Advertisement

ಆಮಿಷಕ್ಕೆ ಒಳಗಾಗಿ ಮತಮಾರಿಕೊಳ್ಳದಿರಿ: ದರ್ಶನ್‌

09:04 PM Apr 10, 2019 | Lakshmi GovindaRaju |

ಕೆ.ಆರ್‌.ನಗರ: ಮತದಾರರು ತಮ್ಮ ಪವಿತ್ರವಾದ ಮತವನ್ನು ಹಣ ಮತ್ತು ಆಮಿಷಕ್ಕೆ ಮಾರಿಕೊಳ್ಳದೆ ಅರ್ಹರಿಗೆ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಕಾಪಾಡಬೇಕು ಎಂದು ಚಲನಚಿತ್ರ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮನವಿ ಮಾಡಿದರು.

Advertisement

ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಪರವಾಗಿ ರೋಡ್‌ ಶೋ ನಡೆಸಿ ಮತ ಯಾಚನೆ ಮಾಡಿ ಮಾತನಾಡಿದರು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ವಾಭಿಮಾನದ ಚುನಾವಣೆ ನಡೆಯುತ್ತಿದ್ದು, ಮತದಾರರು ತಮ್ಮ ಬೆಂಬಲವನ್ನು ದಿವಂಗತ ಅಂಬರೀಶ್‌ ಅವರ ಪತ್ನಿ ಸುಮಲತಾ ಅವರಿಗೆ ನೀಡುವ ಮೂಲಕ ಸ್ವಾಭಿಮಾನಕ್ಕೆ ಜಯ ದೊರಕಿಸಿಕೊಡಿ ಎಂದರು.

ರೆಬಲ್‌ ಸ್ಟಾರ್‌ ಮಾದರಿ: ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿಗೆ ತಮ್ಮ ಜೀವನವನ್ನು ಮುಡುಪಾಗಿಟ್ಟ ಕಲಿಯುಗದ ಕರ್ಣ ರೆಬಲ್‌ಸ್ಟಾರ್‌ ಅಂಬರೀಶ್‌ ಅವರ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ಈ ಚುನಾವಣೆಯಲ್ಲಿ ಸುಮಲತಾ ಜಯಗಳಿಸಬೇಕು ಎಂದ ಅವರು ಸದಾ ಜನಪರ ಮತ್ತು ಬಡವರ ಪರವಾದ ಕೆಲಸ ಮಾಡುತ್ತಿದ್ದ ರೆಬಲ್‌ಸ್ಟಾರ್‌ ನಮಗೆ ಮಾದರಿ ಎಂದು ಕೊಂಡಾಡಿದರು.

ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧೆ ಮಾಡಿರುವ ಅಮ್ಮ ಸುಮಲತಾ ಅವರ ಕ್ರಮ ಸಂಖ್ಯೆ 20ಕ್ಕೆ ಮತ ನೀಡುವ ಮೂಲಕ ನಿಮ್ಮ ಸೇವೆ ಮಾಡಲು ಅವರಿಗೆ ಅವಕಾಶ ಕಲ್ಪಿಸುವುದರ ಜತೆಗೆ ನಮ್ಮ ಮನಯನ್ನು ಪರಿಗಣಿಸಿ ಎಂದು ದರ್ಶನ್‌ ಪ್ರಚಾರ ಮಾಡಿದರು. ಅವರಿವರ ಮಾತಿಗೆ ಕಿವಿಗೊಡದೆ ಮತದಾರು ಬೆಂಬಲಿಸಬೇಕು. ನಮ್ಮ ಉದ್ಧೇಶ ಕ್ಷೇತ್ರದ ಜನರ ಸೇವೆ ಮತ್ತು ಸ್ವಾಭಿಮಾನಕ್ಕೆ ಗೆಲುವು ತಂದು ಕೊಡುವುದಾಗಿದ್ದು, ಇದಕ್ಕೆ ಎಲ್ಲರ ಹರಕೆ ಮತ್ತು ಹಾರೈಕೆಬೇಕು ಎಂದು ಹೇಳಿದರು.

