ಗದಗ: ಜಿಲ್ಲೆಯಲ್ಲಿ ದೃಢಪಟ್ಟಿದ್ದ 23 ಎಚ್1ಎನ್1 ಸೋಂಕಿತರಲ್ಲಿ 22 ಜನರನ್ನು ಗುಣಪಡಿಸಲಾಗಿದೆ. ಎಚ್1ಎನ್1ಗೆ ಪರಿಣಾಮಕಾರಿ ಔಷಧಿಗಳು ಲಭ್ಯವಿದ್ದು, ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಸ್.ಎಂ. ಹೊನಕೇರಿ ಹೇಳಿದರು.
ಜಿಲ್ಲಾಡಳಿತ ಭವನದ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸೆಪ್ಟೆಂಬರ್‌ನಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 83 ಜನರಲ್ಲಿ ಎಚ್1ಎನ್1 ರೋಗ ಲಕ್ಷಣಗಳು ಕಂಡುಬಂದಿತ್ತು. ಅವರ ಗಂಟಲಿನ ದ್ರಾವಣ ಲೇಪನವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ಪೈಕಿ 23 ರೋಗಿಗಳಲ್ಲಿ ಎಚ್1ಎನ್1 ರೋಗ ದೃಢಪಟ್ಟಿತ್ತು. ಅದರಲ್ಲಿ ನ್ಯೂಮೋನಿಯಾದಿಂದ ಬಳಲುತ್ತಿದ್ದ ಐದು ವರ್ಷದ ಮಗುವೊಂದು ನಂತರ ಎಚ್1ಎನ್1 ಕಾರಣದಿಂದ ಸಾವನ್ನಪ್ಪಿದೆ. ಇನ್ನುಳಿದಂತೆ ಎಲ್ಲ 22 ಜನರಿಗೆ ಟೆಮ್ಮಿಂಗ್ ಫ್ಲ್ಯೂ ಎಂಬ ಮಾತ್ರೆಗಳ ಮೂಲಕ ಗುಣಪಡಿಸಲಾಗಿದೆ ಎಂದು ತಿಳಿಸಿದರು.
ಈ ರೋಗದಲ್ಲಿ ಮೂರು ಹಂತಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಸಾಮಾನ್ಯ ಜ್ವರ ಹಾಗೂ ಗಂಟಲು ನೋವು, 2ನೇ ಹಂತದಲ್ಲಿ ಜ್ವರದ ತಾಪ ಹೆಚ್ಚಿದ್ದು ಗಂಟಲು ಬೇನೆ ಹೆಚ್ಚಾಗುತ್ತದೆ. 3ನೇ ಹಂತದಲ್ಲಿ ಇದು ಇನ್ನೂ ಹೆಚ್ಚಾಗಿ ಮೈ ನೀಲಿ ಆಗುವ ಲಕ್ಷಣಗಳು ಕಂಡುಬರುತ್ತವೆ. ಈ ವೇಳೆ ಕೆಮ್ಮಿದಾಗ, ಸೀನಿದಾಗ, ವೈಯಕ್ತಿಕ ಸ್ವತ್ಛತೆ ಇಲ್ಲದೇ ಮೂಗು ಬಾಯಿ ಮುಚ್ಚಿದಾಗ ರೋಗದ ವೈರಸ್ ಗಳು ಪ್ರಸಾರವಾಗುತ್ತವೆ. ಈ ರೋಗದ ತಡೆಗೆ ಮುಂಜಾಗ್ರತಾ ಕ್ರಮವಾಗಿ ಕೆಮ್ಮು ಸೀನು ಇದ್ದಾಗ ಕೈವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಕೈ ಬಾಯಿಗಳನ್ನು ನಿಯಮಿತವಾಗಿ ಸ್ವಚ್ಛ ಮಾಡಿಕೊಳ್ಳಬೇಕು.
ಸೋಂಕಿರುವ ವ್ಯಕ್ತಿಗಳ ಹತ್ತಿರ ಹೋಗಬಾರದು. ಅನಿವಾರ್ಯವಾಗಿದ್ದಲ್ಲಿ ಮೂಗು ಬಾಯಿಗೆ ಮಾಸ್ಕ್ ಧರಿಸಬೇಕು. ಮಕ್ಕಳಲ್ಲಿ ತೀವ್ರ ಉಸಿರಾಟ, ನೀಲಿ ಮೈ, ದ್ರವ ಪದಾರ್ಥ ಸೇವನೆಗೆ ತೊಂದರೆ, ತೀವ್ರ ಜ್ವರ- ಕೆಮ್ಮು, ಮೈಮೇಲೆ ಬೊಬ್ಬೆಗಳು ಹಾಗೂ ದೊಡ್ಡವರಲ್ಲಿ ಉಸಿರಾಟದಲ್ಲಿ ತೊಂದರೆ, ಎದೆ ಹಾಗೂ ಹೊಟ್ಟೆ ನೋವು, ತಲೆ ಸುತ್ತುವಿಕೆ, ವಾಂತಿ, ಕೆಲಸದಲ್ಲಿ ಗೊಂದಲ ಇತ್ಯಾದಿಗಳು ಸೋಂಕಿತರ ಅಪಾಯದ ಚಿಹ್ನೆಗಳಾಗಿವೆ. ಇಂತಹ ಲಕ್ಷಣಗಳು ಕಂಡುಬರುತ್ತಿದ್ದಂತೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಡಾ| ಸತೀಶ ಬಸರಿಗಿಡದ ಮಾತನಾಡಿ, ಗ್ರಾಮ ಹಾಗೂ ನಗರಗಳಲ್ಲಿ ಆರೋಗ್ಯ ಕಾರ್ಯಕರ್ತರ, ಆಶಾ ಹಾಗೂ ವೈದ್ಯಾ ಧಿಕಾರಿಗಳು ಈ ರೋಗದ ಕುರಿತು ಮುಂಜಾಗ್ರತಾ ಕ್ರಮಗಳನ್ನು ತಿಳಿಸುವ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಚ್1ಎನ್1 ರೋಗಿಗಳನ್ನು ಉಪಚರಿಸಲೆಂದೇ ಪ್ರತೀ ತಾಲೂಕು ಆಸ್ಪತ್ರೆಯಲ್ಲಿ ಮೂರು ಬೆಡ್‌ಗಳ ಪ್ರತ್ಯೇಕ ವಾರ್ಡ್ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಸ್ಥಾಪಿಸಲಾಗಿದ್ದು, ವೆಂಟಿಲೇಟರ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕ ಪಡಬೇಕಿಲ್ಲ.
ಡಾ| ಎಸ್.ಎಂ. ಹೊನಕೇರಿ, ಡಿಎಚ್‌ಒ