೆಯನ್ನು ಸಾಕಾರ ಗೊಳಿಸಲು ಇಚ್ಛಾಶಕ್ತಿ ಕೊರತೆ ಇರುವು ದರಿಂದ ನಿರೀಕ್ಷೆಯಂತೆ ಮುಂದಕ್ಕೆ ಸಾಗುತ್ತಿಲ್ಲ.

Advertisement

ಪೆರಿಯಾದಲ್ಲಿ ಕಲ್ಪಿಸಲು ಯೋಜಿಸಿದ್ದ ಏರ್‌ಸ್ಟ್ರಿಪ್‌ಗೆ 2017-18 ನೇ ಸಾಲಿನ ರಾಜ್ಯ ಮುಂಗಡ ಪತ್ರದಲ್ಲಿ ಕೇವಲ ಒಂದು ಲಕ್ಷ ರೂಪಾಯಿ ಮಾತ್ರವೇ ಇರಿಸಲಾಗಿದೆ. ಈ ಮೊತ್ತವನ್ನು ಬಳಸಿ ಪೆರಿಯಾದಲ್ಲಿ ಆರಂಭಿಸಲು ನಿಶ್ಚಯಿ ಸಿದ್ದ ಬೇಕಲ ಏರ್‌ಸ್ಟ್ರಿಪ್‌ಗೆ ಉತ್ತಮ ವರದಿಯನ್ನು ರೂಪಿಸಿದ್ದಲ್ಲಿ ಕನಸು ಸಾಕಾರಗೊಳ್ಳಬಹುದೇನೋ. ವರದಿ ತಯಾರಿಗೆ ಕಾದಿರಿಸಿದ ಒಂದು ಲಕ್ಷ ರೂಪಾಯಿ ಲೆಕ್ಕ ಭರ್ತಿಗೆ ನೀಡಿದಂತಿದೆ. ಈ ಮೊತ್ತ ವರದಿ ತಯಾರಿಗೆ ಸಾಕಾಗ ಬಹುದೇ ಎಂಬ ಪ್ರಶ್ನೆ ಕೂಡ ಮುಂದಿದೆ.

ಕಾಸರಗೋಡು ಜಿಲ್ಲೆಯ ಪ್ರವಾ ಸೋದ್ಯಮ ಅಭಿವೃದ್ಧಿಯಲ್ಲಿ ನಿರ್ಣಾ ಯಕ ಪಾತ್ರವಹಿಸುವ ಪೆರಿಯಾ ಏರ್‌ ಸ್ಟ್ರಿಪ್‌ ಇನ್ನೂ ಆರಂಭದ ಹಂತದಲ್ಲಿದೆ. ಈ ಯೋಜನೆ ಸಾಕಾರಗೊಂಡಲ್ಲಿ ಅಭಿವೃದ್ಧಿಯ  ಮೈಲು ಗಲ್ಲಾ ಗಬಹುದು ಎಂದು ನಿರೀಕ್ಷಿಸಲಾಗಿದೆ. ಜನಪ್ರತಿನಿಧಿ ಗಳ ಆಶ್ವಾಸನೆ ಕೇವಲ ಕನಸುಗಳು ಕಟ್ಟುವ ಸೌಧವಾಗಿ ಮಾರ್ಪಟ್ಟಿದೆ. ಏರ್‌ ಸ್ಟ್ರಿಪ್‌ಗೆ ಗೊತ್ತುಪಡಿಸಲಾದ ಜಾಗದಲ್ಲಿ ಸ್ಥಾಪಿಸಲಾದ ನಾಮಫಲಕವೊಂದೇ ಯೋಜನೆಗೆ ಸ್ಥಳ ಮೀಸಲಿರಿಸಲಾಗಿದೆ ಎಂಬುದನ್ನು ತಿಳಿಸುತ್ತದೆ.

ಮಹತ್ವಾಕಾಂಕ್ಷಿ ಯೋಜನೆಗೆ ಅಂಗೀಕಾರ 
ಬೇಕಲ ಪ್ರವಾಸೋದ್ಯಮದ ಅಂಗ ವಾಗಿ ಮಿನಿ ಏರ್‌ಸ್ಟ್ರಿಪ್‌ ಯೋಜನೆ ಆರಂಭವಾದುದು ಪೆರಿಯಾ ಗ್ರಾಮದ ವಿಶಾಲವಾದ ಸಮತಟ್ಟಾದ ಜಾಗದಲ್ಲಿ. ಇದರ ನಿರ್ಮಾಣಕ್ಕೆ  ಸ್ಥಳ ಗೊತ್ತುಪಡಿಸುವ ಹಾಗೂ ಬೇಕಾದ ಉಳಿದ ಸ್ಥಳವನ್ನು ಕೊಳ್ಳುವ ಕಾರ್ಯ ವರ್ಷಗಳ ಹಿಂದೆ ನಡೆದಿದೆ. 2011ರಲ್ಲಿ ಅಂದಿನ ಸರಕಾರ ಮಹತ್ವಾಕಾಂಕ್ಷಿ ಯೋಜನೆಗೆ ಅಂಗೀಕಾರ ನೀಡಿತ್ತು. ಬೇಕಲ ರೆಸಾರ್ಟ್‌ ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಆರ್‌ಡಿಸಿ) ಈ ಸ್ಥಳವನ್ನು ಒಪ್ಪಿಸಿ ಏರ್‌ಸ್ಟ್ರಿಪ್‌ ನಿರ್ಮಾಣದ ಆರಂಭಿಕ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಬೃಹತ್‌ ಯೋಜನೆಗೆ 80.41 ಎಕರೆ ಸ್ಥಳವನ್ನು ನಿರ್ಧರಿಸಲಾಗಿತ್ತು, ಖಾಸಗಿ ವ್ಯಕ್ತಿಗಳಲ್ಲಿದ್ದ 51.65 ಎಕರೆ ಸ್ಥಳವನ್ನು ಹಾಗೂ ಸರಕಾರದ ಸುಪರ್ದಿಯಲ್ಲಿದ್ದ 28.76 ಎಕರೆ ಸ್ಥಳವನ್ನು ಯೋಜನೆಗೆ ಮೀಸಲಿರಿಸಲಾಗಿದೆ. 

