Advertisement

ನನ್ನ ಬಗ್ಗೆ ಭಟ್ಟರಿಗೆ ಚಿಂತೆ ಬೇಡ: ಪ್ರಮೋದ್‌

12:21 AM Mar 30, 2019 | Sriram |

ಮಣಿಪಾಲ: ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ನನ್ನಲ್ಲಿ ನೀವು ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂದು ಕೇಳಿಕೊಂಡಾಗ ಕಾಂಗ್ರೆಸ್‌ ಮುಖಂಡರ ಒಪ್ಪಿಗೆ ಪಡೆದು ಸ್ಪರ್ಧಿಸುವ ಭರವಸೆ ನೀಡಿದ್ದೆ. ಒಂದು ವೇಳೆ ನಾನು ಸ್ಪರ್ಧಿಸದೇ, ಜೆಡಿಎಸ್‌ ಚಿಹ್ನೆ ಹಾಗೂ ಜೆಡಿಎಸ್‌ ಅಭ್ಯರ್ಥಿಯೇ ಸ್ಪರ್ಧಿಸಿದಲ್ಲಿ ನಮ್ಮ ಕಾರ್ಯಕರ್ತರು ಛಿದ್ರ ಛಿದ್ರವಾಗುವ ಸಾಧ್ಯತೆ ಇತ್ತು. ಕಾಂಗ್ರೆಸ್‌ ಪಕ್ಷಕ್ಕೆ ಭವಿಷ್ಯದಲ್ಲಿ ತೊಂದರೆಯಾಗಬಾರದೆಂದೇ ಪಕ್ಷದ ಉಳಿವಿಗಾಗಿ ಸ್ಪರ್ಧಿಸಿದ್ದೇನೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ.

Advertisement

ಚಿಕ್ಕಮಗಳೂರಿನಲ್ಲಿ ನಡೆದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಮ್ಮಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜೆಡಿಎಸ್‌ ಚಿಹ್ನೆ ಹಾಲು ಜೇನಿನಂತೆ ಮಿಶ್ರಣ ಆಗಿದೆ. ನಾನು ಶಾಸಕನಾಗಿ ಹೇಗೆ ಕೆಲಸ ಮಾಡಿದ್ದೇನೆ ಎಂಬುದು ನಿಮಗೆ ಗೊತ್ತಿದೆ. ನಾನು ಗೆದ್ದು ಬಂದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕನಾಗಿ ದುಡಿಯುವೆ. ಹಾಗಾಗಿ ಚುನಾವಣೆಯ ಅನಂತರ ನಾನು ಯಾವ ಪಕ್ಷಕ್ಕೆ ಸೇರುವೆ ಎನ್ನುವ ಚಿಂತೆ ಶಾಸಕ ರಘುಪತಿ ಭಟ್ಟರಿಗೆ ಬೇಡ ಎಂದು ಹೇಳಿದರು.

ಹೆಚ್ಚಿನ ಪ್ರಮಾಣದಲ್ಲಿ ಕೇಂದ್ರ ಸರಕಾರದ ಅನುದಾನವನ್ನು ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಗೊಳಿಸಲಿದ್ದೇನೆ. ನಾನು ಶಾಸಕನಾಗಿ ಕೆಲಸ ಮಾಡಿಯೂ ಸೋತಿದ್ದೇನೆ. ಪ್ರಾಮಾಣಿಕನಾಗಿ ಕೆಲಸ ಮಾಡಿದ ನನಗೆ ಅದರಿಂದ ಬೇಸರ ಇಲ್ಲ. ಪ್ರಥಮ ಬಾರಿಗೆ ಶಾಸಕನಾದ ಮೇಲೆ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿಯಾದೆ, ಸಹಾಯಕ ಮಂತ್ರಿಯಾದೆ, ಕ್ಯಾಬಿನೆಟ್‌ ಮಂತ್ರಿಯಾದೆ. ರಾಜ್ಯದ ಇತಿಹಾಸದಲ್ಲಿ ಮೂರು ಬಾರಿ ಭಡ್ತಿ ಸಿಕ್ಕಿದ್ದು ನನಗೆ ಮಾತ್ರ ಎಂದರು.

