Advertisement

ಮಳೆಗಾಲದಲ್ಲಿ ಮನೆಯ ಅಂದ ಹೆಚ್ಚಿಸಲು ಹೀಗೆ ಮಾಡಿ

06:00 AM Jul 06, 2018 | Team Udayavani |

ಮಳೆಗಾಲ ಬರುತ್ತಿದ್ದಂತೆ ಕೊಡೆ, ರೈನುಕೋಟು, ರೈನ್‌ ಶೂ ಮೊದಲಾದವುಗಳ ಖರೀದಿ ಜೋರಾಗಿಯೇ ನಡೆಯುತ್ತದೆ. ಹಾಂ! ಇವುಗಳ ಜೊತೆಗೆ ಮಳೆಗಾಲದಲ್ಲಿ ಇರಬೇಕಾದ ಇತರ ಮುಖ್ಯ ವಸ್ತುಗಳು ಇಲ್ಲಿವೆ.

Advertisement

ಗೋಡೆಯ ಹುಕ್‌ಗಳು
ಒದ್ದೆಯಾದ ರೈನ್‌ಕೋಟ್‌, ಛತ್ರಿಗಳನ್ನು ಅಲ್ಲಲ್ಲಿ ಇಟ್ಟರೆ ಮನೆತುಂಬಾ ನೀರು. ಆದ್ದರಿಂದ ಮಳೆಗಾಲದ ಸಮಯದಲ್ಲಿ ವಿಶೇಷವಾಗಿ ಛತ್ರಿ ಮತ್ತು ರೈನ್‌ಕೋಟ್‌ಗಳನ್ನು ಇಡಲಿಕ್ಕಾಗಿಯೇ ರಚಿಸಿದ “ವಾಲ್‌ಹುಕ್‌’ಗಳು ವೈವಿಧ್ಯಮಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿವೆ. ಮನೆಯನ್ನು ಪ್ರವೇಶಿಸಿದ ಬಳಿಕ ಗೋಡೆಯ ಹಿಂದೆ, ಬಾಗಿಲ ಹಿಂದೆ, ಅಥವಾ ಮನೆಯ ಎದುರಿನ ಗೋಡೆಗೆ ವಾಲ್‌ಹುಕ್‌ ಅಂಟಿಸಿದರೆ ಅಥವಾ ಫಿಕ್ಸ್‌ ಮಾಡಿದರೆ, ಇಡೀ ಮಳೆಗಾಲ ಮಳೆನೀರು ಮನೆಯೊಳಗೆ ಹರಿಯುವುದಿಲ್ಲ ! ಮನೆ ಬೆಚ್ಚಗೆ, ಜೊತೆಗೆ ರೈನ್‌ಕೋಟ್‌, ಕೊಡೆಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಎಲ್ಲೆಂದರಲ್ಲಿ ಕೊಡೆ, ರೈನ್‌ಕೋಟ್‌ಗಳನ್ನು ಬಿಸಾಡಿ ಗಡಿಬಿಡಿಯಲ್ಲಿ ಹುಡುಕುವ ಅವಸರವೂ ಇರುವುದಿಲ್ಲ. ನಿಮಗಿಷ್ಟವಾದ ವಾಲ್‌ಹುಕ್‌ ಆರಿಸಿ ಮಳೆಗಾಲದಲ್ಲಿ ಮನೆಯನ್ನು ಅಂದಗೊಳಿಸಿ!

ಅಂಬ್ರೆಲ್ಲಾ ಸ್ಟಾಂಡ್‌ (ಕೊಡೆಯ ಸ್ಟಾಂಡ್‌)
ಮಳೆಗಾಲದಲ್ಲಿ ಅಂಬ್ರೆಲ್ಲಾ ಸ್ಟಾಂಡ್‌ ಅತೀ ಅವಶ್ಯ. ಅದರ ಜೊತೆಗೆ ಬಿರು ಬೇಸಿಗೆಯಲ್ಲಿಯೂ ಇಂದು ಬಣ್ಣ ಬಣ್ಣದ ಛತ್ರಿ ಹಿಡಿದು ಬಿಸಿಲಿನ ಬೇಗೆಯಿಂದ ಮುಕ್ತವಾಗಲೂ ಛತ್ರಿ ಬೇಕಾಗಿದೆ! ಜೊತೆಗೆ ಯಾವಾಗವೆಂದರೆ ಆವಾಗ ಹರಿಯುವ ಮಳೆ ಬೇರೆ! ಆದ್ದರಿಂದ ಅಂದವಾದ ಕೊಡೆಯ ಸ್ಟಾಂಡ್‌ನ್ನು ಸೂಕ್ತವಾದ ಸ್ಥಳದಲ್ಲಿ ಮನೆಯಲ್ಲಿರಿಸಿದರೆ ಮಳೆಗಾಲದಲ್ಲಿ ಪ್ರಯೋಜಕ. ಮಾತ್ರವಲ್ಲ ಇತರ ಸಮಯದಲ್ಲೂ ಛತ್ರಿಯನ್ನು ಅಲ್ಲಿಟ್ಟು ಬೇಕಾದ ಹಾಗೆ ಉಪಯೋಗಿಸಬಹುದು!