2010ರಲ್ಲಿ ವರದಿ ಕ್ರೋಡೀಕರಿಸಿದ ಸರಕಾರಿ ಸ್ವಾಮ್ಯದ ಸಿಯಾಲ್‌ ಸಂಸ್ಥೆ 2012ರಲ್ಲಿ ಬಿ.ಆರ್‌.ಡಿ.ಸಿ.ಗೆ ತನ್ನ ವರದಿಯನ್ನು ಸಮರ್ಪಿಸಿದೆ. ನಂತರದ ವರ್ಷಗಳಲ್ಲಿ ಯಾವುದೇ ಅಗತ್ಯಕಾರ್ಯ ಚಟುವಟಿಕೆಗಳು ಈ ನಿಟ್ಟಿನಲ್ಲಿ ನಡೆಯಲಿಲ್ಲ. ಕಳೆದ ವರ್ಷ ಅಧಿಕಾರ ವಹಿಸಿಕೊಂಡ ಪಿಣರಾಯಿ ವಿಜಯನ್‌ ಸರಕಾರ ತನ್ನ ಬಜೆಟ್‌ ಮಂಡನೆ ವೇಳೆ ಯೋಜನೆಯನ್ನು ಪರಿಗಣಿಸಿ, ಪ್ರವಾಸೋದ್ಯಮಕ್ಕೆ ಪೂರಕವಾದ ಮಹತ್ವಾಕಾಂಕ್ಷಿ ಏರ್‌ಸ್ಟ್ರಿಪ್‌ ನಿರ್ಮಾಣಕ್ಕೆ ಶ್ರಮಿಸುವುದಾಗಿ ಹೇಳಿತ್ತು. ಹಣಕಾಸು ಸಚಿವರು ಶೀಘ್ರದಲ್ಲಿ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಉದ್ಗರಿಸಿದ್ದರು. ಇದೇ ವೇಳೆ ಬಜೆಟ್‌ನಲ್ಲಿ ಟೋಕನ್‌ರೂಪದಲ್ಲಿ ಬೇಕಲ ಏರ್‌ಸ್ಟ್ರಿಪ್‌ ನಿರ್ಮಾಣಕ್ಕೆ ಒಂದು ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ.

Advertisement

ಈ ಹಣವನ್ನು ಉಪಯೋಗಿಸಿ ಏರ್‌ ಸ್ಟ್ರಿಪ್‌ ನಿರ್ಮಾಣದ ಬಗ್ಗೆ ಒಂದು ಉತ್ತಮ ವರದಿ ಹಾಗೂ ನಕ್ಷೆ ರೂಪಿಸಿದ್ದರೆ ಏರ್‌ಸ್ಟ್ರಿಪ್‌ ನಿರ್ಮಾಣದ ಕನಸಿಗೆ ರೆಕ್ಕೆಗಳು ಬಲಿತು ಹಾರಬಹುದಿತ್ತು. ಆದರೆ ಬಿಆರ್‌ಡಿಸಿ ಈ ನಿಟ್ಟಿನಲ್ಲಿ ಯಾವುದೇ ಶ್ರಮ ವಹಿಸಲಿಲ್ಲ. ವರದಿ ರೂಪಿಸಿ ಸರಕಾರಕ್ಕೆ ನೀಡಿದ್ದಲ್ಲಿ ಮೇಜರ್‌ ಇನ್‌ಫ್ರಾಸ್ಟ್ರಕ್ಚರ್‌ ಫಂಡ್‌ ಮೂಲಕ ಏರ್‌ಸ್ಟ್ರಿಪ್‌ ನಿರ್ಮಾಣಕ್ಕೆ ಅಗತ್ಯವಾದ 35 ಕೋಟಿ ರೂ.ಲಭಿಸುತ್ತಿತ್ತು. ಬಜೆಟ್‌ ಮೂಲಕ ನಿರ್ಮಾಣ ಕಾರ್ಯಕ್ಕೆ ಅಗತ್ಯವಾದ ಹಣವನ್ನು ಮೀಸಲಿರಿಸಬಹುದಾಗಿತ್ತು ಎಂದು ಹಿರಿಯ ಅಧಿಕಾರಗಳು ಅಭಿಪ್ರಾಯಪಡುತ್ತಾರೆ.

