Advertisement

ಮಂಗನ ಕಾಯಿಲೆ ಬಗ್ಗೆ ಆತಂಕ ಬೇಡ

12:30 AM Jan 12, 2019 | |

ಬೆಂಗಳೂರು: ಮಂಗನ ಕಾಯಿಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಾಗಿ, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ 53ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ
ಶಾಸ್ತ್ರಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಮಂಗನ ಕಾಯಿಲೆ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ.ಶಿವಮೊಗ್ಗ ಸೇರಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕಾಯಿಲೆ ಪತ್ತೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕಾಯಿಲೆಗೆ ತುತ್ತಾಗಿರುವವರಿಗೆ ಸರ್ಕಾರದಿಂದ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುತ್ತಿದೆ. ಹೀಗಾಗಿ, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ವಿಧಾನಸೌಧದಲ್ಲಿ ಹಣ ಪತ್ತೆಯಾದ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ವಿಧಾನಸೌಧದಲ್ಲಿ ಹಣ ಪತ್ತೆ ಪ್ರಕರಣದಲ್ಲಿ ಕೆಲವು ಲೋಪಗಳಾಗಿವೆ. ಆದರೆ,ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಈ ಪ್ರಕರಣದಲ್ಲಿ ಸರ್ಕಾರ ಕಾನೂನುಬದ್ಧವಾಗಿ ಕೆಲಸ ಮಾಡಲಿದೆ.ಇದರಲ್ಲಿ ಯಾವುದೇ ಅನುಮಾನ ಬೇಡ. ಪ್ರಕರಣವನ್ನು ಮುಚ್ಚಿ ಹಾಕುವ ಯಾವುದೇ ಪ್ರಯತ್ನ ನಡೆಯುತ್ತಿಲ್ಲ. ಅದರ ಅಗತ್ಯವೂ ಇಲ್ಲ ಎಂದು ಹೇಳಿದರು.

Advertisement

ಮಾಧ್ಯಮಗಳಿಗೆ ನಿರ್ಬಂಧ ಹೇರಲು ಸಚಿವರು ನ್ಯಾಯಾಲಯದ ಮೊರೆ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ವಿಚಾರ. ಭವಿಷ್ಯದ ದೃಷ್ಟಿಯಿಂದ ಅವರು ಹೋಗಿರಬಹುದು. ಹೀಗಾಗಿ, ನಾನು ಮಾತನಾಡುವುದಿಲ್ಲ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿಗೆ ಡಾ.ಸುಧಾಕರ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ಕೆಲವು ತಾಂತ್ರಿಕ ತೊಂದರೆಗಳಿವೆ. ಅದನ್ನು ನಾನು ಬೀದಿಯಲ್ಲಿ ನಿಂತು ಬಹಿರಂಗಪಡಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಹುದ್ದೆಯ ಘನತೆ ಕುಗ್ಗಿಸಲು ಇಚ್ಛಿಸುವುದಿಲ್ಲ. ಎಲ್ಲಿ, ಯಾವ ನಿರ್ಧಾರ ತೆಗೆದುಕೊಳ್ಳಬೇಕೋ ಆ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ಎಲ್ಲ ವರ್ಗಕ್ಕೂ ನ್ಯಾಯ: ಬಡ್ತಿ ಮೀಸಲಾತಿ ಕುರಿತು ಪ್ರತಿಕ್ರಿಯಿಸಿ, ಬಡ್ತಿ ಮೀಸಲಾತಿಗೆ ಸಂಬಂಧಪಟ್ಟಂತೆ ಪರಿಶಿಷ್ಟ ಜಾತಿ, ಪಂಗಡದ ನೌಕರರು ಹಾಗೂ “ಅಹಿಂಸಾ’ ವರ್ಗದ ನೌಕರರಿಗೆ ಅಸಮಾಧಾನವಿದ್ದು, ಎರಡೂ ವರ್ಗಗಳಿಗೂ ನ್ಯಾಯ ಒದಗಿಸಬೇಕಿದೆ.