ಸೆರಾಮಿಕ್‌ ಅಂಬ್ರೆಲ್ಲಾ ಸ್ಟಾಂಡ್‌ಗಳು ಇಂದು ಟ್ರೆಂಡಿಯಾಗಿವೆ. ಜೊತೆಗೆ ಪ್ಲಾಸ್ಟಿಕ್‌, ಸ್ಟೀಲ್‌, ಫೈಬರ್‌, ಮರದ ಹೀಗೆ ವೈವಿಧ್ಯಮಯ ಅಂಬ್ರೆಲ್ಲಾ ಸ್ಟಾಂಡ್‌ ಲಭ್ಯ. ನಿಮ್ಮ ಮನೆಗೆ ಮತ್ತು ಮನಕ್ಕೆ ಹೊಂದುವ ಅಂಬ್ರೆಲ್ಲಾ ಸ್ಟಾಂಡ್‌ ಈ ಮಳೆಗಾಲದಲ್ಲಿ ನಿಮ್ಮ ಜೊತೆಯಲ್ಲಿರಲಿ. 
ಇದು ಮನೆಯ ಇಂಟೀರಿಯರ್‌ನ ಅಂದವನ್ನೂ ಹೆಚ್ಚಿಸುತ್ತದೆ. ಆಫೀಸುಗಳಲ್ಲಿಟ್ಟರೆ ಶೋಪೀಸ್‌ನಂತೆ ಆಕರ್ಷಕವೂ.

ಮಳೆಗಾಲಕ್ಕಾಗಿ ವಿಶಿಷ್ಟ ಪರದೆಗಳು (ಕರ್ಟನ್‌ಗಳು)
ಮಳೆಗಾಲಕ್ಕಾಗಿಯೇ ವಿಶಿಷ್ಟ ಇಂಟೀರಿಯರ್‌ ಡಿಸಾೖನ್‌ ಅಥವಾ ಮನೆಯೊಳಗಣ ವಿನ್ಯಾಸವನ್ನು ಮಾಡಿದರೆ ಧೋ ಧೋ ಹರಿವ ಮಳೆಯಿರಲಿ, ಗುಡುಗು-ಮಿಂಚುಗಳಿರಲಿ  ಮನೆಯಲ್ಲಿ ಬೆಚ್ಚಗಿದ್ದು ಅಂತಹ ಕರ್ಟನ್‌ಗಳ ನಸುಕು ಬೆಳಕಿನಲ್ಲಿ ಆನಂದಿಸಬಹುದು!

Advertisement

ತೆಳ್ಳಗಿನ ಕರ್ಟನ್‌ಗಳು ಮಳೆಗಾಲಕ್ಕೆ ಹಿತಕರ. ಮುಖ್ಯವಾಗಿ ಶಿಯರ್‌ ಕರ್ಟನ್‌ಗಳು (sheer curtains) ಮನೆಯ ಒಳಾಂಗಣ ಸೌಂದರ್ಯ ಹೆಚ್ಚಿಸುತ್ತವೆ. ತಿಳಿಬಣ್ಣದ ಪಾರದರ್ಶಕ ಶಿಯರ್‌ ಕರ್ಟನ್‌ಗಳು ಬಲು ಅಂದ. ಬಿಳಿ, ಕೆನೆಬಣ್ಣದ ಕರ್ಟನ್‌ ಮಾತ್ರವಲ್ಲ ಮನೆಯ ಕೋಣೆಯ ಗೋಡೆಗಳಿಗೆ ಹೊಂದುವಂತಹ ತಿಳಿಬಣ್ಣದ ಪರದೆಗಳನ್ನು ಅಳವಡಿಸಿದರೆ ಇನ್ನೂ ಚಂದ. ಲಿನೆನ್‌ ಪರದೆಗಳೂ ಇಂದು ಜನಪ್ರಿಯ. ಲೇಸ್‌ಗಳುಳ್ಳ ಪಾರಂಪರಿಕ ಶೈಲಿಯ ಪರದೆಗಳೂ ಲಭ್ಯ. ಸಿಲ್ಕ್ ಕರ್ಟನ್‌ಗಳೂ ವಿಶೇಷ ಶೋಭೆ ನೀಡುತ್ತವೆ.

ಡೋರ್‌ ಮ್ಯಾಟ್‌ಗಳು
ಮಳೆಗಾಲದಲ್ಲಿ ಮಳೆಯ ನೀರನ್ನು ಹೀರುವ ಡೋರ್‌ಮ್ಯಾಟ್‌ ಬೇಕೇ ಬೇಕು. ಪ್ಲಾಸ್ಟಿಕ್‌, ಜ್ಯೂಟ್‌, ರಬ್ಬರ್‌, ಫೈಬರ್‌ ಹೀಗೆ ವಿವಿಧ ಬಗೆಯ ಆಕರ್ಷಣೀಯ, ಆಧುನಿಕ ಟ್ರೆಂಡಿ ಡೋರ್‌ ಮ್ಯಾಟ್‌ಗಳು ಇಂದು ಎಲ್ಲೆಡೆ ಜನಪ್ರಿಯವಾಗುತ್ತಿವೆ.

