Advertisement

ಬೇರೆ ಆಸತ್ರೆಗೆ ರೋಗಿಗಳ ಶಿಫಾರಸು ಬೇಡ

11:08 AM Sep 08, 2018 | Team Udayavani |

ಬಸವಕಲ್ಯಾಣ: ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರು ರೋಗಿಗಳನ್ನು ಕಟುಂಬದ ಸದಸ್ಯರಂತೆ ಕಾಣಬೇಕು. ಇದರಿಂದ ತುರ್ತು ಪರಿಸ್ಥಿತಿ ಎದುರಾದಾಗ ರೋಗಿಗಳ ಪ್ರಾಣ ಉಳಿಸಲು ಸಹಾಯವಾಗುತ್ತದೆ ಎಂದು ಶಾಸಕ ಬಿ.ನಾರಾಯಣರಾವ್‌ ಹೇಳಿದರು.

Advertisement

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಎದುರಾದಾಗ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಜಿಲ್ಲಾ ಆಸ್ಪತ್ರೆ ಶಿಫಾರಸ್ಸು ಮಾಡುವುದು, ಜಿಲ್ಲಾ ಆಸ್ಪತ್ರೆ ವ್ಯದ್ಯರು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುವುದು ಸರಿಯಲ್ಲ ಎಂದರು. 

ರೋಗಿಗಳನ್ನು ಬೇರೆ ಕಡೆಗೆ ಒಯ್ಯುವಾಗ ರಸ್ತೆ ಮಧ್ಯದಲ್ಲೇ ಪ್ರಾಣ ಹೋಗಿರುವ ಎಷ್ಟೋ ಘಟನೆಗಳು ಕೂಡ ನಡೆದಿವೆ. ಆದ್ದರಿಂದ ವೈದ್ಯರು ಜವಾಬ್ದಾರಿ ತೆಗೆದು ಕೊಂಡು ಕೆಲಸ ಮಾಡಬೇಕು. ಅದಕ್ಕೆ ಬೇಕಾದ ಸಹಕಾರ ಮತ್ತು ಸೌಲತ್ತುಗಳನ್ನು ಸರಕಾರದಿಂದ ನಾವು ಒದಗಿಸಿ ಕೊಡುತ್ತೇವೆ ಎಂದರು.

ಹುಲಸೂರು ಮತ್ತು ಮಂಠಾಳ ಪಟ್ಟಣ ಪಂಚಾಯಿತಿ ಆಗುವ ಗ್ರಾಮಗಳಾಗಿವೆ. ಹಾಗಾಗಿ ಒಂದು ತಿಂಗಳೊಳಗೆ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು. ಆಶಾ ಕಾರ್ಯಕರ್ತರು, ಎನ್‌ ಎಂ ಕಾರ್ಯಕರ್ತೆಯರನ್ನು ಯಾವ ಉದ್ದೇಶಕ್ಕಾಗಿ ಆಯ್ಕೆ ಮಾಡಿಕೊಳ್ಳಳಾಗಿದೆ ಎಂಬುದನ್ನು ತಿಳಿದು ಅವರ ಸದುಪಯೋಗ ಪಡೆಯಬೇಕು ಎಂದು ಸ್ಥಳದಲ್ಲಿದ್ದ ತಾಲೂಕು ಆರೋಗ್ಯ ಅಧಿಕಾರಿಗೆ ಸೂಚನೆ ನೀಡಿದರು.

ತಾಪಂ ಅಧ್ಯಕ್ಷೆ ಯಶೋಧಾ ರಾಠೊಡ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುತ್ತಿರುವ ಆಹಾರ ಪದಾರ್ಥಗಳು ಗುಣಮಟ್ಟದಿಂದ ಕೂಡಿರಬೇಕು. ಇಲ್ಲದಿದ್ದರೆ ವಾಪಸ್‌ ಕಳುಹಿಸಬೇಕು ಎಂದು ಸಂಬಂಧ ಪಟ್ಟ
ಅಧಿಕಾರಿ ಇಲಾಖೆ ಕುರಿತು ಮಾಹಿತಿ ನಿಡುತ್ತಿರುವಾಗ ಮಧ್ಯ ಪ್ರವೇಶಿಸಿ ಆದೇಶ ನೀಡಿದರು.

Advertisement

ಎಇಇ ರಾಜಕುಮಾರ ಮಾತನಾಡಿ, ಎಸ್‌ಕೆಆರ್‌ ಡಿಬಿ, ನಬಾರ್ಡ್‌ ಮತ್ತು ಜಿಲ್ಲಾ ಪಂಚಾಯಿತಿ ಸೇರಿದಂತೆ ಏಳು ಇಲಾಖೆಯಿಂದ ಒಟ್ಟು 195 ಕಾಮಗಾರಿ ಆರಂಭಿಸಲಾಗಿದೆ. ಅದರಲ್ಲಿ ಕೆಲವು ಮುಗಿದಿವೆ. ಮತ್ತೆ ಕೆಲವು ಪ್ರಗತಿ ಹಂತದಲ್ಲಿದ್ದು, ಅವನ್ನು ಕೂಡ ಶೀಘ್ರವಾಗಿ ಮುಗಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ನಂತರ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ವಲಯ ಇಲಾಖೆ, ಪಶು ಸಂಗೋಪನಾ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಆಗಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಇಒ ವಿಜಯಕುಮಾರ ಮಡ್ಡೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಬೆರಳೆಣಿಕೆಯಷ್ಟು ಅಧಿಕಾರಿಗಳು ಭಾಗಿ ತಾಲೂಕಿನಲ್ಲಿ ಅಂದಾಜು 40ಕ್ಕೂ ಹೆಚ್ಚು ವಿವಿಧ ಇಲಾಖೆಗಳಿವೆ. ಆದರೆ ಕೆಡಿಪಿ ಸಭೆಯಲ್ಲಿ ಬೆರಳೆಣಿಯಷ್ಟು ಅಧಿಕಾರಿಗಳು ಮಾತ್ರ ಭಾಗವಹಿಸಿದ್ದರು. ಕೆಲವರು ಕಚೇರಿ ಸಿಬ್ಬಂದಿಗಳನ್ನು ಕಳುಹಿಸಿದ್ದರು. ಆದರೆ ಶಾಸಕ ಬಿ.ನಾರಾಣರಾವ್‌ ಅಧಿಕಾರಿಗಳ ಪರವಾಗಿ ಬಂದವರನ್ನು ಸಭೆಯಿಂದ ಹೊರಗೆ ಕಳುಹಿಸಿದರು.

ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಕೆಲಸಗಳನ್ನು ಚುರುಕಾಗಿ ಮಾಡುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರವಾಗಿ ಮುಗಿಸಬೇಕು. ವಿಶೇಷವಾಗಿ ಅ.2ರ ಒಳಗೆ ಬಸವಕಲ್ಯಾಣ ಕ್ಷೇತ್ರವನ್ನು ಬಯಲು
ಶೌಚ ಮುಕ್ತ ಘೋಷಣೆಗೆ ಪ್ರಯತ್ನಿಸಬೇಕು ಎಂದು ಸೂಚಿಸಿದರು.  ಬಿ.ನಾರಾಯಣರಾವ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next