ಅಭಿಮಾನಿಗಳ ಸ್ವಾಗತ-ತಮ್ಮ ನೆಚ್ಚಿನ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಗ್ರಾಮಗಳಿಗೆ ಭೇಟಿ ನೀಡಿ ಮತ ಯಾಚನೆ ಮಾಡುತ್ತಿದ್ದ ಸಂದರ್ಭದಲ್ಲಿ ನೂರಾರು ಮಂದಿ ಅಭಿಮಾನಿಗಳು ಅವರನ್ನು ನೋಡಲು ಮುಗಿ ಬಿದ್ದರಲ್ಲದೆ ದರ್ಶನ್‌ ಅವರಿಗೆ ಪುಷ್ಪ ವೃಷ್ಟಿಗೈದು ಅದ್ದೂರಿ ಸ್ವಾಗತ ಕೋರಿದರು.

Advertisement

ಮರದಡಿ ಊಟ: ಚುನಾವಣಾ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಲಕ್ಷಿಪುರ ಗ್ರಾಮದ ಜಮೀನಿನ ಆಲದ ಮರದ ಕೆಳಗೆ ತಮ್ಮ ಅಭಿಮಾನಿಗಳು ಮತ್ತು ಸುಮಲತಾ ಅಂಬರೀಶ್‌ ಬೆಂಬಲಿಗರೊಂದಿಗೆ ನಟ ದರ್ಶನ್‌ ಊಟ ಮಾಡಿ ಸರಳತೆ ಮೆರೆದರಲ್ಲದೆ ಜತೆಯಲ್ಲಿದ್ದ ಮಾಧ್ಯಮದವರು ಮತ್ತು ಕಾರ್ಯಕರ್ತರಿಗೆ ಸ್ವತಃ ಊಟ ಬಡಿಸಿದರು.

ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಮಾಜಿ ಉಪಾಧ್ಯಕ್ಷ ಉಮೇಶ್‌, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಎಸ್‌.ಮಹದೇವ್‌, ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಬೋಜರಾಜು, ಉದಯಶಂಕರ್‌, ವಕ್ತಾರ ಸೈಯದ್‌ ಜಾಬೀರ್‌, ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕ ಕೆ.ಎಸ್‌.ಮಹೇಶ್‌, ಕೆ.ಎನ್‌.ಪ್ರಸನ್ನಕುಮಾರ್‌, ಮುಖಂಡರಾದ ದಿಡ್ಡಹಳ್ಳಿ ಬಸವರಾಜು, ಮಂಚನಹಳ್ಳಿ ಅನಂತು, ತಂದ್ರೆ ದಿಲೀಪ್‌, ದರ್ಶನ್‌ಗೌಡ ಸೇರಿದಂತೆ ಅಭಿಮಾನಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಹಾಜರಿದ್ದರು.

ವಿವಿಧೆಡೆ ಪ್ರಚಾರ: ತಾಲೂಕಿನ ಹೊಸೂರು ಗ್ರಾಮದಿಂದ ಚುನಾವಣಾ ಪ್ರಚಾರ ಆರಂಭಿಸಿ ಆನಂತರ ಮಾಯಗೌಡನಹಳ್ಳಿ, ಹಾಡ್ಯಕ್ರಾಸ್‌, ಕೋಳೂರು ಗೇಟ್‌, ಚಿಕ್ಕಹನಸೋಗೆ, ಚನ್ನಂಗೆರೆ, ಹನಸೋಗೆ, ಪಶುಪತಿ ಕೊಪ್ಪಲು, ಪಶುಪತಿ, ಮಾವನೂರು, ಕೆಡಗ, ಲಕ್ಷಿಪುರ, ಚಿಕ್ಕನಾಯಕನಹಳ್ಳಿ, ಹೊನ್ನೇನಹಳ್ಳಿ,

ಗಾಯನಹಳ್ಳಿ ಗುಮ್ಮನಹಳ್ಳಿ, ಹರದನಹಳ್ಳಿ, ಶೀಗವಾಳು, ಕಾಳಮ್ಮನಕೊಪ್ಪಲು, ಮನುಗನಹಳ್ಳಿ, ಬೆಟ್ಟಹಳ್ಳಿ, ಕುಲುಮೆ ಹೊಸೂರು, ಮುಂಡೂರು, ಸಾಲಿಗ್ರಾಮ, ಅಂಕನಹಳ್ಳಿ ಗೇಟ್‌, ನಾಟನಹಳ್ಳಿ, ಮಿರ್ಲೆ, ಗಂಧನಹಳ್ಳಿ, ಭೇರ್ಯ, ಹೊಸ ಅಗ್ರಹಾರ, ಚಿಕ್ಕವಡ್ಡರಗುಡಿ, ಅರ್ಜುನಹಳ್ಳಿ, ಮಂಚನಹಳ್ಳಿ ಮತ್ತು ಹಂಪಾಪುರ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next