ವಿಜಯಪುರ: ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ರಾಜಕೀಯ ಸ್ವಾರ್ಥಕ್ಕಾಗಿ ಕೋವಿಡ್ ಕರ್ಫ್ಯೂ ದುರ್ಬಳಕೆ ಆಗದಿರಲಿ. ರೋಗ ನಿಯಂತ್ರಣಕ್ಕೆ ಬಂದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಕರ್ಫ್ಯೂ ಹಿಂಪಡೆಯಬೇಕು ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ ಜೂ.7ಕ್ಕೆ ಕೊನೆಗೊಳ್ಳಲಿದೆ. ನಂತರ ಕರ್ಫ್ಯೂ ವಿಸ್ತರಣೆ ಅಗತ್ಯವೇ ಎಂಬ ಚರ್ಚೆಯೇ ಅಪ್ರಸ್ತುತ. ಸೋಂಕು ಹರಡುವಿಕೆ ನಿಗ್ರಹಕ್ಕೆ ಬಂದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಕರ್ಫ್ಯೂ ಮುಂದುವರೆಸದೇ ಮುಕ್ತಗೊಳಿಸಬೇಕು ಎಂದು ಶಾಸಕ ಯತ್ನಾಳ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ಹರಡುವಿಕೆ ತಗ್ಗಿದ್ದು, ರೋಗ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ ರಾಜ್ಯಾದ್ಯಂತ ಮೇ 7 ರ ಬಳಿಕವೂ ಕರ್ಫ್ಯೂ ಮುಂದುವರಿಕೆ ಬೇಡ. ರೋಗ ನಿಯಂತ್ರಣ ಆಗಿರುವ ಜಿಲ್ಲೆಗಳನ್ನು ಕರ್ಫ್ಯೂ ಮುಕ್ತ ಮಾಡಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ:ಸಂಘಗಳಲ್ಲಿ ಪಡೆದ ಸಾಲದ ಪೂರ್ತಿಬಾಕಿ ಕಟ್ಟಬೇಕು ಎಂಬ ಆದೇಶ ಹಿಂಪಡೆಯುವಂತೆ ಸಿದ್ದರಾಮಯ್ಯ ಆಗ್ರಹ
ಕೋವಿಡ್ ಕರ್ಫ್ಯೂ ಕಾರಣದಿಂದ ಸಾಮಾನ್ಯ, ಬಡ-ಕೂಲಿ ಕಾರ್ಮಿಕರು ಕೆಲಸ ಇಲ್ಲದೇ ಜೀವನ ನಿರ್ಹಣೆಗೆ ಪರದಾಡುತ್ತಿದ್ದಾರೆ. ಹೀಗಾಗಿ ಉದ್ಯೋಗ ಸೃಷ್ಟಿಗೂ ಸರ್ಕಾರ ಪರ್ಯಾಯ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಆರ್ ಎಸ್ಎಸ್ ವರಿಷ್ಠರಿಂದ ತಮಗೆ ಕರೆ ಬಂದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಈ ಕುರಿತು ಕಳೆದ ಹಲವು ದಿನಗಳಿಂದ ನಡೆಯತ್ತಿರುವ ಚರ್ಚೆಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.