ಕಲಬುರಗಿ: ನೀವೆಲ್ಲವೂ (ಪೌರಕಾರ್ಮಿಕರು) ಸ್ವತ್ಛತೆ ರಾಯಭಾರಿಗಳು. ಸಮಾಜದಲ್ಲಿನ ಕಟ್ಟಕಡೆಯ ಕೆಲಸವನ್ನು ನೀವು ಮಾಡುತ್ತಿರುವಿರಿ. ಅದರಂತೆ ನಿಮ್ಮ ಮಕ್ಕಳನ್ನು ಇಂತಹ ಕೂಪಕ್ಕೆ ತಳ್ಳಬೇಡಿ. ಅವರನ್ನು ಸ್ಕ್ಯಾವೆಂಜರ್ ಮಾಡ್ಬೇಡಿ ಎಂದು ರಾಷ್ಟ್ರೀಯ ಸಪಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಮನವಿ ಮಾಡಿದರು.
ಮಹಾನಗರ ಪಾಲಿಕೆ ಟೌನ್‌ಹಾಲ್ ನಲ್ಲಿ ಸಫಾಯಿ ಕರ್ಮಚಾರಿಗಳೊಂದಿಗೆ ಶುಕ್ರವಾರ ಮಧ್ಯಾಹ್ನ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರು ತಮ್ಮ ಮಕ್ಕಳನ್ನು ಅದೇ ವೃತ್ತಿಗೆ ತಳ್ಳದೆ ಸರ್ಕಾರದ ಸವಲತ್ತು ಉಪಯೋಗಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮುಂದಿನ ಪೀಳಿಗೆಯಾದರೂ ಈ ಶೌಚಗುಂಡಿಗಳಿಂದ ಎದ್ದು ಮುಖ್ಯ ವಾಹಿನಿಗೆ ಬರಲು
ಶ್ರಮಿಸಬೇಕು ಎಂದರು.
ಕಾಯಂಗೆ ಪ್ರಯತ್ನ: ಈಗಾಗಲೇ ರಾಜ್ಯ ಸರಕಾರ 11ಸಾವಿರ ಕಾರ್ಮಿಕರನ್ನು ಕಾಯಂ ಮಾಡಲು ಸರ್ಕಾರ ತೀರ್ಮಾನಿಸಿದೆ. ಇನ್ನುಳಿದ ಗುತ್ತಿಗೆ ಕಾರ್ಮಿಕರನ್ನು ಕೂಡ ಕಾಯಂ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪೌರ ಕಾರ್ಮಿಕರು ಮತ್ತು ಅವರಅವಲಂಭಿತರು ಸ್ವ-ಇಚ್ಚೆಯಂತೆ ಸ್ವಯಂ ಉದ್ಯೋಗ ಮಾಡಲು ಮುಂದೆ ಬಂದಲ್ಲಿ ಅಂತಹವರಿಗೆ ಕೇಂದ್ರ ಸರ್ಕಾರದಿಂದ 10,000 ರೂ. ಗಳಿಂದ 25 ಲಕ್ಷ ರೂ. ವರೆಗೆ ಸಾಲ ನೀಡಲಾಗುತ್ತಿದೆ. ಹೀಗಾಗಿ ಪೌರ ಕಾರ್ಮಿಕರ ಮಕ್ಕಳಿಗೆ ಉನ್ನತ ವಿಧ್ಯಾಭಾಸ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು ತಿಳಿವಳಿಕೆ ನೀಡುವ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ, ಪೌರ ಕಾರ್ಮಿಕರಿಗೆ ಮತ್ತು ಅವಲಂಬಿತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳ ಬಗ್ಗೆ ಸ್ಥಳೀಯ ಸಂಸ್ಥೆಗಳಿಂದ ಮಾಹಿತಿ ನೀಡುವ ಕಾರ್ಯಾಗಾರ ಏರ್ಪಡಿಸುವಂತೆ ಪಾಲಿಕೆ ಆಯುಕ್ತರಿಗೆ ತಿಳಿಸಿದರು.
ಪಾಲಿಕೆ ಆಯುಕ್ತ ಪಿ.ಸುನೀಲಕುಮಾರ ಮಾತನಾಡಿ, ನಮ್ಮಲ್ಲಿ ಪೌರ ಕಾರ್ಮಿಕರ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಲಾಗಿದೆ. ಆರೋಗ್ಯ ತಪಾಸಣೆ ಮಾಡಲಾಗಿದೆ. ಕೆಲಸದ ಸಮಯದಲ್ಲಿ ನೀಡಲಾಗುವ ಬೂಟು, ಹ್ಯಾಂಡ್ ಗ್ಲೌಸ್, ಮಾಸ್ಕ್ ಸೇರಿದಂತೆ ಇನ್ನಿತರ ರಕ್ಷಾ ಕವಚ ನೀಡಲಾಗುತ್ತಿದೆ. 200 ಕಾಯಂ ಪೌರ ಕಾರ್ಮಿಕರಿಗೆ ಜಿ+2 ಫ್ಲ್ಯಾಟ್‌ನಲ್ಲಿ ಮನೆ ನೀಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.13 ಜನ ಪೌರ ಕಾರ್ಮಿಕರು ಸಿಂಗಾಪುರಕ್ಕೆ ಹೋಗುತ್ತಿದ್ದಾರೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ಪರಶುರಾಮ ನಸಲವಾಯಿ, ಪಾಲಿಕೆ ಅಧಿಕಾರಿ-ಸಿಬ್ಬಂದಿ ವರ್ಗ ಮತ್ತು ನೂರಾರು ಸಂಖ್ಯೆಯಲ್ಲಿ ಪೌರ ಕಾರ್ಮಿಕರು ಇದ್ದರು.