ಟಿಕೆಟ್‌ಗೆ ಯಡಿಯೂರಪ್ಪ, ಓಟಿಗೆ ಮೋದಿ
ಶೋಭಾ ಕರಂದ್ಲಾಜೆಯವರು ಟಿಕೆಟಿಗಾಗಿ ಯಡಿಯೂರಪ್ಪ ಎನ್ನುತ್ತಾರೆ. ಮತಯಾಚಿಸುವಾಗ ಮೋದಿ ಎನ್ನುತ್ತಾರೆ. ಕೆಲಸ ಮಾಡುವ ಸಂಸದರು ಬೇಕೇ ಅಥವಾ ಕೆಲಸ ಮಾಡದವರು ಬೇಕೇ ಎಂಬುದನ್ನು ನಿರ್ಧರಿಸುವ ಕಾಲವಿದು. ಕ್ಷೇತ್ರದ ಜನತೆಗೆ ಅಭಿವೃದ್ಧಿ ಪಡಿಸುವ ಓರ್ವ ಸಂಸದ ಬೇಕು, ಕೆಲಸ ಮಾಡುವ ಪ್ರತಿನಿಧಿ ಬೇಕು ಎಂದು ಅವರು ಹೇಳಿದರು.

ಮರಳಿನ ಸಮಸ್ಯೆಗೆ ಕೇಂದ್ರ ಸರಕಾರವೇ ಕಾರಣ
ಮರಳಿನ ಸಮಸ್ಯೆಗೆ ನಾನು ಕಾರಣ ಎಂಬುದು ಬಿಜೆಪಿಯವರ ಆರೋಪ. ನಾನು ಮಂತ್ರಿಯಾಗಿದ್ದ ಸಂದರ್ಭ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ಮಾಡಬಾರದು ಎಂಬ ತಡೆಯಾಜ್ಞೆ ಇತ್ತು. ಆಗ ನಾನು ಕಾನೂನು ಸಚಿವ ಜಯಚಂದ್ರ ಹಾಗೂ ಸರಕಾರದ ವಕೀಲರಾದ ಅಶೋಕ್‌ ದೇವರಾಜ್‌ ಅವರಲ್ಲಿ ಚರ್ಚಿಸಿ ಶೋಭಾ ಕರಂದ್ಲಾಜೆಯವರಲ್ಲಿ ಕೇಂದ್ರ ಸರಕಾರದಿಂದ ಅಫಿದವಿತ್‌ ಸಲ್ಲಿಸುವಂತೆ ಕೇಳಿಕೊಂಡಿದ್ದೆ. ಆದರೆ ಅವರ ನಿರ್ಲಕ್ಷ್ಯದಿಂದಾಗಿ ಅಧಿಕಾರಿಗಳೇ ಹೋಗಿ ಅಫಿದವಿತ್‌ ಸಲ್ಲಿಸಿದರು. ತದನಂತರ ತಡೆಯಾಜ್ಞೆ ತೆರವುಗೊಳಿಸಿ ಹೊಸ ಪರವಾನಿಗೆ ಕೊಡುವಂತೆ ಆದೇಶಿಸಿ ಉಡುಪಿ ಜಿಲ್ಲೆಯಲ್ಲಿ 9 ಲಕ್ಷ ಟನ್‌ ಮರಳನ್ನು ತೆಗೆಯಲು ನಾನು ಅವಕಾಶ ಮಾಡಿಕೊಟ್ಟೆ. ಅದರಲ್ಲಿ 6 ಲಕ್ಷ ಟನ್‌ ಮರಳು ತೆಗೆಯಲು ಸಾಧ್ಯವಾಯಿತು. ನನ್ನ ಕಾಲದಲ್ಲಿ 28 ಬ್ಲಾಕಿನಲ್ಲಿ 165 ಜನರಿಗೆ ಮರಳು ತೆಗೆಯಲು ಪರವಾನಿಗೆ ಕೊಡುವ ಕೆಲಸವೂ ಆಯಿತು. ಜಿಲ್ಲೆಯ ಮರಳು ಜಿಲ್ಲೆಗೆ ಮಾತ್ರ ಎಂಬ ಕಾನೂನು ಮಾಡಿದೆ ಎಂದು ವಿವರಿಸಿದರು.

