ಮೈಸೂರು: ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ ಎಂಬಂತೆ ಟಿಪ್ಪು ಸುಲ್ತಾನ್ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ಮೈಸೂರು ಸಿಟಿ ಮುಸ್ಲಿಂ ಫೋರಂ ವತಿಯಿಂದ ರಾಜೀವ ನಗರದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಮುಸ್ಲಿಂ ಸಮಾವೇಶದಲ್ಲಿ ಮಾತನಾಡಿದರು.
ಟಿಪ್ಪು ಸುಲ್ತಾನ್ ಹಾಗೂ ಆತನ ಜಯಂತಿ ಆಚರಣೆ ವಿಚಾರದಲ್ಲಿ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದ್ದು, ಇದರಿಂದ ಟಿಪ್ಪುವಿನ ವ್ಯಕ್ತಿತ್ವಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. ಹೀಗಾಗಿ ಟಿಪ್ಪು ಬಗ್ಗೆ ನೀಡುತ್ತಿರುವ ಹೇಳಿಕೆಗಳನ್ನು ನಿರ್ಲಕ್ಷಿಸುವುದೇ ಸೂಕ್ತ. ನಾಯಿ ಮನುಷ್ಯನನ್ನು ಕಡಿಯುತ್ತದೆ, ಮನುಷ್ಯ ನಾಯಿಯನ್ನು ಕಡಿಯಲ್ಲ ಎಂದು ಟೀಕಿಸಿದರು.
ಅಚ್ಛೇದಿನ್ ಕೊಡಲಿಲ್ಲ: ದೇಶದಲ್ಲಿ ಕಳೆದ 3 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಸಾಮಾನ್ಯ ಜನರಿಗೆ ಅಚ್ಛೇದಿನ್ ಕೊಡಲಿಲ್ಲ. ಬದಲಿಗೆ ಮೋದಿ ಸರ್ಕಾರದಲ್ಲಿ ಅಂಬಾನಿ, ಅದಾನಿಯಂತ ಶ್ರೀಮಂತರಿಗೆ ಮಾತ್ರ ಒಳ್ಳೆಯ ದಿನಗಳು ಬಂದಿವೆ. ಜಿಎಸ್‌ಟಿ ಜಾರಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ. ಸಣ್ಣ, ಮಧ್ಯಮ ವರ್ತಕರಿಗೆ ದೊಡ್ಡ ಮಟ್ಟದಲ್ಲಿ ಹಾನಿಯಾಗಿದ್ದು, ಇದೇ ಮೋದಿ ಸರ್ಕಾರದ ಸಾಧನೆ ಎಂದು ಕಿಡಿಕಾರಿದರು.
ಮುಸ್ಲಿಮರಿಗೆ ಭಯವಿಲ್ಲ: ದೇಶದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಂದೇ ತಾಯಿ ಮಕ್ಕಳಂತೆ ಬದುಕಬೇಕಿದೆ. ಆ ಮೂಲಕ ದೇಶ ಉಳಿಯಬೇಕಿದೆ. ಮುಸ್ಲಿಮರೂ ದೇಶವನ್ನು ಪ್ರೀತಿಸಲಿದ್ದು, ಇದನ್ನು ಉಳಿಸಿಕೊಳ್ಳಲು ಕೊನೆವರೆಗೆ ಹೋರಾಡುತ್ತೇವೆ. ಹೀಗಾಗಿ ಮುಸ್ಲಿಮರಿಗೆ ನರೇಂದ್ರ ಮೋದಿ ಅಥವಾ ಬಿಜೆಪಿ ಭಯವಿಲ್ಲ. ಅವರ ಆರ್ಭಟಕ್ಕೂ ಜಗ್ಗಲ್ಲ.
ಇನ್ನೂ ಬಿಜೆಪಿಯನ್ನು ಮಣಿಸಲು ಮುಸ್ಲಿಮರನ್ನು ಬಳಸಿಕೊಳ್ಳುತ್ತಿದ್ದು, ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ನಮಗೆ ಮತ ಹಾಕುವಂತೆ ಕೇಳುವ ಬಿಜೆಪಿ ನಾಯಕರು ಗೆದ್ದ ಮೇಲೆ ಕೆಲಸ ಮಾಡಿ ಎಂದರೆ ಒಡೆಯಲು ಬರುತ್ತಾರೆ. ಹೀಗಾಗಿ ಇವೆಲ್ಲದರ ಬಗ್ಗೆ ಜಾಗೃತಿ ಮೂಡಿಸಲು ಸಮಾವೇಶ ಆಯೋಜಿಸಲಾಗಿದೆ ಎಂದರು.