Advertisement

ಪಾತಾಳ ಗಂಗೆ ಯೋಜನೆ ಬೇಡ

05:00 PM May 19, 2017 | Team Udayavani |

ಕಲಬುರಗಿ: ಪಾತಾಳಗಂಗೆ (ನೆಲದಾಳದ ನೀರು) ಹೆಕ್ಕಿ ಮೇಲೆತ್ತಿ ಪೂರೈಕೆ ಮಾಡುವ ಸರಕಾರದ ನಿರ್ಧಾರ ಖಂಡಿಸಿರುವ ವಿವಿಧ ಸಂಘಟನೆಗಳು, ಸರಕಾರ ಈ ಪ್ರಯತ್ನದಿಂದ ಕೂಡಲೇ ಹಿಂದೆ ಸರಿಯಬೇಕು ಎಂದು ಗುರುವಾರ ನಗರದಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ತೀರ್ಮಾನಿಸಿದವು. ಅಲ್ಲದೆ, ಇಂತಹ ನೀರು ಮೇಲೆತ್ತುವುದರಿಂದ ಭೂಕಂಪನದ ಸಾಧ್ಯತೆ, ವಿಕಿರಣ ಹೊಮ್ಮಿ ಮನುಷ್ಯರಿಗೂ ಹಾನಿಯಾಗಲಿದೆ. 

Advertisement

ಪರಿಸರಕ್ಕೂ ಭಾರಿ ಹಾನಿಯಾಗುವುದು ದಿಟ. ಈಗಾಗಲೇ ಬೆಂಗಳೂರಿನಲ್ಲಿ ಸಚಿವ ಎಚ್‌. ಕೆ. ಪಾಟೀಲ ಅವರು ನಡೆಸಿರುವ ಸಭೆಯಲ್ಲಿ ಪರಿಸರವಾದಿಗಳು, ವಿಜ್ಞಾನಿಗಳು ಕೂಡ ಇದನ್ನು ವಿರೋಧಿಸಿದ್ದಾರೆ.  ಇದೆಲ್ಲವನ್ನು ನಿರ್ಲಕ್ಷé ಮಾಡಿ ಪಾಟೀಲರು ಮತ್ತು ಸರಕಾರ ಮುಂದಡಿ ಇಟ್ಟರೆ ದೊಡ್ಡ ಮಟ್ಟದಲ್ಲಿ ಜನಾಂದೋಲನ ರೂಪಿಸಲು ಕೂಡ ನಿರ್ಣಯ ಕೈಗೊಳ್ಳಲಾಯಿತು.

ನಗರದ ಸೂಪರ್‌ ಮಾರ್ಕೆಟ್‌ನಲ್ಲಿರುವ ಎಂಪಿಎಚ್‌ಎಸ್‌ ಕಾಲೇಜಿನ ಆವರಣದಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎಫ್‌.ಸಿ. ಚೇಗರೆಡ್ಡಿ, ಜಂಟಿ ಕಾರ್ಯದರ್ಶಿ ಮುರುಗೇಶ ಕರಕಿಕಟ್ಟಿ, ಅಖೀಲ ಭಾರತ ಪೀಪಲ್ಸ್‌ ಸೈನ್ಸ್‌ ನೆಟ್‌ವರ್ಕ್‌ ಕಾರ್ಯಕಾರಿ ಸಮಿತಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸುಭಂಕರ ಚಕ್ರವರ್ತಿ ಸಮ್ಮುಖದಲ್ಲಿ ನಿರ್ಣಯ ಕೈಗೊಳ್ಳಲಾಯಿತು. 

ಸರಕಾರ ಪ್ರಾಯೋಗಿಕವಾಗಿ ವಿಜಯಪುರದ ಇಂಡಿ ಮತ್ತು ಕಲಬುರಗಿ ಆಳಂದ ತಾಲೂಕಿನಲ್ಲಿ ಭೂಮಿ ಅಡಿಯಲ್ಲಿರುವ ಪಾತಾಳ ಗಂಗೆ ಹೊರ ತೆಗೆಯಲು ಮುಂದಾಗಿರುವುದು ಸರಿಯಲ್ಲ ಎಂದು ಸಭೆಯಲ್ಲಿ ಒಕ್ಕೂರಲಿನಿಂದ  ಆಕ್ಷೇಪ ವ್ಯಕ್ತವಾಯಿತು. ಪಾತಾಳ ಗಂಗೆ ಯೋಜನೆಯ ಪ್ರತಿ ಬಾವಿ ಕೊರೆಯಲು ಗರಿಷ್ಠ 12.48 ಕೋಟಿ ರೂ. ವೆಚ್ಚವಾಗಲಿದೆ. ವಿಷಾನಿಲ ಸೋರಿಕೆಯಾಗುವ ಸಾಧ್ಯತೆ ಇದೆ. 

