Advertisement
ತನಿಖೆ ಪ್ರಗತಿಯಲ್ಲಿರುವಾಗಲೇ ಎಸಿಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಬೆಳ್ಳಂದೂರು ಬಿಬಿಎಂಪಿ ಕಚೇರಿಯ ಎಂಜಿನಿಯರಿಂಗ್ ಕೊಠಡಿಯಲ್ಲಿ ಶುಕ್ರವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ ಹಲವು ಮಹತ್ವ ಕತಡಗಳು ಸುಟ್ಟು ಕರಕಲಾಗಿದ್ದು, ಹಗರಣಕ್ಕೆ ಸಂಬಂಧಿಸಿದ ಕಡತಗಳನ್ನು ನಾಶಪಡಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಸಂಶಯ ಮೂಡಿಸಿದೆ.
Related Articles
Advertisement
ಟಿಡಿಆರ್ ಕಡತಗಳು ಇರಲಿಲ್ಲ – ಜಂಟಿ ಆಯುಕ್ತರ ವರದಿ: ಬೆಳ್ಳಂದೂರು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರ ಕೊಠಡಿಯಲ್ಲಿ ಶುಕ್ರವಾರ ಫಾಲ್‌ಸೀಲಿಂಗ್ ಹೊತ್ತಿ ಉರಿದು ಬೆಂಕಿ ಅವಘಡ ಸಂಭವಿಸಿದೆ. ಕೊಠಡಿಯಲ್ಲಿ ಹೊಸದಾಗಿ ಖರೀದಿಸಿದ್ದ ಪೀರೋಪಕರಣಗಳು ಟೇಬಲ್‌ಫ್ಯಾನ್ ಮತ್ತು ಟೇಬಲ್ ಮೇಲೆ ಇರಿಸಲಾಗಿದ್ದ ಸುಮಾರು 15-20 ಕತಡಗಳು ಹಾಗೂ ರ್ಯಾಕ್‌ನಲ್ಲಿ ಜೋಡಿಸಿದ್ದ ಹಲವು ಕಡತಗಳು ಉರಿದುಹೋಗಿವೆ.
ಕೊಠಡಿಯಲ್ಲಿ ಮಂಜೂರಾದ ನಕ್ಷೆಗಳ ಕಡತಗಳು, ಕೋರ್ಟ್ ಕಚೇರಿಗೆ ಸಂಬಂಧಿಸಿದ ಹಾಗೂ ಲೋಕಾಯುಕ್ತ ಕಚೇರಿಗೆ ಸಂಬಂಧಿಸಿ ವರದಿಗಳ ಕಡತಗಳು ಮತ್ತು ಆರ್‌ಟಿಐಗೆ ಸಂಬಂಧಿಸಿದ ಕತಡಗಳನ್ನು ಮಾತ್ರ ಇರಿಸಲಾಗಿದ್ದು, ಟಿಡಿಆರ್‌ಗೆ ಸಂಬಂಧಿಸಿದ ಯಾವುದೇ ಕಡತಗಳು ಕಚೇರಿಯಲ್ಲಿ ಇರಲಿಲ್ಲ ಎಂದು ಮಹದೇವಪುರ ವಲಯ ಜಂಟಿ ಆಯುಕ್ತರಾದ ಶೋಭಾ, ಬಿಬಿಎಂಪಿ ಆಯುಕ್ತರಿಗೆ ಶನಿವಾರ ವರದಿ ಸಲ್ಲಿಸಿದ್ದಾರೆ.
ಕಡತಕ್ಕೆ ಬೆಂಕಿ ಕುರಿತು ಪ್ರತ್ಯೇಕ ತನಿಖೆ: ಮಹದೇವಪುರ ವಲಯದ ಬೆಳ್ಳಂದೂರು ಉಪ ವಿಭಾಗದ ಎಂಜಿನಿಯರಿಂಗ್ ಕಚೇರಿಗೆ ಬೆಂಕಿ ಬಿದ್ದಿರುವ ಪ್ರಕರಣ ಸಂಬಂಧ ಬಿಬಿಎಂಪಿ ಆಯುಕ್ತರ ಜತೆ ಚರ್ಚಿಸಿ ಕಡತಗಳಿಗೆ ಹೆಚ್ಚಿನ ಭದ್ರತೆ ನೀಡುವಂತೆ ಸೂಚಿಸಲಾಗಿದೆ. ಹಾಗೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರತ್ಯೇಕವಾಗಿ ಎಸಿಬಿ ತನಿಖೆ ನಡೆಸಲಿದೆ. ಮತ್ತೂಂದೆಡೆ ನಾಪತ್ತೆಯಾಗಿರುವ ಪ್ರಕರಣದ ಪ್ರಮುಖ ಆರೋಪಿ ಕೃಷ್ಣಲಾಲ್ ಪತ್ತೆಗೆ ಎರಡು ವಿಶೇಷ ತಂಡ ರಚಿಸಲಾಗಿದೆ ಎಂದು ಎಸಿಬಿ ಐಜಿಪಿ ಎಂ.ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.