Advertisement

ವಿಧಾನಸಭೆಯ ಚುನಾವಣೆಯ ಸಂದರ್ಭ,ನನ್ನನ್ನು ಗೆಲ್ಲಿಸಿದರೆ ಒಂದು ತಿಂಗಳೊಳಗೆ ಮರಳು ಸಿಗುವಂತೆ ಮಾಡುವುದಾಗಿ ರಘುಪತಿ ಭಟ್‌ ಹೇಳಿದ್ದರು. ಜಿಪಿಎಸ್‌ನ್ನು ಪ್ರಮೋದ್‌ ಮಧ್ವರಾಜ್‌ ಮನೆ ಬಾಗಿಲಿಗೆ ಕೊಂಡೊಯ್ದು ಬಿಸಾಡಿ ಎಂದಿದ್ದರು. ನನ್ನ ಕಾಲದಲ್ಲಿ 6 ಲಕ್ಷ ಟನ್‌ಗಳು, ಈಗ 17 ಸಾವಿರ ಟನ್‌. ನನ್ನ ಕಾಲದಲ್ಲಿ 165 ಜನರಿಗೆ ಪರ್ಮಿಟ್‌, ಭಟ್ಟರ ಕಾಲದಲ್ಲಿ 51 ಜನರಿಗೆ ಪರ್ಮಿಟ್‌. ನನ್ನ ಕಾಲದಲ್ಲಿ 28 ಬ್ಲಾಕ್‌ಗಳಲ್ಲಿ ತೆಗೆಯಲು ಪರವಾನಿಗೆ, ಈಗ 7 ಬ್ಲಾಕ್‌ಗಳಿಗೆ ಪರವಾನಿಗೆ. ಇದಕ್ಕೆಲ್ಲ ಕೇಂದ್ರ ಸರಕಾರವೇ ಕಾರಣ.

ಕೇಂದ್ರ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇದಿತ ಎಂದಿದೆ. ಈ ತಿದ್ದುಪಡಿಯನ್ನು ಶೋಭಾ ಕರಂದ್ಲಾಜೆ ಮಾಡಿಸಬೇಕಿತ್ತು. ಅದರೆ ಅವರು ಮಾಡಲಿಲ್ಲ. ಹಾಗಾಗಿ ಇದು ನನ್ನ ವೈಫ‌ಲ್ಯ ಅಲ್ಲ ; ಬದಲಾಗಿ ಶೋಭಾರ ವೈಫ‌ಲ್ಯ ಎಂದು ಹೇಳಿದರು.

ಚುನಾವಣೆ ಬಂದಾಗ ಮೀನುಗಾರರ ನೆನಪಾಯಿತೇ?
ಒಂದು ಬೋಟನ್ನು ಹುಡುಕಲಾಗದವರು ಕಡಲಲ್ಲಿ ಬರುವ ಭಯೋತ್ಪಾದಕರನ್ನು ಹುಡುಕುತ್ತಾರಾ? ಎಂದು ಪ್ರಶ್ನಿಸಿದ ಅವರು, ಮೀನುಗಾರರು ನಾಪತ್ತೆಯಾದ ದಿನ ಒಂದು ನೇವಿ ಶಿಪ್‌ ಕೊಚ್ಚಿಗೆ ಹೋಗುವ ವೇಳೆ ನೀರಿನಿಂದ 18 ಅಡಿ ಆಳ
ದಲ್ಲಿ ಹಾನಿಯಾದ ಸುದ್ದಿ ಇದೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ರವರು ಮೀನುಗಾರರು ನಾಪತ್ತೆಯಾದ ಸಂದರ್ಭ ಅವರ ಮನೆಗೆ ಭೇಟಿ ನೀಡದೇ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸುವಾಗ ಮೀನುಗಾರರ ಮನೆಗೆ ಭೇಟಿ ನೀಡಿರುವುದು ವಿಪರ್ಯಾಸ.

ನಮ್ಮ ಮೀನುಗಾರರ ಬೋಟ್‌ ಅಪಘಾತ ಅಥವಾ ಏನಾಗಿದೆ ಎಂಬ ಸತ್ಯವನ್ನು ಜನರ ಮುಂದಿಡಿ.ಇಲ್ಲವಾದಲ್ಲಿ ಮೀನುಗಾರರನ್ನು ಹುಡುಕಿಕೊಡಿ ಎಂದು ಪ್ರಮೋದ್‌ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next