ಇದರಿಂದ ಭೂಕಂಪ ಸೇರಿದಂತೆ ನೈಸರ್ಗಿಕ ವಿಕೋಪಗಳು ಸಹ ಸಂಭವಿಸಲಿವೆ. ಆದ್ದರಿಂದ ಯೋಜನೆ ಕೈಬಿಡುವಂತೆ ಸರಕಾರ ಸೂಚಿಸಲು ಒಂದು ವೇಳೆ ಸರಕಾರ ಮೊಂಡುತನ ತೋರಿದರೆ ಜನಾಂದೋಲ ರೂಪಿಸಲು ನಿರ್ಣಯಿಸಲಾಯಿತು. ಇಂಡಿ ಹಾಗೂ ಆಳಂದ ತಾಲೂಕುಗಳು ಖುಷ್ಕಿ ಜಮೀನುಗಳು. ಅಲ್ಲಿ ಮಳೆ ಬೀಳುತ್ತದೆ. ಅಂತರ ಜಲ ಮಟ್ಟ ಹೆಚ್ಚಿಸಲು ಮುಂದಾಗಬೇಕು.

Advertisement

ಗೋಕಟ್ಟಾ ನಿರ್ಮಾಣ, ಕೆರೆ ಹೂಳೆತ್ತುವುದು. ಹೆಚ್ಚುವರಿ ಮಳೆ ನೀರು ಸಂಗ್ರಹಿಸುವುದು ಮುಂತಾದ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಅಪಾಯಕಾರಿ ಪಾತಾಳ ಗಂಗೆ ಯೋಜನೆ ಜಾರಿಗೆ ಸರ್ಕಾರ ಮುಂದಾಗಿರುವುದು ಸರಿಯಾದುದಲ್ಲ ಎಂದು ಸಭೆ ಅಭಿಪ್ರಾಯಪಟ್ಟಿತು. ಈಗಾಗಲೇ ದುಬೈ ಸೇರಿದಂತೆ ಹಲವಾರು ದೇಶಗಳಲ್ಲಿ ಪಾತಾಳ ಗಂಗೆಯಂತಹ ಯೋಜನೆಯನ್ನು ಈ ಹಿಂದೆಯೇ ಜಾರಿ ಮಾಡಲಾಗಿದೆ.

ಆ ಪ್ರಯತ್ನದಿಂದ ಕೊಳವೆ ಬಾವಿಗಳಲ್ಲಿ ನೀರಿಲ್ಲದೇ ಹಾಳಾಗಿವೆ ಹಾಗೂ ಅಲ್ಲಿನ ಪರಿಸರಕ್ಕೆ ಗಂಭೀರ ಹಾನಿಯಾಗಿದೆ. ಅಂತಹ ಅಪಾಯಕಾರಿ ಸ್ಥಿತಿ ರಾಜ್ಯಕ್ಕೆ ಬರಬಾರದು. ಕೂಡಲೇ ಯೋಜನೆ ರದ್ದುಪಡಿಸಬೇಕು ಎಂದು ಸಭೆ ಒತ್ತಾಯಿಸಿತು. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ, ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಲು ತೀರ್ಮಾನಿಸಿತು. 

ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನಾಗೇಂದ್ರಪ್ಪ ಅವರಾದಿ, ಜಿಲ್ಲಾಧ್ಯಕ್ಷ ಹಾಗೂ ಕಾಲೇಜಿನ ಪ್ರಿನ್ಸಿಪಾಲ ಶಿವಶರಣಪ್ಪ ಮೂಳೇಗಾಂವ, ಜಿಲ್ಲಾ ಸಮಿತಿ ಸದಸ್ಯ ಶ್ರೀಶೈಲ ಘೂಳಿ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ಸಮುದಾಯದ ಸದಸ್ಯ ಪ್ರೊ| ಆರ್‌. ಕೆ. ಹುಡಗಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ, 

ಪ್ರಗತಿಪರ ರೈತ ಬಾಬುರಾವ ಹಿರಮಶೆಟ್ಟಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಖಜಾಂಚಿ ಗಿರೀಶ ಕಡ್ಲೆàವಾಡ, ಶಿಕ್ಷಣ ತಜ್ಞ ಮಲ್ಲಿನಾಥ ಯಲಶೆಟ್ಟಿ, ಉಪನ್ಯಾಸಕ ನರಸಪ್ಪಾ ರಂಗೋಲಿ, ದಲಿತ ಸಂಘರ್ಷ ಸಮಿತಿ ಮುಖಂಡ ದತ್ತಾತ್ರೇಯ ಇಕ್ಕಳಕಿ ಮಾತನಾಡಿದರು. ಪ್ರೇಮಾನಂದ ಚಿಂಚೋಳಿ, ಡಾ| ಮಾರುತಿ ಮಾರ್ಪಳ್ಳಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next