ದಾವಣಗೆರೆ: ಕೇರಂ ಆಟದಿಂದ ಮನಸ್ಸು ಪ್ರಪುಲ್ಲಗೊಳ್ಳಲಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಶನಿವಾರ ದಾವಣಗೆರೆ ಜಿಲ್ಲಾ ಕೇರಂ ಅಸೋಸಿಯೇಷನ್ ಹಾಗೂ ಫ್ರೆಂಡ್ಸ್ ಕೇರಂ ಗ್ರೂಪ್ ಸಂಯುಕ್ತಾಶ್ರಯದಲ್ಲಿ ನಗರದ ಗುರುಭವನದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಕೇರಂ ರ್‍ಯಾಂಕಿಂಗ್ ಪಂದ್ಯಾವಳಿಯಲ್ಲಿ ಮಾತನಾಡಿದರು.
ಮನಸ್ಸು ಪ್ರಪುಲ್ಲಗೊಳಿಸುವ ಕ್ರೀಡೆಗಳು ದಾವಣಗೆರೆಯಲ್ಲಿ ಹೆಚ್ಚಾಗಿ ನಡೆಯುಲಿ ಎಂದು ಆಶಿಸಿದರು. ಕೇರಂ ಉತ್ತಮ ಆಟ. ಖುಷಿಯಿಂದ ಆಡಬೇಕು. ಯಾವುದೇ ಕಾರಣಕ್ಕೂ ಹಣ ಕಟ್ಟಿ ಆಡಬಾರದು. ತಾವು ಯುವಕರಾಗಿದ್ದಾಗ ಕೇರಂ ಆಡುತ್ತಿದ್ದೆ. ನನ್ನ ಜತೆಗೆ ಇಬ್ಬರು ಚಾಂಪಿಯನ್ ಆಟಗಾರರಿದ್ದರು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಾತನಾಡಿ, ನಿಜಕ್ಕೂ ಕೇರಂ ಒಂದು ಅತ್ಯುತ್ತಮ ಆಟ. 20 ವರ್ಷಗಳ ನಂತರ ಈ ಪಂದ್ಯಾವಳಿ ಮೂಲಕ ತಾವು ಕೇರಂ ಆಡುವಂತಾಯಿತು ಎಂದರು.
ಕೇರಂ ರಾಷ್ಟ್ರೀಯ ಕ್ರೀಡಾಪಟುಗಳಾದ ರಾಮಕೃಷ್ಣಪ್ಪ, ಶಿವಾಜಿರಾವ್, ಬಸವರಾಜಪ್ಪ ಹಾಗೂ ಎಸ್.ಎಂ.ಬಾಷ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮೇಯರ್ ಅನಿತಾಬಾಯಿ, ಮಾಜಿ ಮೇಯರ್ ಅಶ್ವಿನಿ ಪ್ರಶಾಂತ್, ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ, ಮುಖಂಡರಾದ ಅಜ್ಜಪ್ಪ ಪವಾರ್, ಕೇರಂ ಗಣೇಶ್ ಇತರರಿದ್ದರು. ಎ.ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.