Advertisement

ಹಾನಿ ಮಾಡುತ್ತಾ ಫೋನಿ?

01:57 AM May 03, 2019 | sudhir |

ಪೂರ್ವ ಕರಾವಳಿಗೆ ಮತ್ತೆ ಚಂಡಮಾರುತದ ಭೀತಿ ಉಂಟಾಗಿದೆ. ಬಂಗಾಳ ಕೊಲ್ಲಿಯಲ್ಲಿ ಫೋನಿ ಎಂಬ ಹೆಸರಿನ ಚಂಡಮಾರುತ ಎದ್ದಿದೆ. ದೇಶದಲ್ಲಿ ಹಿಂದಿನ ವರ್ಷಗಳಲ್ಲಿ ಉಂಟಾದ ಚಂಡಮಾರುತ ಮತ್ತು ಅದಕ್ಕೆ ಸಂಬಂಧಿಸಿದ ಕುತೂಹಲಕಾರಿ ಮಾಹಿತಿ ನಿಮಗಾಗಿ

Advertisement

 ಫೋನಿ ಎಂದರೇನು?
ಪ್ರಸಕ್ತ ಸಾಲಿನಲ್ಲಿ ಬಾಂಗ್ಲಾದೇಶ ಹೆಸರು ಇರಿಸಿದೆ. ಫೋನಿ ಎಂದರೆ ಬಂಗಾಳಿ ಭಾಷೆಯ ಹೆಸರು. ಅದಕ್ಕೆ “ಸರ್ಪದ ಹೆಡೆ’ ಎಂಬ ಅರ್ಥವಿದೆ.

 ಬಂಗಾಳ ಕೊಲ್ಲಿಯಲ್ಲಿಯೇ ಹೆಚ್ಚು
35 ಹಾನಿಕಾರಕ ಚಂಡಮಾರುತಗಳ ಪೈಕಿ 26 ಬಂಗಾಳಕೊಲ್ಲಿಯಲ್ಲಿಯೇ ಉಂಟಾಗಿದೆ. ಅದರಿಂದ ಬಾಂಗ್ಲಾದೇಶಕ್ಕೆ ಹೆಚ್ಚಿನ ಹಾನಿ ಅನುಭವಿಸಿದೆ.
ಟ್ರಾಪಿಕಲ್‌ ಸೈಕ್ಲೋನ್‌ ಉಂಟಾಗುವ ವಿಶ್ವದ ಶೇ.40ರಷ್ಟು ಸಾವು-ನೋವು ಈ ದೇಶದಲ್ಲಿಯೇ ಉಂಟಾಗಿದೆ. ಈ ಪ್ರಮಾಣ 2 ಶತಮಾನಗಳಲ್ಲಿಯೇ ಅತ್ಯಂತ ಹೆಚ್ಚಿನದ್ದು. ಈ ಪೈಕಿ ಭಾರತದಲ್ಲಿಯೂ ಸಾವು-ನೋವು ಉಂಟಾಗಿದೆ.
ಭಾರತದಲ್ಲಿ ಒಡಿಶಾಕ್ಕೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಚಂಡಮಾರುತ ಅಪ್ಪಳಿಸಿದೆ. 1891ರಿಂದ 2002ರ ವರೆಗೆ 98 ಚಂಡಮಾರುತ ಬೀಸಿದೆ. ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿಯೂ ಗರಿಷ್ಠ ಪ್ರಮಾಣದ ಹಾನಿ ಉಂಟಾಗಿದೆ.

 ಪೂರ್ವ ಕರಾವಳಿಯಲ್ಲಿಯೇ ಏಕೆ?
ಅರಬೀ ಸಮುದ್ರಕ್ಕೆ ಹೋಲಿಕೆ ಮಾಡಿದರೆ ಬಂಗಾಳ ಕೊಲ್ಲಿಯಲ್ಲಿಯೇ ಹೆಚ್ಚು ಚಂಡಮಾರುತ ಉಂಟಾಗುತ್ತದೆ.

ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತ ಉಂಟಾದರೂ, ಭಾರತದ ಕಡೆಗೆ ಬರುವ ಬದಲು ಒಮಾನ್‌ ಕಡೆಗೇ ಹೋಗುತ್ತದೆ.

Advertisement

ಪಶ್ಚಿಮ ಕರಾವಳಿಗಿಂತ ಪೂರ್ವ ಭಾಗದ ಪ್ರದೇಶಗಳು ಕೊಂಚ ಸಮತಟ್ಟಿನ ಭಾಗ ಹೊಂದಿದೆ. ಅವುಗಳಿಗೆ ಗಾಳಿಯನ್ನು ತಿರುಗಿಸುವ ಸಾಮರ್ಥ್ಯ ಇಲ್ಲದೇ ಇರುವುದರಿಂದ ಹೆಚ್ಚು ರಭಸವಾಗಿಯೇ ಬೀಸುತ್ತವೆ.

