ಬೆಂಗಳೂರು: ಫ್ಲೆಕ್ಸ್ ತೆರವು ಕಾರ್ಯಾಚರಣೆಯಲ್ಲಿ ಪಾಲಿಕೆ ಅಧಿಕಾರಿಗಳ ಕರ್ತವ್ಯ ಲೋಪವನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಹಾನಗರ ಪಾಲಿಕೆ ಹೈಕೋರ್ಟ್ ಮತ್ತೂಮ್ಮೆ ಎಚ್ಚರಿಕೆ ನೀಡಿದೆ.
ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸೋಮವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ವಿಭಾಗೀಯ ಪೀಠ, ಪಾಲಿಕೆಗೆ ಈ ಸೂಚನೆ ನೀಡಿತು.
ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ರಸ್ತೆ ಹಾಗೂ ಎಂಟನೇ ಮೈಲಿ ರಸ್ತೆಯಲ್ಲಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್ ತೆರವು ಮಾಡದೇ ಇರಲು ಕಾರಣವೇನು ಪಾಲಿಕೆ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ, ಫ್ಲೆಕ್ಸ್‌ಗಳನ್ನು ತೆರವುಗೊಳಿಸದಿದ್ದರೆ ಅಧಿಕಾರಿಗಳನ್ನೇ ಹೊಣೆಯಾಗಿ ಮಾಡಬೇಕು.
ಈ ವಿಚಾರದಲ್ಲಿ ಶೇ.1ರಷ್ಟು ಕರ್ತವ್ಯ ಲೋಪವನ್ನು ಕೂಡ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿತು. ವಿಮಾನ ನಿಲ್ದಾಣ ರಸ್ತೆ ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ ಎಂಬ ವಕೀಲರ ಸ್ಪಷ್ಟನೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆ ಈ ಕುರಿತು ದಾಖಲೆಗಳೊಂದಿಗೆ ಸ್ಪಷ್ಟೀಕರಣ ನೀಡುವಂತೆ ತಾಕೀತು ಮಾಡಿತು.
ಅನಧಿಕೃತ ಫ್ಲೆಕ್ಸ್ ಅಳವಡಿಕೆ ಹಾಗೂ ಪಾಲಿಕೆ ಸಿಬ್ಬಂದಿ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದ 200 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 33 ಪ್ರಕರಣಗಳಲ್ಲಿ ಆರೋಪಿಗಳನ್ನು ಗುರ್ತಿಸಲಾಗಿದೆ. ಈ ಎಲ್ಲ ಪ್ರಕರಣಗಳನ್ನು ವಿಚಾರಣೆಗಾಗಿ 56 ಎಸಿಎಂಎಂ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿದ್ದಾರೆ. ಅರ್ಜಿ ವಿಚಾರಣೆಯನ್ನು ನ್ಯಾಯಪೀಠ ಮಂಗಳವಾರ ನಡೆಸಲಿದೆ.