ಲಕ್ಷಾಂತರ ರೂಪಾಯಿ ವ್ಯರ್ಥ 
ಬೇಕಲ ಏರ್‌ಸ್ಟ್ರಿಪ್‌ ಯೋಜನೆಗಾಗಿ ಹಲವು ಲಕ್ಷ ರೂ.ಗಳನ್ನು ಸರಕಾರವು ತನ್ನ ಖಜಾನೆಯಿಂದ ವ್ಯರ್ಥಗೊಳಿಸಿದೆ. ಈ ಹಿಂದೆ ಯೋಜನೆಯ ರೂಪುರೇಷೆ ತಯಾರಿಸಲು ಸಿಯಾಲ್‌ಗೆ ನೀಡಿದ್ದ 25 ಲಕ್ಷರೂ.ಗಳು ಯಾವುದೇ ಪ್ರಗತಿಯನ್ನು ಕಂಡಿಲ್ಲ. ಯೋಜನೆಯ ಬಗ್ಗೆ ಅಧ್ಯಯನಕ್ಕಾಗಿ ಪೆರಿಯಾದಲ್ಲಿ ಪ್ರತ್ಯೇಕ ಕಚೇರಿ ನಿರ್ಮಿಸಿ ಕಾರ್ಯಾಚರಿಸಿದರೂ ಎರಡು ವರ್ಷಗಳಿಂದ ಯೋಜನೆಗೆ ಅಂತಿಮ ಸ್ಪರ್ಶ ನೀಡಲು ಸಾಧ್ಯವಾಗಲಿಲ್ಲ. ಕಚೇರಿಗೆ ಅತೀ ಅಗತ್ಯವಾದ ಕಟ್ಟಡ ನಿರ್ಮಾಣ ಹಾಗೂ ಪೀಠೊಪಕರಣಗಳಿಗಾಗಿ 4 ಲಕ್ಷ ರೂ.ಗಳನ್ನು ವ್ಯಯಿಸಿದ್ದು ಯೋಜನೆಯ ದೊಡ್ಡ ಸಾಧನೆಯಾಗಿದೆ. ಅಲ್ಲದೆ ಇಲ್ಲಿ ನಿಯೋಜಿಸಿದ ಇಬ್ಬರು ಸಿಬಂದಿಗೆ ಮೂರು ಲಕ್ಷರೂ. ಸಂಬಳ ನೀಡಲಾಗಿದೆ. ಹಿಂದಿನ ಐಕ್ಯರಂಗದ ಅಧಿಕಾರದ ಅವಧಿಯಲ್ಲಿ ಈ ಯೋಜನೆ ಸಂಪೂರ್ಣ ನಿರ್ಜೀವವಾಗಿತ್ತು. ಪ್ರಸ್ತುತ ಸರಕಾರವು ಯೋಜನೆ ಬಗ್ಗೆ ಉತ್ಸುಕತೆ ತೋರಿದೆ. ಯೋಜನೆ ಪೂರ್ಣಗೊಳಿಸಲು ಅಗತ್ಯವಾದ ಕೆಂದ್ರ ಸರಕಾರದ ಸಹಾಯವನು °ಕೋರಿದೆ. ಇನ್ನಾದೂ ಶೀಘ್ರವೇ ಬೇಕಲ ಏರ್‌ಸ್ಟ್ರಿಪ್‌ ನಿರ್ಮಾಣ ಗರಿಗೆದರುವುದೇ ಎಂದು ಕಾದು ನೋಡಬೇಕಿದೆ.

ಈ ಯೋಜನೆಗೆ ಅಗತ್ಯವಾದ 51.56 ಎಕರೆ ಸ್ಥಳವನ್ನು ಕೊಳ್ಳಲಾಗಿದೆ. ಯೋಜನೆ ರೂಪಿಸಿದ ಮೇಲೆ ತಕ್ಕುದಾದ ಲಾಭಾಂಶ ಸಿಗುವುದೇ ಎಂಬ ಅಂಶವನ್ನು ಪರಿಗಣಿಸಬೇಕಿದೆ ಎನ್ನುತ್ತಾರೆ ಬಿಆರ್‌ಡಿಸಿ ಅಧಿಕಾರಿಗಳು.
ಬಿಆರ್‌ಡಿಸಿ ಅಧಿಕಾರಿಗಳ ಅನಾಸ್ಥೆ ಯೋಜನೆಗೆ ಮುಳುವಾಗಿದೆ, ಯೋಜನೆ ಯನ್ನುಗಂಭೀರವಾಗಿ ಪರಿಗಣಿಸಿ ಚರ್ಚಿಸಿ ಸೂಕ್ತ ಹೆಜ್ಜೆ ಇಡಲಾಗುವುದು ಎಂದು ಉದುಮ ಶಾಸಕ ಕೆ. ಕುಞರಾಮನ್‌ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next