ಮಧುಗಿರಿ: ಜಮೀನು ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಬೇಸಾಯ ಮಾಡುವ ರೈತರು ಹಾಗೂ ಸಾರ್ವಜನಿಕರು ಒಂಟಿಯಾಗಿ ಓಡಾಡಬೇಡಿ ಎಂದು ತಹಶೀಲ್ದಾರ್ ಡಾ.ವಿಶ್ವನಾಥ್ ಹೇಳಿದರು. ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಚಿರತೆ ದಾಳಿ ಹೆಚ್ಚಾಗುತ್ತಿದ್ದು, ಜನರು ಸಂಜೆ ನಂತರ ಹೊರಗಡೆ ಬರಬಾರದು. ಹೊಲ ಗದ್ದೆಗಳಿಗೆ ಒಂಟಿಯಾಗಿ ತೆರಳಬಾರದು.
ನಾಲ್ಕೈದು ಮಂದಿ ಒಟ್ಟಾಗಿ ವ್ಯವಸಾಯ ಕಾರ್ಯ ಮಾಡಬೇಕು. ನಾಯಿ ಬೇಟೆಯಾಡಲು ಮನೆಯಂಗಳಕ್ಕೆ ಬರುವುದರಿಂದ ಹೆಚ್ಚಿನ ಪ್ರಖರತೆ ಇರುವ ವಿದ್ಯುತ್ ದೀಪ ಅಳವಡಿಸಬೇಕು. ಸಾಕು ಪ್ರಾಣಿಗಳನ್ನು ರಾತ್ರಿ ವೇಳೆ ಭದ್ರವಾಗಿ ಕೂಡಿ ಹಾಕಬೇಕು. ಮಾಂಸ ತ್ಯಾಜ್ಯ ಮಣ್ಣಿನಲ್ಲಿ ಹೂತು ಹಾಕಬೇಕು. ಮಕ್ಕಳು ಒಂಟಿಯಾಗಿ ಆಡುವುದು, ಜಮೀನಿಗೆ ಹೋಗಬಾರದು. ಪೊದೆಗಳಿದ್ದಲ್ಲಿ ಸ್ವತ್ಛಗೊಳಿಸಬೇಕು.
ಈ ಬಗ್ಗೆ ಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಲು ಶಿಕ್ಷಣ ಇಲಾಖೆಗೆ ಸೂಚಿಸಿದರು. ಬಯಲಲ್ಲಿ ಜಾನುವಾರು ಮೇಯಿಸುವಾಗ ರೈತರು ಗುಂಪಾಗಿರಬೇಕು. ರಕ್ಷಣೆಗೆ ದೊಣ್ಣೆ, ಕೊಡಲಿಯಂತಹ ಅಸ್ತ್ರ ಇಟ್ಟುಕೊಂಡಿರಬೇಕು ಎಂದು ಸಲಹೆ ನೀಡಿದರು. ತಾಲೂಕು ಆಡಳಿತ ಚಿರತೆ ಜಾಡಿನ ಜಾಗ ಗುರುತಿಸಿದ್ದು, ಅವುಗಳಲ್ಲಿ ಕಸಬಾ ಹೋಬಳಿಯ ಅಗಸರಹೊಳೆ, ಕಮ್ಮನಕೋಟೆ, ಆವೇಕಟ್ಟೆ ಗ್ರಾಮಗಳು ಸೇರಿವೆ.
ದೊಡ್ಡೇರಿ ಹೋಬಳಿಯ ತಿಮ್ಮಲಾಪುರ ಅರಣ್ಯಪ್ರದೇಶ, ಮಿಡಿಗೇಶಿ ಹೋಬಳಿಯ ಚಿನೆ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಹಾಗೂ ಕರಡಿ ಸಂಚಾರವಿದೆ. ಕಾಡುಪ್ರಾಣಿಗಳು ತುಮಕೂರು-ಮಧುಗಿರಿಯ ಕೆಶಿಫ್ ರಸ್ತೆ ಹಾಗೂ ಗೌರಿಬಿದನೂರು-ಮಧುಗಿರಿ ರಸ್ತೆಗಳಲ್ಲಿ ಹೆಚ್ಚಾಗಿ ಕಾಣಿಸಿದ್ದು, ಸೂಕ್ಷ್ಮ ತಿರುವುಗಳಲ್ಲಿ ಸಿ.ಸಿ.ಟಿವಿ ಅಳವಡಿಸಿ ಚಲನವಲನ ಪತ್ತೆ ಹಚ್ಚಬೇಕು.
ಎಲ್ಲಾದರೂ ಮೃಗಗಳು ಕಂಡು ಬಂದರೆ ಕೂಡಲೇ ತಿಳಿಸಲು ಸಹಾಯವಾಣಿ ತೆರೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ವಾಸುದೇವಮೂರ್ತಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ, ಪಿಎಸೈ, ಕಾಂತರಾಜು, ತಾ.ಪಂ. ಮಂಜುಳಾ, ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ್, ಶಿಕ್ಷಣ ಇಲಾಖೆಯ ಇಸಿಓ ಪ್ರಾಣೇಶ್, ಹಾಗೂ ಇತರೆ ಅಧಿಕಾರಿಗಳು ಇದ್ದರು.
ಕಾಡು ನಾಶ ಮಾಡಿದ್ದಕ್ಕೆ ಪ್ರಾಣಿಗಳಿಂದ ಅಪಾಯ ಎದುರಿಸುವ ನ್ನಿವೇಶ ಸೃಷ್ಟಿಯಾಗಿದೆ ನೀರು-ಆಹಾರ ಅರಸಿ ನಾಡಿಗೆ ಬರುತ್ತಿದ್ದು, ಇದರ ತಡೆಗೆ ತಾಲೂಕು ಆಡಳಿತ ಎದುರಿಸಲು ಸಿದ್ಧವಾಗಿದೆ. ಜನತೆ ಸರ್ಕಾರದ ನಿಯಮ ಕಡ್ಡಾಯವಾಗಿ ಪಾಲಿಸಬೇಕು.
-ಡಾ.ವಿಶ್ವನಾಥ್, ತಹಶೀಲ್ದಾರ್, ಮಧುಗಿರಿ
ಹಗಲಲ್ಲಿ ವಿದ್ಯುತ್ ನೀಡಬೇಕು. ಇದರಿಂದ ರಾತ್ರಿ ವೇಳೆ ಬೇಸಾಯ ಮಾಡುವುದು ತಪ್ಪಿ ರೈತರ ಪ್ರಾಣ ಉಳಿಯುತ್ತದೆ.
-ಶಂಕರಪ್ಪ, ರೈತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