Advertisement

ಮಳೆಯಿಂದ ಕಳೆಯದಿರಲಿ ನಗರದ ಕಳೆ

04:10 PM May 21, 2019 | pallavi |
ಬೆಳಗಾವಿ: ಮಳೆ ಬಂತೆಂದರೆ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಕಿರಿಕಿರಿಯಾಗುವುದು ಸಹಜ. ಪ್ರತಿ ವರ್ಷ ಅದೇ ರಾಗ ಅದೇ ಹಾಡು ಎಂಬ ಸ್ಥಿತಿ ಬೆಳಗಾವಿ ನಗರದಲ್ಲಿದೆ. ಈ ಬಾರಿ ಇಂಥ ಸಮಸ್ಯೆಯಿಂದ ಪಾರಾಗಲು ಮಹಾನಗರ ಪಾಲಿಕೆ ಕೆಲ ಸಿದ್ಧತೆಗಳನ್ನು ಮಾಡಿಕೊಂಡರೂ ಇದರಿಂದ ಎಷ್ಟರ ಮಟ್ಟಿಗೆ ತಪ್ಪಿಸಿಕೊಳ್ಳಬಹುದು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಬೆಳಗಾವಿ ಮಳೆ ಎಂದರೆ ಎಡಬಿಡದೇ ಸುರಿಯುವ ಜಲಧಾರೆ. ನಗರದಲ್ಲೂ ಅದರ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದರೆ ಈ ಮಳೆಗೆ ಇಡೀ ಬೆಳಗಾವಿ ನಗರವೇ ಬೆಚ್ಚಿ ಬೀಳುತ್ತದೆ. ಇಂಥ ಸ್ಥಿತಿಯಲ್ಲಿ ಮಳೆಯಿಂದ ನಗರದ ಕಳೆ ಕಳೆದು ಹೋಗದಿರಲಿ. ಹೀಗಾಗಿ ಮಳೆಯಿಂದ ಸಂಭವಿಸುವ ಅನಾಹುತ ತಡೆಯಲು ಸಂಬಂಧಿಸಿದ ಇಲಾಖೆಗಳು ಎಚ್ಚರ ವಹಿಸಿದರೆ ಮಾತ್ರ ಅಧಿಕಾರಿ ವರ್ಗಕ್ಕೆ ಹಿಡಿಶಾಪ ಹಾಕುವುದು ನಿಲ್ಲುತ್ತದೆ.

Advertisement

ಬೆಳಗಾವಿ ಮಹಾನಗರದಲ್ಲಿ ಉತ್ತರ ಹಾಗೂ ದಕ್ಷಿಣ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆಯಿಂದಾಗಿ ತೊಂದರೆ ಆಗದಂತೆ ವಿಪತ್ತು ನಿರ್ವಹಣಾ ತಂಡವನ್ನು ರಚಿಸಲಾಗಿದೆ. ಕಳೆದ 2-3 ವರ್ಷಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಾರ್ವಜನಿಕರಿಗೆ ಕಿರಿಕಿರಿ ಮಾಡುವ ಸ್ಥಳಗಳನ್ನು ಗುರುತಿಸಲಾಗಿದೆ. ಇಷ್ಟೆಲ್ಲ ತಯಾರಿ ಮಾಡಿಕೊಂಡರೂ ಹಾಗೂ ಯಾವುದೇ ಸಮಸ್ಯೆ ಆಗದಂತೆ ಪ್ರತಿ ವರ್ಷ ಸಿದ್ಧತೆ ಮಾಡಿಕೊಂಡರೂ ಪದೇ ಪದೇ ಸಮಸ್ಯೆಗಳು ಆಗುವುದಂತೂ ತಪ್ಪಿಲ್ಲ.

ಪಾಲಿಕೆಯ ನಿರ್ಲಕ್ಷ್ಯಕ್ಕೆ ರೋಸಿದ ಜನ: ಮಹಾನಗರ ಪಾಲಿಕೆಯ ಕೆಲಪ್ರದೇಶಗಳಲ್ಲಿ ಮಳೆಯಿಂದ ಸಿಕ್ಕಾಪಟ್ಟೆ ತೊಂದರೆ ಅನುಭವಿಸುವಂತಾಗಿದೆ. ಮಳೆ ಬಂದು ನೀರು ನಿಂತರೂ 2-3 ದಿನಗಳವರೆಗೆ ಸ್ಥಳೀಯರು ನೀರು ತೆಗೆಯುವುದರಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ಮನೆ ತುಂಬ ನೀರು ಸೇರಿಕೊಳ್ಳುವುದರಿಂದ ಅದನ್ನು ತೆಗೆಯುವುದೇ ಒಂದು ಸಾಹಸದ ಕೆಲಸ. ಪ್ರತಿ ವರ್ಷ ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಜನರು ಕಷ್ಟಪಡುತ್ತಿದ್ದಾರೆ.

