ವಾಡಿ: ಕಾರ್ಮಿಕರು ರಕ್ತ-ಬೆವರು ಒಂದುಮಾಡಿ ಕಾರ್ಖಾನೆಗಳ ಉತ್ಪಾದನೆ ಹೆಚ್ಚಿಸುತ್ತಾರೆ. ಮಾಲೀಕರಿಗೆ ಲಾಭದ ಉಡುಗೊರೆ ನೀಡುತ್ತಾರೆ. ಆದರೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ತಿಂಗಳ ಸಂಬಳ ಮಾತ್ರ ಹೆಚ್ಚಾಗಿಲ್ಲ. ಹೀಗಾದರೆ ಕಾರ್ಮಿಕರು ಬದುಕೋದು ಹೇಗೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎಸ್. ಪಾಟಕಿ ಪ್ರಶ್ನಿಸಿದರು.
ಪಟ್ಟಣದ ಎಸಿಸಿ ಕಾರ್ಖಾನೆಯ ಕಾರ್ಮಿಕ ಸಂಘ ಎಐಟಿಯುಸಿ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಕಾರ್ಮಿಕ ದಿನಾಚರಣೆಯ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಯಂತ್ರಗಳ ಬಾಯಿಗೆ ಬದುಕು ಕೊಟ್ಟು ಬಸವಳಿಯುವ ಕಾರ್ಮಿಕರಿಗೆ ಪಿಎಫ್, ಬೋನಸ್ ಸೌಲಭ್ಯ ಸಿಗುತ್ತಿಲ್ಲ. ಕಾರ್ಮಿಕರ ಎಲ್ಲ ಹಕ್ಕುಗಳನ್ನು ಸರ್ಕಾರ ಕಿತ್ತುಕೊಂಡಿದೆ. ಮೊದಲಿನಂತೆ ಕಾರ್ಮಿಕರು ಕಾರ್ಖಾನೆಗಳ ಮಾಲೀಕರ ವಿರುದ್ಧ ಹೋರಾಡದಂತ ಪರಿಸ್ಥಿತಿ ತಂದಿಟ್ಟಿದ್ದಾರೆ. ಈಗೇನಿದ್ದರೂ ಕಾರ್ಮಿಕರು ಮತ್ತು ಕಂಪನಿ ಆಡಳಿತ ಮಂಡಳಿಯವರು ಶಾಂತಿ-ಸಂಧಾನಗಳಿಂದಲೇ ಬೇಡಿಕೆ ಈಡೇರಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಸಿಸಿ ಸಿಮೆಂಟ್ ಕಾರ್ಖಾನೆಯ ಎಚ್‌ಆರ್ ಮುಖ್ಯಸ್ಥ ಟಿ.ನಾಗೇಶ್ವರರಾವ್ ಮಾತನಾಡಿ, ಭಾರತ ಸ್ವಾತಂತ್ರವಾಗಲು ಎಷ್ಟು ಜನರು ಜೀವ ಬಲಿಕೊಟ್ಟು ಹುತಾತ್ಮರಾದರೋ ಅಷ್ಟೇ ಪ್ರಮಾಣದಲ್ಲಿ ದುಡುಮೆಯ ಹಕ್ಕುಗಳಿಗಾಗಿ ಹೋರಾಡುತ್ತಲೇ ಚಿಕಾಗೋ ನಗರದಲ್ಲಿ ಮೇ 1ರಂದು ಕಾರ್ಮಿಕರು ಪ್ರಾಣ ಬಿಟ್ಟಿದ್ದಾರೆ. ಆದರೆ ಈಗ ಕಾಲ ಬದಲಾಗಿದೆ. ಸಂಘಟನೆಗಳ ಹೋರಾಟಗಳೂ ಬದಲಾಗಬೇಕಿದೆ. ಹೋರಾಟಗಾರರ ಯೋಚನೆಗಳೂ ಬದಲಾಗಬೇಕು. ಕಾರ್ಖಾನೆ ಆಡಳಿತ ಮಂಡಳಿ ಮತ್ತು ಯೂನಿಯನ್ ಪದಾಧಿಕಾರಿಗಳ ಮಧ್ಯೆ ಹೊಂದಾಣಿಕೆ ಇದ್ದರೆ ಮಾತ್ರ ಸಂಬಂದ ಉಳಿಯುತ್ತದೆ. ಕಂಪನಿಯನ್ನು ತಾಯಿಗೆ ಹೋಲಿಸಿದ್ದಿರಿ. ಅನಗತ್ಯ ಬೇಡಿಕೆಗಳ ಹಠಕ್ಕೆ ಬಿದ್ದು ಮಕ್ಕಳು (ಕಾರ್ಮಿಕರು) ಕಾದಾಡಿದರೆ ತಾಯಿ ಶಿಕ್ಷೆ ನೀಡಲು ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಸಿದರು.