ಕಾನೂನಿನ ಮಿತಿಯಲ್ಲಿಯೇ ಸುಗಮವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಎಲ್ಲ ವರ್ಗದವರ ರಕ್ಷಣೆ ಮಾಡಬೇಕು. ಅದರಂತೆ ಕಾನೂನಿನ ಪರಿಮಿತಿಯಲ್ಲಿಯೇ ಕೆಲಸ ಮಾಡಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಬಡ್ತಿ ಮೀಸಲಾತಿ ವಿಚಾರವನ್ನು ಉಪ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿದ್ದು, ಸಚಿವ ಸಂಪುಟ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ, ಪಂಗಡದ ನೌಕರರಲ್ಲಿದ್ದ ಆತಂಕ,ಗೊಂದಲ ನಿವಾರಿಸುವ ಸಲುವಾಗಿ ಹಿಂದಿನ ಸರ್ಕಾರ ಬಡ್ತಿ ಮೀಸಲಾತಿ ಪಾಲನೆಗೆ ಪ್ರತ್ಯೇಕ ಕಾಯ್ದೆಯನ್ನೇ ಜಾರಿಗೊಳಿಸಿದೆ. ಆ ಕಾಯ್ದೆಯ ರಕ್ಷಣೆಯೂ ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ, ಎಲ್ಲ ವರ್ಗಗಳಿಗೂ ನ್ಯಾಯ ಸಿಗುವ ರೀತಿಯಲ್ಲಿ ಕಾನೂನಿನ ವ್ಯಾಪ್ತಿಯಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆದಿವಾಸಿಗಳ ಸಮಸ್ಯೆ ನಿವಾರಣೆಗೆ ಸರ್ಕಾರ ಬದ್ಧ: ಇದಕ್ಕೂ ಮೊದಲು ವಿಧಾನಸೌಧದಲ್ಲಿ ಆದಿವಾಸಿಗಳ ಸಮಸ್ಯೆ ಕುರಿತು ಸಭೆ ನಡೆಸಿದ ಅವರು, ಆದಿವಾಸಿಗಳ ಸಮಸ್ಯೆ ಬಗೆಹರಿಸಲು ಶೀಘ್ರವೇ ಆದಿವಾಸಿಗಳು ವಾಸಿಸುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಲಾಗುವುದು. ಆದಿವಾಸಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸರ್ಕಾರ ಬದಟಛಿವಾಗಿದೆ. ಆದಿವಾಸಿಗಳು ವಾಸಿಸುವ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರಜಿಲ್ಲೆಗಳಿಗೆ ಶೀಘ್ರದಲ್ಲೇ ಭೇಟಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಅರಣ್ಯ ಹಕ್ಕುಗಳ ಕಾಯ್ದೆ-2006 ಅಂಗೀಕಾರವಾಗಿ 12 ವರ್ಷಗಳು ಕಳೆದಿದ್ದರೂ ಬಹುತೇಕ ಆದಿವಾಸಿಗಳಿಗೆ ಭೂಮಿಯ ಹಕ್ಕು ಪಡೆಯುವಲ್ಲಿ ಇರುವ ಗೊಂದಲಗಳ ನಿವಾರಣೆ, ಶಿಕ್ಷಣ, ಉದ್ಯೋಗ ಸೇರಿದಂತೆ ಇತರ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಾಧ್ಯವಾಗಿಲ್ಲ.ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ತೀರ್ಮಾನ ಕೈಗೊಳ್ಳಲು ಕಂದಾಯ, ಅರಣ್ಯ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು. ಈ ವೇಳೆ, ತ್ರಿಪುರ ಸಂಸದರು, ರಾಷ್ಟ್ರೀಯ ಆದಿವಾಸಿ ರಾಷ್ಟ್ರೀಯ ಮಂಚ್‌ನ ಸಂಚಾಲಕ ಜಿತೇಂದ್ರ ಚೌಧರಿ, ಎಸ್‌.ವೈ.ಗುರುಶಾಂತ್‌, ವೈ.ಕೆ.ಗಣೇಶ್‌ ಉಪಸ್ಥಿತರಿದ್ದರು.

ನಿಖೀಲ್‌ ಸ್ಪರ್ಧೆಗೆ ಒತ್ತಡವಿದೆ
ನಿಖೀಲ್‌ ಕುಮಾರಸ್ವಾಮಿ, ಮಂಡ್ಯ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರ ಒತ್ತಡ ಹೇರುತ್ತಿರುವುದು ನಿಜ. ಆದರೆ, ನಿಖೀಲ್‌ ಸ್ಪರ್ಧೆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳಲಿದಾರೆ ಎಂದರು. 

ಆ ಮೂಲಕ ತಮ್ಮ ಪುತ್ರನ ಚುನಾವಣಾ ರಾಜಕೀಯ ಪ್ರವೇಶಕ್ಕೆ ಪರೋಕ್ಷ ಸಮ್ಮತಿ ಸೂಚಿಸಿದರು. ಈ ಹಿಂದೆಯೇ ರಾಮನಗರ ಉಪ ಚುನಾವಣೆಗೆ ನಿಖೀಲ್‌ ಸ್ಪರ್ಧೆಗೆ ಒತ್ತಡ ಇತ್ತಾದರೂ ಮಂಡ್ಯ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಎರಡು ದಿನ ಗಳ ಹಿಂದೆಯಷ್ಟೇ ಮಂಡ್ಯ ಜಿಲ್ಲಾ ಜೆಡಿಎಸ್‌ ಅಧ್ಯಕ್ಷರ ನೇತೃತ್ವದ ನಿಯೋಗ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿಕುಮಾರಸ್ವಾಮಿಯವರನ್ನು ಭೇಟಿ ಮಾಡಿ, ಮಂಡ್ಯ ಕ್ಷೇತ್ರದಿಂದ ನಿಖೀಲ್‌ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವಂತೆ ಒತ್ತಾಯ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next