ದಕ್ಷಿಣ ಮತ ಕ್ಷೇತ್ರದ ಶಾಸ್ತ್ರಿ ನಗರ, ಕಲಾ ಮಂದಿರ, ಉತ್ತರ ಕ್ಷೇತ್ರದ ಗಾಂಧಿ ನಗರ ಸೇರಿದಂತೆ ಸುತ್ತಲಿನ ತಗ್ಗು ಪ್ರದೇಶಗಳು ಮಳೆ ನೀರಿನಿಂದ ತುಂಬಿಕೊಳ್ಳುತ್ತವೆ. ಹೀಗಾಗಿ ಈ ವರ್ಷ ಮಹಾನಗರ ಪಾಲಿಕೆಯಿಂದ ಎರಡು ವಿಪತ್ತು ನಿರ್ವಹಣಾ ತಂಡವನ್ನು ರಚಿಸಲಾಗಿದ್ದು, ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ತಲಾ 10 ಜನರು ಈ ತಂಡದಲ್ಲಿ ಇರುತ್ತಾರೆ. ಜೂನ್‌ 1ರಿಂದ ನಗರದಲ್ಲಿ ಕ್ರಿಯಾಶೀಲವಾಗಲಿದ್ದು, ಮಳೆ ಬಂದಾಗ ಕಾರ್ಯೋನ್ಮುಖವಾಗುತ್ತವೆ. ಯಾವುದೇ ಸಮಸ್ಯೆ ಬಂದರೂ ಅದನ್ನು ಈ ತಂಡ ಸಮರ್ಪಕವಾಗಿ ಎದುರಿಸಲು ಸನ್ನದ್ಧವಾಗಿತರುತ್ತದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ನಾಲಾಗಳ ಸ್ವಚ್ಛತೆ: ಈಗಾಗಲೇ ನಗರ ವ್ಯಾಪ್ತಿಯ 10ಕ್ಕೂ ಹೆಚ್ಚು ನಾಲಾಗಳನ್ನು ಸ್ವಚ್ಛ ಮಾಡಲಾಗಿದೆ. ನಾಲಾ, ಕೆನಾಲ್ಗಳಲ್ಲಿಯ ಕಸ-ಕಡ್ಡಿ ಹೊರ ತೆಗೆದು ಸರಾಗವಾಗಿ ನೀರು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಯಾವುದೇ ನಾಲೆಯಲ್ಲೂ ನೀರು ಬ್ಲಾಕ್‌ ಆಗದಂತೆ ಮುಂಜಾಗ್ರತ ಕ್ರಮ ಕೈಗೊಂಡಿರುವ ಮಹಾನಗರ ಪಾಲಿಕೆ, ಎಲ್ಲೆಲ್ಲಿ ಹೆಚ್ಚು ನೀರು ನಿಂತು ತೊಂದರೆ ಕೊಡುತ್ತದೆಯೋ ಅಂಥ ಸ್ಥಳಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದೆ. ಈಗಾಗಲೇ ಎಲ್ಲ ನಾಲೆಗಳು ಸ್ವಚ್ಛಗೊಂಡಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಆರೋಗ್ಯಾಧಿಕಾರಿ ಡಾ| ಶಶಿಧರ ನಾಡಗೌಡ ತಿಳಿಸಿದ್ದಾರೆ.

Advertisement

ಮಳೆ-ಗಾಳಿಗೆ ನಗರದ ಬಹುತೇಕ ಗಿಡ-ಮರಗಳು, ವಿದ್ಯುತ್‌ ಕಂಬಗಳು ನೆಲಕ್ಕುರುಳುವುದು ಸಹಜ. ಈ ಹಿಂದೆ ಬಡಾವಣೆ, ಕಾಲೋನಿಗಳಲ್ಲಿಯ ಗಿಡ-ಮರಗಳು ಬಿದ್ದು ಅನಾಹುತಕ್ಕೆ ಕಾರಣವಾಗಿವೆ. ಕಳೆದ ಒಂದು ತಿಂಗಳ ಹಿಂದೆ ಸುರಿದ ಧಾರಾಕಾರ ಮಳೆ-ಗಾಳಿಯಿಂದ ಗಿಡಗಳು ವಾಹನ, ಮನೆ ಕಂಪೌಂಡ್‌, ರಸ್ತೆಗಳ ಮೆಲೆ ಬಿದ್ದು ತೊಂದರೆ ಉಂಟು ಮಾಡಿದ್ದವು. ಸ್ಥಳೀಯರು ಮಹಾನಗರ ಪಾಲಿಕೆ, ಅರಣ್ಯ ಇಲಾಖೆ ಹಾಗೂ ಹೆಸ್ಕಾಂಗೆ ದೂರು ನೀಡಿದ್ದರೂ ಇನ್ನೂ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಅಪಾಯ ತಂದೊಡ್ಡುವ ಅನೇಕ ಗಿಡ-ಮರಗಳು ನಗರದಲ್ಲಿದ್ದು, ಅವುಗಳನ್ನು ಗುರುತಿಸಿ ತೆರವು ಕಾರ್ಯಾಚರಣೆ ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ ಅರಣ್ಯ ಇಲಾಖೆಯವರು ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕೆಲವು ವಿದ್ಯುತ್‌ ಕಂಬಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಜೋರಾದ ಗಾಳಿ ಬೀಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಅಂಥ ಕಂಬಗಳನ್ನು ಬದಲಾಯಿಸಬೇಕಾಗಿದೆ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಕಂಬ, ತಂತಿಗಳನ್ನು ಗುರುತಿಸಿ, ಬದಲಿಸಿ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಮಳೆಗಾಲದಲ್ಲಿ ಸಮಸ್ಯೆ ಆಗದಂತೆ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದ ನಾಲೆಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಸಮಸ್ಯೆ ಬಂದರೂ ಎದುರಿಸಲು ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ.

• ಡಾ| ಶಶಿಧರ ನಾಡಗೌಡ, ಆರೋಗ್ಯಾಧಿಕಾರಿಗಳು

ಮಳೆಗಾಲದಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ತೊಂದರೆ ಆಗುವುದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅದರಂತೆ ಈಗಾಗಲೇ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

• ಅನಿಲ ಬೆನಕೆ, ಉತ್ತರ ಕ್ಷೇತ್ರದ ಶಾಸಕರು

•ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next