ಮನೆಯ ಪ್ರವೇಶದ ಮುಖ್ಯದ್ವಾರದ ಹೊರಗೆ, ಒಳಗೆ, ಸ್ನಾನದ ಕೋಣೆಯ ಹೊರಭಾಗದಲ್ಲಿ , ಲಿವಿಂಗ್‌ ರೂಮ್‌ನಲ್ಲಿ, ಅಡುಗೆ ಕೋಣೆಯಲ್ಲಿ , ಮಲಗುವ ಕೋಣೆಯಲ್ಲಿ ವಿವಿಧ ಬಗೆಯ ಮಳೆಗಾಲದ ಡೋರ್‌ ಮ್ಯಾಟ್‌ಗಳನ್ನು ಆರಿಸಿ ತಂದು ಇರಿಸಿದರೆ ಮನೆಗೂ ಶೋಭೆ. ಮಳೆಯಲ್ಲಿ ಮನೆಯ ವಾತಾವರಣವೂ ಬೆಚ್ಚಗಿರುತ್ತದೆ.

ಮುಖ್ಯವಾಗಿ ಮನೆಯ ಪ್ರವೇಶದ್ವಾರದ ಹೊರಗೆ ಮತ್ತು ಒಳಗೆ ಅಂದದ ದೊಡ್ಡ ಮ್ಯಾಟ್‌ ಆವಶ್ಯಕ. ಉಳಿದ ಕಡೆ ಸಣ್ಣ ಮ್ಯಾಟ್‌ ಸಾಕಾಗುತ್ತದೆ. ಈ ಮ್ಯಾಟ್‌ಗಳು ತೊಳೆಯಬಹುದಾದ್ದರಿಂದ, ವಾರಕ್ಕೊಮ್ಮೆ ತೊಳೆದು ಒಣಗಿಸಿದರೆ ಅದರಲ್ಲಿರುವ ಮಳೆಗಾಲದ ಕೊಳೆ, ಧೂಳು, ಮಣ್ಣು ತೊಳೆದು ಹೋಗಿ ಮತ್ತೆ ಶುಭ್ರವಾಗಿ ಹೊಳೆದು ನಿಮ್ಮನ್ನು ಮಳೆಯಲ್ಲಿ ಮನೆಯೊಳಗೆ ಸ್ವಾಗತಿಸುತ್ತದೆ!

ಫ್ಲೋರ್‌ ಮ್ಯಾಟ್‌
ಮಳೆಗಾಲದಲ್ಲಿ ಬಳಸಲು ಅಂದದ ಫ್ಲೋರ್‌ ಮ್ಯಾಟ್‌ಗಳೂ ಲಭ್ಯ. “ಆ್ಯಕ್ವಾಟ್ರಾಪ್‌ ಮ್ಯಾಟ್‌’ಗಳು ಮನೆಯ ಪ್ರವೇಶದ್ವಾರದ ಒಳಗೆ ಹಾಸಲು ಸೂಕ್ತ. ಈ ಮ್ಯಾಟ್‌ಗಳ ವಿಶೇಷವೆಂದರೆ, ಇವು ತೇವಾಂಶ ಹಾಗೂ ಕೊಳೆ, ಮಣ್ಣು ಹೀರಿಕೊಳ್ಳುವುದು ಮಾತ್ರವಲ್ಲದೆ ಪ್ರವೇಶದ್ವಾರದಲ್ಲೇ ಈ ಮ್ಯಾಟ್‌ಗಳು ಬ್ಯಾಕ್ಟೀರಿಯಾ, ಜೀವಾಣುಗಳನ್ನು ತಡೆಗಟ್ಟುತ್ತದೆ. ಈ ಕಾರ್ಯಕ್ಕಾಗಿಯೇ ವಿಶಿಷ್ಟವಾಗಿ ಈ ಮ್ಯಾಟ್‌ ರಚಿತವಾಗಿವೆ. ಜೊತೆಗೆ ಕಣ್ಣಿಗೂ ಮನಸ್ಸಿಗೂ ಮುದ ನೀಡುವ ವಿವಿಧ ಬಣ್ಣದ ಡಿಸೈನ್‌ಗಳಲ್ಲಿ ಲಭ್ಯ. ಮಳೆಗಾಲದ ಮ್ಯಾಟ್‌ಗಳನ್ನು ಶಾಪಿಂಗ್‌ನಲ್ಲಿ ನಿಮಗಿಷ್ಟವಾದ್ದನ್ನು ಆರಿಸಿ!

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next