ಸೈಕ್ಲೋನ್‌ಗಳಿಗೆ ಹೆಸರೇಕೆ?
– ಆರಂಭದಲ್ಲಿ ಜನರಿಗೆ ಅವುಗಳನ್ನು ಗುರುತಿಸಲು ನೆರವಾಗಲು ಅನುಕೂಲ ಮತ್ತು ಯಾವ ಅಕ್ಷಾಂಶ ಮತ್ತು ರೇಖಾಂಶದಲ್ಲಿ ಅದು ಬೀಸಿದೆ ಎಂದು ತಿಳಿಯಲು ನೆರವು.
– ಮಾಧ್ಯಮಗಳಿಗೆ ಅವುಗಳ ಬಗ್ಗೆ ವರದಿಗೆ ಅನುಕೂಲ.
– ಡಬ್ಲೂéಎಂಒ ಪ್ರಕಾರ ಸಮುದಾಯದಲ್ಲಿ ಅಂದರೆ ಜನರು ಮತ್ತು ಆಡಳಿತ ವ್ಯವಸ್ಥೆಗೆ ಸಂಭಾವ್ಯ ಪರಿಸ್ಥಿತಿ ಎದುರಿಸಲು ನೆರವಾಗುತ್ತದೆ.

ಸೈಕ್ಲೋನ್‌ನ ಅವಧಿ
ಏಪ್ರಿಲ್‌ನಿಂದ ಡಿಸೆಂಬರ್‌ ವರೆಗೆ ಸೈಕ್ಲೋನ್‌ ಅಥವಾ ಚಂಡಮಾರುತ ಬೀಸುತ್ತದೆ. ಶೇ.65ರಷ್ಟು ಚಂಡಮಾರುತ ವರ್ಷದ ನಾಲ್ಕು ತಿಂಗಳಲ್ಲಿ ಮಾತ್ರ ಉಂಟಾಗುತ್ತದೆ.

ಹೆಸರಿನ ಹಿಂದಿನ ಇತಿಹಾಸ
ಚಂಡಮಾರುತಗಳಿಗೆ ಹೆಸರು ಇರಿಸುವ ಕ್ರಮ ವಿದೇಶಗಳಲ್ಲಿ ಶತಮಾನಗಳಿಂದ ಇದೆ. ಕೆರೆಬಿಯನ್‌ ದ್ವೀಪ ಸಮೂಹಗಳಲ್ಲಿನ ಜನರು ದಿನಕ್ಕೆ ಸಂಬಂದಿಸಿದ ಹೆಸರಿನ ಸಂತನ ಹೆಸರಿನಲ್ಲಿ ನಾಮಕರಣ ಮಾಡುತ್ತಿದ್ದರು.
1953ರಲ್ಲಿ ಅಮೆರಿಕ ಹವಾಮಾನ ಇಲಾಖೆ ಹೆಸರು ಇರಿಸುವ ಬಗ್ಗೆ ಅಧಿಕೃತ ಹೆಜ್ಜೆ ಇರಿಸಿತು.

1979ಕ್ಕಿಂತ ಮೊದಲು ಮಹಿಳೆಯರ ಹೆಸರನ್ನು ನೀಡಲಾಗುತ್ತಿತ್ತು. ಅದೇ ವರ್ಷದಿಂದ ಪುರುಷರ ಹೆಸರು ಸೂಚಿಸುವಂಥವುಗಳನ್ನು ಇರಿಸುವುದಕ್ಕೂ ನಿರ್ಧರಿಸಲಾಯಿತು.

ವಿಶ್ವ ಹವಾಮಾನ ಸಂಸ್ಥೆ (ಡಬ್ಲೂéಎಂಒ) ಚಂಡಮಾರುತದ ಬಗೆಗಿನ ಎಲ್ಲಾ ಮಾಹಿತಿ, ದಾಖಲೆಗಳನ್ನು ಇರಿಸಿಕೊಳ್ಳುತ್ತದೆ.

ಒಟ್ಟು ಆರು ವಿಧಗಳ ಹೆಸರುಗಳನ್ನು ಇರಿಸಲಾಗುತ್ತದೆ. ಅದನ್ನು ಪ್ರತಿ ಆರು ವರ್ಷಗಳಿಗೆ ಒಮ್ಮೆ ಪುನರಾವರ್ತಿಸಲಾಗುತ್ತದೆ. ಭಾರತ ಇದು ವರೆಗೆ ಅಗ್ನಿ, ಬಿಜಿಲಿ, ಆಕಾಶ್‌, ಜಲ, ಲೆಹರ್‌, ಮೇಘ, ಸಾಗರ ಮತ್ತು ವಾಯು ಎಂಬ ಹೆಸರುಗಳನ್ನು ನೀಡಿದೆ.

ಭಾರತೀಯ ಉಪಖಂಡಕ್ಕೆ ಸಂಬಂಧಿಸಿದಂತೆ 2000ನೇ ಇಸ್ವಿಯಿಂದ ಈಚೆಗೆ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಭಾರತ, ಬಾಂಗ್ಲಾದೇಶ, ಮಾಲ್ಡೀವ್ಸ್‌, ಮ್ಯಾನ್ಮಾರ್‌, ಒಮಾನ್‌, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್‌ ಒಟ್ಟಾಗಿ ಹೆಸರು ಇರಿಸುವ ಬಗ್ಗೆ ಸೂತ್ರ ರೂಪಿಸಿದರು. 2004ರಿಂದ ಅದನ್ನು ಅನುಸರಿಸಲಾಗುತ್ತಿದೆ.