ಎಸಿಸಿ ಅಧಿಕಾರಿಗಳಾದ ಜೆ.ಪಿ. ಜೈನ್, ಡಾ| ಲಕ್ಷ್ಮಣ, ಸಂತೋಷ ಕುಲಕರ್ಣಿ, ಯತೀಶ ರಾಜಶೇಖರ, ಎಐಟಿಯುಸಿ ಉಪಾಧ್ಯಕ್ಷ ರಮೇಶ ಕಾರಬಾರಿ, ಪ್ರಧಾನ ಕಾರ್ಯದರ್ಶಿ ಶಾಮಸನ್ ಐಜೀಯಾ, ಕಾರ್ಮಿಕ ಮುಖಂಡರಾದ ಶಿವರಾಮ ಪವಾರ, ತುಕಾರಾಮ ರಾಠೊಡ, ವಿಶಾಲ ನಂದೂರಕರ, ಮಹ್ಮದ್ ಮನ್ಸೂರ್ ಅಲಿ, ವಿರೂಪಾಕ್ಷಿ ಪ್ಯಾಟಿ, ಮಹ್ಮದ್ ಖಾಸಿಮ್, ಪ್ರೇಮನಾಥ ದಿವಾಕರ, ಮಹ್ಮದ್ ಫಯಾಜ್, ಇಕ್ಬಾಲ್ ಆಜಾದ್, ಶರಣಬಸು ಸಿರೂರಕರ, ಬಸವರಾಜ ನಾಟೀಕಾರ, ಭಾಗಣ್ಣ ಬಿ.ದೊರೆ, ಶ್ಯಾಮ ಹೇರೂರ, ರೇವಪ್ಪ ಅಣಕಲ್, ಮಹಾದೇವ ಪಾನಗಾಂವ, ಸುಭಾಷ ಸನಬಲ್ ಹಾಗೂ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು. ಪಿ.ಕೃಷ್ಟೋಪರ್ ನಿರೂಪಿಸಿ, ವಂದಿಸಿದರು.
ಕಾರ್ಮಿಕರು ಎಸಿಸಿ ಕಂಪನಿಗೆ ಸಹಕಾರ ನೀಡಿದರೆ ಇನ್ನೊಂದು ಸಿಮೆಂಟ್ ಘಟಕ ಸ್ಥಾಪನೆಯಾಗುವ ಸಾಧ್ಯತೆಯಿದೆ. ಈ ಕುರಿತು ಚಿಂತನೆ ನಡೆದಿದ್ದು, ಅಂದುಕೊಂಡಂತಾದರೆ ಉದ್ಯೋಗ ಸೃಷ್ಟಿಯಾಗುವ ಮೂಲಕ ಕಾರ್ಮಿಕರ ಬದುಕು ಹಸಿರಾಗಲಿದೆ. ಕಂಪನಿ ಎದುರು ಬೇಡಿಕೆ ಇಡಲು ಅಭ್ಯಂತರವಿಲ್ಲ. ಆದರೆ ಕೆಲಸ ಆಗಲೇಬೇಕು ಎಂಬ ಜಿದ್ದು ಬೇಡ. ಜಿದ್ದು ಮಾಡಿದರೂ ಅದು ಆರೋಗ್ಯಕರವಾಗಿರಬೇಕು.
-ರಾಘವೇಂದ್ರರಾವ್ ಜಾಗಿರದಾರ, ಎಸಿಸಿ ಘಟಕದ ಮುಖ್ಯಸ್ಥ
ಶಹಾಬಾದ ಸಿಮೆಂಟ್ ಕಾರ್ಖಾನೆ ಮುಚ್ಚಲು ಕಾರ್ಮಿಕರು ಕಾರಣರಲ್ಲ. ಅಲ್ಲಿನ ಕೆಲ ನಾಯಕರು ಕಂಪನಿ ಮಾರುವಷ್ಟರಮಟ್ಟಿಗೆ ತೊಂದರೆ ನೀಡಿದರು. ಹೋರಾಟದ ದಾರಿ ತಪ್ಪಿದ ಪರಿಣಾಮ ಕಂಪನಿ ಮುಚ್ಚಿ ಕಾರ್ಮಿಕರು ಬೀದಿಗೆ ಬೀಳುವಂತಾಯಿತು. 22 ವರ್ಷದ ಹಿಂದೆ ಬಿದ್ದ ಹೊಡೆತಕ್ಕೆ ಕಾರ್ಮಿಕರು ಈಗಲೂ ನೋವು ಪಡುತ್ತಿದ್ದಾರೆ. ಈಗಿನ ಜೆಪಿ ಕಂಪನಿ ಕೂಡ ಕಾರ್ಮಿಕರ ಬದುಕು ಕಟ್ಟುತ್ತಿಲ್ಲ. ಇದು ವಾಡಿ ಎಸಿಸಿ ಕಾರ್ಮಿಕರಿಗೆ ಎಚ್ಚರಿಕೆ ಗಂಟೆಯಾಗಿದ್ದು, ಕಾರ್ಖಾನೆಯೊಂದಿಗೆ ಸಹಕಾರ ಮನೋಭಾವನೆಯಿಂದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸಬೇಕು. ದುಡಿತದ ಹಣ ಕುಡಿತಕ್ಕೆ ಹಾಕಿ ಹಾಳಾಗಬೇಡಿ.
-ಮಹ್ಮದ್ ಉಬೇದುಲ್ಲಾ, ಅಧ್ಯಕ್ಷ, ಎಐಟಿಯುಸಿ, ಜೆಪಿ ಕಾರ್ಖಾನೆ, ಶಹಾಬಾದ