Advertisement

ವಲಸೆ ಕಾರ್ಮಿಕರ ಮಕ್ಕಳನ್ನು ಕೆಲಸಕ್ಕೆ ಬಳಸದಿರಿ: ಜಿಲ್ಲಾಧಿಕಾರಿ

11:57 PM May 29, 2019 | Sriram |

ಮಹಾನಗರ: ನಗರದಲ್ಲಿ ಅಪಾರ್ಟ್‌ಮೆಂಟ್‌ಗಳು ಅಧಿಕ ಸಂಖ್ಯೆಯಲ್ಲಿದ್ದು ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಅವರ ಮಕ್ಕಳನ್ನು ಕೆಲಸಕ್ಕೆ ಬಳಸದಂತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕೆಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಮಿಕ ಇಲಾಖೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ಕೆಲಸ ಮಾಡುವ ಕಾರ್ಮಿಕರು ಮತ್ತು ಮಾಲಕರ ಮೇಲೆ ಹೆಚ್ಚಿನ ಗಮನಹರಿಸಿ. ಹೆಚ್ಚಾಗಿ ಮನೆಕೆಲಸಕ್ಕೆ, ಅಪಾರ್ಟ್‌ಮೆಂಟ್‌ಗಳಲ್ಲಿ ಕೆಲಸ ಮಾಡಲು ಕಾರ್ಮಿಕರ ಮಕ್ಕಳನ್ನು ಬಳಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಅಂತಹ ಬಾಲಕಾರ್ಮಿಕರು ಕಂಡುಬಂದಲ್ಲಿ ಮಾಲಕರ ವಿರುದ್ಧ ಶಿಸ್ತು ಕ್ರಮ ತಗೆದುಕೊಳ್ಳಿ ಎಂದರು.

ಕೈಗಾರಿಕಾ ಪ್ರದೇಶವಾದ ಬೈಕಂಪಾಡಿ ವ್ಯಾಪ್ತಿಯಲ್ಲಿ ಬಾಲ್ಯಾವಸ್ಥೆ ಮತ್ತು ಕಿಶೋರಾವ್ಯಸ್ಥೆ ಅಡಿಯಲ್ಲಿ ಸರಕಾರದಿಂದ ಹೊಸದಾಗಿ ದೊರಕಿರುವ ಅನುದಾನದಲ್ಲಿ ವಸತಿ ಸಹಿತ ಶಾಲೆಯನ್ನು ನಿರ್ಮಿಸುವುದು ಉತ್ತಮ. ಆ ಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮಿಕರ ಮಕ್ಕಳನ್ನು ವಸತಿ ಶಾಲೆ ಸೇರುವಂತೆ ಪ್ರೇರೇಪಿಸಲು ಸೂಚಿಸಿದರು. ಒಂದು ವೇಳೆ ಇಂತಹ ಶಾಲೆಗಳಿಗೆ ಮಕ್ಕಳ ಕೊರತೆ ಇದ್ದಲ್ಲಿ ಹೊರ ಜಿಲ್ಲೆಗಳಿಂದ ಬರುವಂತಹ ಕಾರ್ಮಿಕರ ಮಕ್ಕಳನ್ನು ಕೂಡ ನೋಂದಣಿ ಮಾಡಬಹುದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದರು.

14 ಲಕ್ಷ ರೂ.ಅನುದಾನ ಬಿಡುಗಡೆ
ಸಹಾಯಕ ಕಾರ್ಮಿಕ ಆಯುಕ್ತರು ಕೆ.ಬಿ. ನಾಗರಾಜ್‌ ಮಾತನಾಡಿ, ಬಾಲ್ಯಾವಸ್ಥೆ, ಕಿಶೋರಾವಸ್ಥೆ ಕಾರ್ಮಿಕರಿಗೆ ವಿಶೇಷವಾದ ನೂತನ ವಸತಿ ಶಾಲೆಯನ್ನು ತೆರೆಯಲು 14 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ ಎಂದರು.

ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನ ಮಾಡಬೇಕು. ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಕಾರ್ಮಿಕರ ಮಕ್ಕಳಿಗೂ ಇತರ ಮಕ್ಕಳಂತೆ ಶಿಕ್ಷಣ ದೊರಕಬೇಕು ಸಮಾಜದಲ್ಲಿ ಉತ್ತಮ ಸ್ಥಾನಮಾನ ಲಭಿಸಬೇಕು ಎಂದರು.

Advertisement

2018-19ನೇ ಸಾಲಿನ ಖರ್ಚುವೆಚ್ಚ ಮತ್ತು ಲೆಕ್ಕ ಪರಿಶೋಧನ ವರದಿಯ ಬಗ್ಗೆ ಹಾಗೂ 2019-20ನೇ ಸಾಲಿನ ಕ್ರಿಯಾ ಯೋಜನೆ, ಅಂದಾಜು ಆಯವ್ಯಯವನ್ನು ಅನುಮೋದಿಸಿ ಸಲ್ಲಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಜೂ. 12ರಂದು ನಗರದ ಪುರಭವನದಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಹಮ್ಮಿಕೊಂಡಿದ್ದು, ಅಂದು ಬಾಲ ಕಾರ್ಮಿಕರ ಪದ್ಧತಿ ವಿರೋಧಿ ಕುರಿತು ಜನಜಾಗೃತಿ ಜಾಥಾ ಮತ್ತು ಬೀದಿನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಅಧಿಕಾರಿಗಳು, ಕಾರ್ಮಿಕ ಇಲಾಖೆ ಅಧಿಕಾರಿಗಳು, ಎನ್‌ಜಿಒಗಳು, ಬಾಲಕಾರ್ಮಿಕ ಯೋಜನ ಸಂಘದ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next