ಹರಿಕೇನ್‌, ಸೈಕ್ಲೋನ್‌ ಮತ್ತು ಟೈಫ‌ೂನ್‌
ಇಂಗ್ಲಿಷ್‌ನಿಂದ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ಅದರ ಅರ್ಥವನ್ನು ವಿವರಿಸುವಾಗ ಹೆಚ್ಚಿನ ಅರ್ಥ ವ್ಯತ್ಯಾಸ ಇಲ್ಲ. ಭೌಗೋಳಿಕವಾಗಿ ಇರುವ ವ್ಯತ್ಯಾಸ ಹೊರತುಪಡಿಸಿದರೆ ಮೂಲ ವಿಚಾರ ಒಂದೇ ಆಗಿರುತ್ತದೆ. ಅಟ್ಲಾಂಟಿಕ್‌ ಮತ್ತು ಈಶಾನ್ಯ ಶಾಂತಿ ಸಾಗರ ವ್ಯಾಪ್ತಿಯಲ್ಲಿ ಉಂಟಾಗುವುದಕ್ಕೆ ಹರಿಕೇನ್‌, ಶಾಂತಿಸಾಗರದ ವಾಯವ್ಯ ಭಾಗದಲ್ಲಿ ಬೀಸುವ ಗಾಳಿಗೆ ಟೈಫ‌ೂನ್‌, ಹಿಂದೂ ಮಹಾಸಾಗರ ಮತ್ತು ದಕ್ಷಿಣ ಶಾಂತಿಸಾಗರ ವ್ಯಾಪ್ತಿಯ ಬೀಸುವುದಕ್ಕೆ ಸೈಕ್ಲೋನ್‌ ಎನ್ನುತ್ತಾರೆ.

ಅವುಗಳ ಪ್ರಭಾವ, ಶಕ್ತಿ
ಪ್ರತಿ ಗಂಟೆಗೆ 62 ಕಿಮೀ ವೇಗ ಇದ್ದರೆ- ಟ್ರಾಪಿಕಲ್‌ ಸೈಕ್ಲೋನ್‌
ಪ್ರತಿ ಗಂಟೆಗೆ 89-118 ಕಿಮೀ ಇದ್ದರೆ- ಗಂಭೀರ ಪ್ರಮಾಣದ ಸೈಕ್ಲೋನ್‌
ಪ್ರತಿ ಗಂಟೆಗೆ 119- 221 ಕಿಮೀ ಇದ್ದರೆ- ಅತ್ಯಂತ ಗಂಭೀರ ಪ್ರಮಾಣದ ಸೈಕ್ಲೋನ್‌ ಇದಕ್ಕಿಂತ ಹೆಚ್ಚು ಗಾಳಿಯ ವೇಗ ಇದ್ದರೆ ಸೂಪರ್‌ ಸೈಕ್ಲೋನ್‌ ಎಂದು ಕರೆಯಲಾಗುತ್ತದೆ.

ಭಾರತಕ್ಕೆ ಅಪ್ಪಳಿಸಿದ ಚಂಡಮಾರುತ
– 2018 ಗಜ
– 2016 ವರದಾ
– 2014 ಹುಡ್‌ಹುಡ್‌
– 2013 ಫೈಲಿನ್‌
– 2009 ಫ‌ಯಾನ್‌
– 2008 ನರ್ಗಿಸ್‌
– 1999 ಒಡಿಶಾ ಸೈಕ್ಲೋನ್‌

ಎಚ್ಚರಿಕೆ ವಿಧಗಳು
– ಚಂಡಮಾರುತ ಬೀಸುವ ಸಂದರ್ಭದಲ್ಲಿ ಹವಾಮಾನ ಇಲಾಖೆ ಹಲವು ರೀತಿಯ ಎಚ್ಚರಿಕೆಗಳನ್ನು ನೀಡುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಅವುಗಳ ವಿವರ ಹೀಗಿದೆ.

– ರೆಡ್‌ ಅಲರ್ಟ್‌- ಕ್ರಮ ಕೈಗೊಳ್ಳಬೇಕು
– ಯೆಲ್ಲೋ ಅಲರ್ಟ್‌- ಪರಿಸ್ಥಿತಿ ನೋಡಿ ಕ್ರಮ ಕೈಗೊಳ್ಳಬೇಕು
– ಆರೆಂಜ್‌- ಸಿದ್ಧರಾಗಿರಿ.
– ಗ್ರೀನ್‌- ನೋ ವಾರ್ನಿಂಗ್‌, ನೋ ಆ್ಯಕ್ಷನ್‌

Advertisement

Udayavani is now on Telegram. Click here to join our channel and stay updated with the latest news.

Next