ವಾಲ್‌ಮಾರ್ಕ್ ಕಂಪನಿ ಮೇಲೆ ಎಸಿಬಿ ದಾಳಿ:ಬಿಬಿಎಂಪಿಯಲ್ಲಿ ನಡೆದಿದೆ ಎನ್ನಲಾದ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಅವ್ಯವಹಾರ ಕುರಿತು ಇತ್ತೀಚೆಗೆ ಬಿಡಿಎ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಲಾಲ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಶನಿವಾರ ನಗರದ ಪ್ರತಿಷ್ಠಿತ ವಾಲ್‌ಮಾರ್ಕ್ ಕಂಪನಿ ಮತ್ತು ಅದರ ನಿರ್ದೇಶಕರು ಹಾಗೂ ಸಿಬ್ಬಂದಿ ಇದ್ದ ಸ್ಥಳ ಸೇರಿ ಐದು ಕಡೆ ದಾಳಿ ನಡೆಸಿದ್ದಾರೆ.
ಮುಂಜಾನೆ ಐದು ಗಂಟೆ ಸುಮಾರಿಗೆ ಎಸಿಬಿಯ ಐದು ವಿಶೇಷ ತಂಡಗಳು ರೆಸಿಡೆನ್ಸಿ ರಸ್ತೆಯಲ್ಲಿರುವ ವಾಲ್‌ಮಾರ್ಕ್ ರಿಯಾಲಿಟಿ ಹೋಲ್ಡಿಂಗ್ ಪ್ರೈ.ಲಿ ಸಂಸ್ಥೆಯ ಕಚೇರಿ, ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕಂಪನಿಯ ನಿರ್ದೇಶಕ ರತನ್ ಬಾಬುಲಾಲ್ ಲಾಥ್ ಅವರ ನಿವಾಸ, ಕಂಪನಿ ಸಿಬ್ಬಂದಿ ಅಮಿತ್ ಜೆ. ಬೋಳಾರ್ ಅವರ ಇಂದಿರಾನಗರದ ಮನೆ,
ಹೊರಮಾವುನ ಕಲ್ಕೆರೆ ಮಖ್ಯರಸ್ತೆಯಲ್ಲಿರುವ ಕೆ.ಗೌತಮ್ ಅವರ ಮನೆ ಹಾಗೂ ಮುನಿರಾಜಪ್ಪ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಅಲ್ಲದೆ, ಹಗರಣದಲ್ಲಿ ವಾಲ್‌ಮಾರ್ಕ್ ಕಂಪನಿಯ ನಿರ್ದೇಶಕರು ಸೇರಿ ಕೆಲ ಸಿಬ್ಬಂದಿ ಹಗರಣದಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ವಾಲ್‌ಮಾರ್ಕ್ ಕಂಪನಿಯ ಕಂಪ್ಯೂಟರ್‌ನಲ್ಲಿದ್ದ ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಹಾಗೂ ದಾಳಿಗೊಳಗಾದ ವ್ಯಕ್ತಿಗಳ ಮನೆಗಳಲ್ಲಿ ಟಿಡಿಆರ್ ದಾಖಲೆಗಳು ಪತ್ತೆಯಾಗಿವೆ. ವಾಲ್‌ಮಾರ್ಕ್ ಕಂಪನಿಯಿಂದ ವ್ಯವಹರಿಸಲಾದ ಎಲ್ಲ ಟಿಡಿಆರ್‌ಗೂ ಕಂಪನಿ ನೌಕರ ಅಮೀತ್ ಜೆ.ಬೋಳಾರ್ ಅಧಿಕೃತ ಸಹಿ ಹಾಕಿದ್ದಾರೆ ಎಂದು ಎಸಿಬಿ ತಿಳಿಸಿದೆ.
ಇದೇ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಎಂಟಕ್ಕೂ ಹೆಚ್ಚು ಆರೋಪಿತ ವ್ಯಕ್ತಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದುವರೆಗೂ ನಡೆಸಿರುವ ದಾಳಿಯಲ್ಲಿ 20ಕ್ಕೂ ಹೆಚ್ಚು ಡಿಆರ್‌ಸಿ ದಾಖಲೆಗಳು ಪತ್ತೆಯಾಗಿವೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು.