Advertisement

ನನಗೆ ಮತ ಕೊಡ್ಬೇಡಿ ಎನ್ನಲು ನೀವ್ಯಾರು: ವಿಶ್ವನಾಥ್‌  

12:30 PM Oct 06, 2017 | |

ಮೈಸೂರು: ಹುಣಸೂರಿನ ಕುರುಬರ್ಯಾರೂ ವಿಶ್ವನಾಥ್‌ಗೆ ಮತ ಹಾಕಬೇಡಿ ಎನ್ನಲು ನೀವೇನು ಕುರುಬ ಸಮಾಜದ ಮಾಲಿಕರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಸಂಸದ ಹಾಗೂ ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ್‌ ಕಿಡಿಕಾರಿದ್ದಾರೆ.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನತಂತ್ರ ವ್ಯವಸ್ಥೆಯಲ್ಲಿ ನಾವು ಪ್ರಜೆಗಳ ಸೇವಕರೇ ಹೊರತು ಮಾಲಿಕರಲ್ಲ. ಮುಖ್ಯಮಂತ್ರಿಯಾಗಿ ಉನ್ನತ ಸ್ಥಾನದಲ್ಲಿರುವ ನಿಮ್ಮ ಈ ಹೇಳಿಕೆ ಪ್ರಜಾತಂತ್ರ ವ್ಯವಸ್ಥೆಗೆ ಮಾಡಿದ ಅವಮಾನ ಎಂದು ದೂರಿದರು.

ಸಂವಿಧಾನ ಬದ್ಧವಾಗಿ ಚುನಾವಣೆಗೆ ನಿಲ್ಲಲು ತನಗೆ ಎಲ್ಲಾ ಅರ್ಹತೆ ಇದೆ. ವಿಶ್ವನಾಥ್‌ಗೆ ಮತ ಹಾಕಬೇಡಿ ಎನ್ನಲು ನಿಮ್ಮ ಹತ್ತಿರ ಏನು ಆಧಾರ ಇದೆ? ಜನತೆಗೆ, ಕುರುಬ ಸಮಾಜಕ್ಕೆ ಅದನ್ನು ತಿಳಿಸಬೇಕು ಎಂದು ಆಗ್ರಹಿಸಿದರು. ಖಾಸಗಿಯಾಗಿ ನಿಮ್ಮ ಆಪ್ತರ ಬಳಿ ತನ್ನನ್ನು ಅವನೊಬ್ಬ ಹುಚ್ಚ ಅಂದಿದ್ದೀರಿ, ಆ ರೀತಿ ಲಘುವಾಗಿ ಮಾತನಾಡಬೇಡಿ, ತಾನೇನು ಹುಚ್ಚನೇ ಎಂದು ಕಿಡಿಕಾರಿದರು.

ಕುರುಬ ಸಮಾಜಕ್ಕೆ ನಿಮ್ಮ ಕೊಡುಗೆ ಏನೇನೂ ಇಲ್ಲ. ನಿಮ್ಮಂತೆ ಮುಖ್ಯಮಂತ್ರಿ ಆಗದಿರಬಹುದು. ಶಾಸಕ, ಮಂತ್ರಿ, ಸಂಸದನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕಾಗಿನೆಲೆ ಮಹಾಪೀಠ ಕಟ್ಟಿದವನು ತಾನು, ಕಾಗಿನೆಲೆ ಮಾತ್ರವಲ್ಲ, ಮೈಸೂರು, ಬೆಂಗಳೂರು, ತಿಂಥಿಣಿಯಲ್ಲೂ ಮಠ ಕಟ್ಟಿದ್ದೇನೆ, ಇದ್ಯಾವುದಕ್ಕೂ ನೀವು ನಯಾ ಪೈಸೆ ಕೊಟ್ಟಿಲ್ಲ. ನೀವೇನಾದ್ರು 5ರೂ. ದೇಣಿಗೆ ಕೊಟ್ಟಿದ್ದರೆ ರಸೀದಿ ತೋರಿಸಿ ಎಂದು ಸವಾಲು ಹಾಕಿದರು.

1983ರಲ್ಲಿ ನಿಮ್ಮನ್ನು ಕರೆತಂದು ಚುನಾವಣೆಗೆ ನಿಲ್ಲಿಸಿದ ಚಾಮುಂಡೇಶ್ವರಿ ಕ್ಷೇತ್ರದ ಒಕ್ಕಲಿಗ ಮುಖಂಡರೂ ನಿಮಗೆ ನೆನಪಿಲ್ಲ, ಜೆಡಿಎಸ್‌ ಸರ್ಕಾರದಲ್ಲಿ ನಿಮಗೆ ಒಳ್ಳೆಯ ಖಾತೆಗಳನ್ನು ನೀಡಿ ನಿಮ್ಮನ್ನು ಜನ ಗುರುತಿಸುವಂತೆ ಮಾಡಿದ ಎಚ್‌.ಡಿ.ದೇವೇಗೌಡರೂ ನಿಮಗೆ ನೆನಪಿಲ್ಲ. ಜೆಡಿಎಸ್‌ನಿಂದ ಹೊರಹಾಕಿಸಿಕೊಂಡು ನೀವು ಕಷ್ಟದಲ್ಲಿದ್ದಾಗ ನಿಮಗೆ ಸಹಾಯ ಮಾಡಿದ ಎಸ್‌.ಎಂ.ಕೃಷ್ಣ ಅವರಿಂದ ಹಿಡಿದು ಜನಾರ್ದನಪೂಜಾರಿವರೆಗೆ ನಿಮಗ್ಯಾರೂ ನೆನಪಿಲ್ಲ. ನಿಮ್ಮ ಗನ್‌ಮ್ಯಾನ್‌ ರೀತಿ ಎಲ್ಲರ ಮನೆಗೆ ಹೂಗುತ್ಛ ಹಿಡಿದುಕೊಂಡ ಬಂದ ನಾನೂ ನಿಮಗೆ ನೆನಪಿಲ್ಲದಂತಾಗಿದೆ ಎಂದು ಕುಟುಕಿದರು.

Advertisement

ಹಣಕಾಸಿನ ದಂಧೆ ಮಾಡುವ ಪಿರಾನ್‌ ನನಗೆ ಕಾಂಗ್ರೆಸ್‌ ಸೇರಲು ಸಹಾಯ ಮಾಡಿದ ಎಂದು ಹೇಳಿಕೊಳ್ಳುತ್ತೀರಿ, ನಿಮ್ಮ ಜಾತಕದಲ್ಲೇ ಸಹಾಯ ಮಾಡಿದವರನ್ನು ಸಾಯಿಸು ಎಂದಿರಬಹುದೇನೋ. ಹಣ, ಅಧಿಕಾರ, ದರ್ಪ ಎಲ್ಲವೂ ಇದೆ ನಿಮ್ಮ ಹತ್ತಿರ, ಆದರೆ ಕಾಮನ್‌ಸೆನ್ಸ್‌ ಇಲ್ಲ ಎಂದು ಲೇವಡಿ ಮಾಡಿದರು. ಸಿದ್ದರಾಮಯ್ಯರ ಹೇಳಿಕೆಯಿಂದ ಮನಸ್ಸಿಗೆ ಬಹಳ ನೋವಾಗಿದೆ. ಸಮಾಜ ಮತ್ತು ಸರ್ಕಾರ ಎರಡಕ್ಕೂ ದುಡಿದಿದ್ದೇನೆ. ತನಗೆ ಮತ ನೀಡಬೇಡಿ ಎನ್ನಲು ನೀವ್ಯಾರು. ಎಲ್ಲಾ ಜಾತಿಗಳನ್ನೂ ಒಡೆದು ಆಯ್ತು ಈಗ ಕುರುಬ ಸಮಾಜವನ್ನು ಒಡೆಯಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು.

ತನ್ನ ರಾಜಕೀಯ ಗುರು ದೇವರಾಜ ಅರಸರ ಕರ್ಮಭೂಮಿ ಹುಣಸೂರಿನಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಅಲ್ಲಿನ ಮತದಾರರು ತನ್ನನ್ನು ಗೆಲ್ಲಿಸಬೇಕೋ? ಸೋಲಿಸಬೇಕೋ ಎಂದು ತೀರ್ಮಾನಿಸುತ್ತಾರೆ. ಸೋಲಿಸಿ ಎನ್ನಲು ನೀವ್ಯಾರು ಎಂದರು. ಜಿಪಂ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್‌.ಚನ್ನಬಸಪ್ಪ ಮತ್ತಿತರರಿದ್ದರು.

ಸಿದ್ದರಾಮಯ್ಯ ಕಿಕ್‌ಬ್ಯಾಕ್‌ ಸಿಎಂ: ಮೈಸೂರು: ರಾಜ್ಯದಲ್ಲಿ ಅತೀ ಹೆಚ್ಚು ಕಿಕ್‌ಬ್ಯಾಕ್‌ ಪಡೆದ ಮುಖ್ಯಮಂತ್ರಿ ಏನಾದರೂ ಇದ್ದರೆ ಅದು ಸಿದ್ದರಾಮಯ್ಯ ಎಂದು ಮಾಜಿ ಸಂಸದ ಎಚ್‌.ವಿಶ್ವನಾಥ್‌ ಆರೋಪಿಸಿದರು. ಅತೀ ಹೆಚ್ಚು ಅನುದಾನ ಕೊಟ್ಟಿದ್ದೇನೆ ಎನ್ನುವ ಅವರ ಮಾತಿನಲ್ಲೇ ಕಿಕ್‌ಬ್ಯಾಕ್‌ ವಾಸನೆ ಇದೆ. ಇದನ್ನು ಸಂಸದೆ ಶೋಭಾ ಕರಂದ್ಲಾಜೆ ಅವರೇ ಬಹಿರಂಗಪಡಿಸಿದ್ದಾರೆ ಎಂದರು.

ನಂಜನಗೂಡು, ಗುಂಡ್ಲುಪೇಟೆಗಳಲ್ಲಿ ಹಣ ಕೊಟ್ಟು ಗೆದ್ದಂತೆ ಕಾಂಗ್ರೆಸ್‌ ಹೈಕಮಾಂಡ್‌ಗೂ ಹಣ ಕೊಟ್ಟು ಮತ್ತೆ ಮುಖ್ಯಮಂತ್ರಿ ಆಗಬಹುದು ಎಂದು ಕೊಂಡಿದ್ದಾರೆ. ಉಪ ಚುನಾವಣೆಯಂತೆ ನೀವು ಸಾಮಾನ್ಯ ಚುನಾವಣೆಯಲ್ಲಿ ಹಣ ಕೊಟ್ಟು ಗೆಲ್ಲಲಾಗಲ್ಲ ಎಂದು ಹೇಳಿದರು.

ಜಿ.ಟಿ.ದೇವೇಗೌಡರನ್ನು ಹೆದರಿಸಲು ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಓಡಾಡುತ್ತಿದ್ದಾರೆ. ಆದರೆ, ಕಡೇ ಘಳಿಗೆಯಲ್ಲಿ ಹೈಕಮಾಂಡ್‌ ಸೂಚನೆ ಇರುವುದರಿಂದ ಪಕ್ಷ ಅಧಿಕಾರಕ್ಕೆ ತರಲು ರಾಜ್ಯ ಸುತ್ತಬೇಕಿದೆ. ಹೀಗಾಗಿ ಚುನಾವಣೆಗೆ ನಿಲ್ಲಲ್ಲ ಎಂದು ಸಬೂಬು ಹೇಳಿ ಹಿಂದೆ ಸರಿಯುತ್ತಾರೆಂದರು.

Advertisement

Udayavani is now on Telegram. Click here to join our channel and stay updated with the latest news.

Next